ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದರೂ ಕೂಡ, ಇದು ರಾಜ್ಯ ಕಂಡ ಪ್ರಪ್ರಥಮ ಏಕಪಕ್ಷದ ಸಮ್ಮಿಶ್ರ ಸರ್ಕಾರವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರವನ್ನು ಬಿಜೆಪಿ ವ್ಯಂಗ್ಯವಾಡಿದೆ. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಶುರುವಾದ ಕಲೆಕ್ಷನ್ ದಂಧೆ ಈಗ ಕಾಂಗ್ರೆಸ್ ಪಕ್ಷದಲ್ಲೇ ಕದನ ಶುರು ಮಾಡಿದೆ. ಪರಿಣಾಮವಾಗಿ, ಡಿಸಿಎಂ ಡಿ.ಕೆ.ಶಿವಕುಮಾರ್ ಸದ್ಯದಲ್ಲೇ ಸಿದ್ದರಾಮಯ್ಯರವರನ್ನು ಇಳಿಸಿ ಮುಖ್ಯಮಂತ್ರಿ ಆಗುತ್ತಾರೆ ಎಂದು ಕಾಂಗ್ರೆಸ್ ಶಾಸಕರಿಂದಲೇ ಮಾಹಿತಿ ಬರುತ್ತಿದೆ. ಇನ್ನು ತಮ್ಮ ತಂದೆಯವರ ಪ್ರಭಾವ ಬಳಿಸಿ ಎಲ್ಲೆಲ್ಲೂ ತನ್ನದೇ ನಡೆಯಲಿ ಎನ್ನುತ್ತಿರುವ ಸಚಿವ ಪ್ರಿಯಾಂಕ್ ಖರ್ಗೆಯವರು ಮತ್ತೊಂದು ಕಡೆ ಪ್ರಯತ್ನ ನಡೆಸುತ್ತಿದ್ದಾರೆ.
ಇದರೊಂದಿಗೆ ಮೈಸೂರು ಪ್ರವಾಸದ ಪುಕಾರು ಹಬ್ಬಿಸಿ ಕೆಪಿಸಿಸಿ ಅಧ್ಯಕ್ಷರನ್ನೇ ಅಲುಗಾಡಿಸಿದ ಸತೀಶ್ ಜಾರಕಿಹೊಳಿಯವರು ಮಗದೊಂದು ಕಡೆಯಾಗಿದ್ದಾರೆ. ಇಷ್ಟು ಸಾಲದು ಎನ್ನುವಂತೆ ಈಗ ಕೆಲಸ ಬಿಟ್ಟು ವಿದೇಶಕ್ಕೆ ಹಾರಲು ಇತರ ಸನ್ಮಿತ್ರರು ಸಜ್ಜಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ಮೂಲಕ ಬಿಜೆಪಿ ಟೀಕಿಸಿದೆ.
ಕತ್ತಲಾದ ಮೇಲಷ್ಟೇ ಚರ್ಚಿಸಬಹುದಾದ ವಿಚಾರ ಮತ್ತು ಲೆಕ್ಕಾಚಾರಗಳ ಮಾತುಕತೆಗೆ "ಆಯ್ದ ಆಮಂತ್ರಿತರ ಡಿನ್ನರ್." ಹಣಕಾಸಿನ ಲೆಕ್ಕಾಚಾರಗಳಿರುವಾಗ ಭಿನ್ನಾಭಿಪ್ರಾಯ ಸಹಜ. ಕಲೆಕ್ಷನ್ ವ್ಯವಹಾರ ಬದಿಗಿಟ್ಟು ಹೊರರಾಜ್ಯ ಚುನಾವಣೆಗಳಿಗೆ ಫಂಡ್ ಕಳಿಸಲು ಅಸಾಧ್ಯ ಎಂಬುದನ್ನು ಹೈ ಕಮಾಂಡ್‌ಗೆ ತಿಳಿಸಿ. ರಾಜ್ಯ ಸರ್ಕಾರ ಸುಲಲಿತವಾಗಿ ನಡೆಯುತ್ತದೆ ಎಂದು ಬಿಜೆಪಿ ಸಲಹೆ ನೀಡಿದೆ.