ಕರ್ನಾಟಕ

karnataka

ETV Bharat / state

ಹಂಪಿ ವಿಶ್ವ ವಿದ್ಯಾಲಯದ ಹಗರಣಗಳ ತನಿಖೆಯಾಗಲಿ: ಸಿಎಂಗೆ ಪತ್ರ ಬರೆದ ಸಿದ್ದರಾಮಯ್ಯ - Siddaramaiah urges probe into Hampi university scam

ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ನೀಡುತ್ತಿದ್ದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನವನ್ನು 2-3 ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂಶೋಧನೆ, ಕಲಿಕೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳು ಕೇಳಿ ಬಂದಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಿಗೆ ಬರೆದ ಸುದೀರ್ಘ ಪತ್ರದಲ್ಲಿ ತಿಳಿಸಿದ್ದಾರೆ.

Bommai-siddaramiah
ಬೊಮ್ಮಾಯಿ-ಸಿದ್ದರಾಮಯ್ಯ

By

Published : Nov 25, 2021, 6:14 PM IST

ಬೆಂಗಳೂರು: ಹಂಪಿ ವಿಶ್ವವಿದ್ಯಾಲಯದಲ್ಲಿ ನಡೆದಿರುವ ಅಕ್ರಮಗಳ ತನಿಖೆ ನಡೆಸುವಂತೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಮುಖ್ಯಮಂತ್ರಿಗಳಿಗೆ ಸುದೀರ್ಘ ಪತ್ರ ಬರೆದಿರುವ ಅವರು, ಇಡೀ ದೇಶದ ವಿಶ್ವವಿದ್ಯಾಲಯಗಳಲ್ಲಿ ಸಂಶೋಧನೆಯ ಗುಣಮಟ್ಟ ಕುಸಿದು ಹೋಗುತ್ತಿದೆ ಎಂಬ ಗಂಭೀರ ಆರೋಪ ವಿದ್ವತ್ ವಲಯದಲ್ಲಿ ಕೇಳಿಬರುತ್ತಿದೆ. ಇದಕ್ಕೆ ಅಪವಾದವೆಂಬಂತೆ ಕನ್ನಡ ವಿಶ್ವವಿದ್ಯಾಲಯವು ಮೌಲ್ಯಯುತ ಸಂಶೋಧನಾ ಕೆಲಸಗಳನ್ನು ಮಾಡುತ್ತಿದೆ.

ಆದರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ಸೇರಿದಂತೆ ನಾಡಿನ ಎಲ್ಲ ವಿಶ್ವ ವಿದ್ಯಾಲಯಗಳಲ್ಲಿ ಗುಣಮಟ್ಟದ ನೇಮಕಾತಿಗಳು ನಡೆಯದ ಕಾರಣದಿಂದ ಉತ್ತಮ ವಿದ್ವಾಂಸರುಗಳು, ಬೋಧಕರು ಲಭ್ಯವಾಗುತ್ತಿಲ್ಲ. ಉನ್ನತ ಶಿಕ್ಷಣವು ತನ್ನ ಗುಣಮಟ್ಟವನ್ನು ಕಳೆದುಕೊಂಡರೆ, ನಾಡಿನ ಸಮಸ್ತ ವಿಭಾಗಗಳೂ ಕುಸಿದು ಬೀಳುತ್ತವೆ. ಉನ್ನತ ಶಿಕ್ಷಣ ಸರಿಯಾಗಿದ್ದರೆ ಮಾತ್ರ ಉತ್ತಮ ಪ್ರಾಥಮಿಕ, ಪ್ರೌಢ ಶಿಕ್ಷಣ ಸಿಗಲು ಸಾಧ್ಯ.

ಜ್ಞಾನವಂತ, ಸೂಕ್ಷ್ಮ ಮತ್ತು ಮಾನವೀಯ ಸಂವೇದನೆಯ ಸಮಾಜದ ನಿರ್ಮಾಣದಲ್ಲಿ ಉನ್ನತ ಶಿಕ್ಷಣದ ಪಾತ್ರ ಬಹಳ ದೊಡ್ಡದು. ಆದರೆ, ಇತ್ತೀಚಿನ ದಿನಗಳಲ್ಲಿ ಕನ್ನಡ ವಿಶ್ವವಿದ್ಯಾಲಯವು ಭ್ರಷ್ಟಾಚಾರ, ಕಮಿಷನ್ ದಂಧೆ ಮುಂತಾದ ಕೆಟ್ಟ ಕಾರಣಗಳಿಂದ ಸುದ್ಧಿಯಲ್ಲಿದೆ. ತೀವ್ರವಾದ ಹಗರಣಗಳ ಆರೋಪಗಳು ಈ ವಿಶ್ವವಿದ್ಯಾಲಯದ ಘನತೆಯನ್ನು ಗುಡಿಸಿ ಹಾಕುತ್ತಿವೆ ಎಂದು ವಿವರಿಸಿದ್ದಾರೆ.

ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಹಗರಣಗಳ ಕುರಿತು ಮಾಧ್ಯಮಗಳು ವರದಿ ಮಾಡುತ್ತಿವೆ. ಅದರಲ್ಲಿ ಮುಖ್ಯವಾಗಿ ;

1. ಇತ್ತೀಚೆಗೆ ವಿವಿಯಲ್ಲಿ ಕೆಲವು ಬೋಧಕ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪತ್ರಿಕೆಗಳ ಪ್ರಕಾರ, ಪ್ರತಿ ಹುದ್ದೆಗೆ 50 ಲಕ್ಷ ರೂಪಾಯಿಗಳನ್ನು ನಿಗದಿಪಡಿಸಿ, ಹರಾಜು ಮಾಡಲಾಗುತ್ತಿದೆಯೆಂದು ವರದಿ ಮಾಡಲಾಗಿದೆ.

ಸಿದ್ದರಾಮಯ್ಯ ಬರೆದ ಪತ್ರ

ಹಣ ಕೊಟ್ಟವರಿಗೆ ಪರೀಕ್ಷೆಗೆ ಮುನ್ನವೇ ಪ್ರಶ್ನೆ ಪತ್ರಿಕೆ ನೀಡಲಾಗುತ್ತಿದೆಯೆಂಬ ಗಂಭೀರ ಆರೋಪಗಳಿವೆಯೆಂದು ಪತ್ರಿಕೆ ವರದಿ ಮಾಡಿದೆ. ವಿಶ್ವವಿದ್ಯಾಲಯಗಳು ಹುದ್ದೆಗಳನ್ನು ಹರಾಜಿಗಿಟ್ಟರೆ ಬಡತನದ ಹಿನ್ನೆಲೆಗಳಿಂದ ಬರುವ ಪ್ರತಿಭಾವಂತರು ಆಯ್ಕೆಯಾಗಲು ಸಾಧ್ಯವೆ? ಪ್ರತಿಭಾವಂತರು ವಿವಿ ಗಳಲ್ಲಿ ಇಲ್ಲವಾದರೆ ಯಾವ ದೇಶವಾದರೂ ಉದ್ಧಾರವಾಗಲು ಸಾಧ್ಯವೆ? ಎಂದು ಪ್ರಶ್ನಿಸಿದ್ದಾರೆ.

2. ಕನ್ನಡ ವಿವಿಯು ವಿವಿಧ ಹುದ್ದೆಗಳನ್ನು ತುಂಬಿಸಲು ಹೊರಡಿಸಿರುವ ಅಧಿಸೂಚನೆಯಲ್ಲಿ ಮೀಸಲಾತಿ ನಿಯಮಗಳನ್ನು ಸಂಪೂರ್ಣ ಉಲ್ಲಂಘಿಸಲಾಗಿದೆ ಎಂಬ ಆರೋಪವಿದೆ. ಜೊತೆಗೆ ಹಿಂದೆ ನೇಮಕವಾದ ಬೋಧಕ, ಬೋಧಕೇತರ ಸಿಬ್ಬಂದಿ ಪ್ರೊಬೆಷನರಿ ಅವಧಿಯನ್ನು ಘೋಷಿಸಲೂ ಸಹ ಕಮಿಷನ್ ನಿಗಧಿಗೊಳಿಸಲಾಗಿದೆ ಮತ್ತು ವಿನಾಕಾರಣ ವಿಳಂಬ ಮಾಡಲಾಗುತ್ತಿದೆ ಎಂಬ ಆರೋಪಗಳಿವೆ.

ಆದ್ದರಿಂದ, ಕೂಡಲೇ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಿ ಈ ಕುರಿತು ತನಿಖೆ ನಡೆಸಿ‌ ತಪ್ಪಿತಸ್ಥರ ವಿರುದ್ಧ ಕ್ರಮವಹಿಸಬೇಕು. ರಾಜ್ಯದಲ್ಲಿರುವ ಪ್ರತಿಭಾವಂತರ ಪಟ್ಟಿಯನ್ನು ವಿಷಯವಾರು ತಯಾರಿಸಿ ಅವರುಗಳನ್ನು ಯುಜಿಸಿ ನಿಯಮಾವಳಿಗಳಂತೆ ವಿಶ್ವವಿದ್ಯಾಲಯಗಳಿಗೆ ಕರೆತರುವ ಕೆಲಸ ಮಾಡಬೇಕು.

3. ಕನ್ನಡ ವಿಶ್ವವಿದ್ಯಾಲಯದಲ್ಲಿ ಸಂಬಳ ನೀಡಲು, ಪಿಂಚಣಿ ನಿಗಧಿಪಡಿಸಲು, ಪಿಂಚಣಿ ಬಿಡುಗಡೆ ಮಾಡಲೂ ಕಮಿಷನ್ ನಿಗಧಿಗೊಳಿಸಲಾಗಿದೆ. ಕಮಿಷನ್ ನೀಡದೆ ಯಾವ ಕಡತಗಳಿಗೂ ಜೀವ ಬರುವುದಿಲ್ಲವೆಂದು ಪತ್ರಿಕೆಗಳಲ್ಲಿ ವರದಿಯಾಗಿದೆ.ಈ ಕುರಿತಂತೆ ವಿಶ್ವವಿದ್ಯಾಲಯದ ನಿವೃತ್ತ ಪ್ರೊಫೆಸರ್​ಗಳು ವಿಶ್ವ ವಿದ್ಯಾಲಯದಲ್ಲಿ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.

ಸಿದ್ದರಾಮಯ್ಯ ಬರೆದ ಪತ್ರ

4. ನಿವೃತ್ತರಾದ ಕೆಲವು ಪ್ರೊಫೆಸರ್​ಗಳ ಪಿಂಚಣಿಯನ್ನು ನಿಗಧಿಪಡಿಸದೆ ಏಳೆಂಟು ತಿಂಗಳಿಂದ ಅವರು ಜೀವನ ನಿರ್ವವಹಿಸಲಾರದೆ ಒದ್ದಾಡುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿವೆ ಎಂದಿದ್ದಾರೆ.

5. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳೂ ನೀಡುತ್ತಿದ್ದ ಪ್ರೋತ್ಸಾಹ ಧನ, ವಿದ್ಯಾರ್ಥಿ ವೇತನವನ್ನು 2-3 ವರ್ಷಗಳಿಂದ ನಿಲ್ಲಿಸಲಾಗಿದೆ. ಇದರಿಂದ ವಿದ್ಯಾರ್ಥಿಗಳು ಸಂಶೋಧನೆ, ಕಲಿಕೆ ಮಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ದೂರುಗಳೂ ಕೇಳಿ ಬಂದಿವೆ.

ಈ ಹಿನ್ನೆಲೆ ಸರ್ಕಾರ ಕೂಡಲೆ ತಜ್ಞರು ಮತ್ತು ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿ ವಿಶ್ವವಿದ್ಯಾಲಯದ ಹಗರಣಗಳ ಕುರಿತು ತನಿಖೆ ಮಾಡಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಹಾಗೂ ಈಗ ನೇಮಕಾತಿ ಮಾಡಿಕೊಳ್ಳಲು ಹೊರಟಿರುವ ಹುದ್ದೆಗಳ ವಿಚಾರದಲ್ಲಿ ಮೀಸಲಾತಿ ಉಲ್ಲಂಘನೆಯ ಆರೋಪವಿದೆ. ಈ ವಿಚಾರದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕೋಶಗಳು ತನಿಖೆ ನಡೆಸಿ ವರದಿ ನೀಡಬೇಕು. ಅಲ್ಲಿಯವರೆಗೆ ನೇಮಕಾತಿ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು.

ವಿಶ್ವವಿದ್ಯಾಲಯಕ್ಕೆ ಅಗತ್ಯವಾಗಿರುವ ಅನುದಾನವನ್ನು ಕೂಡಲೆ ಒದಗಿಸಿ, ಸಂಬಳ, ಪಿಂಚಣಿ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಮತ್ತಿತರ ಸೌಲಭ್ಯಗಳಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳಬೇಕು ಹಾಗೂ ವಿಶ್ವವಿದ್ಯಾಲಯದ ಆಡಳಿತವನ್ನು ಸಂಪೂರ್ಣ ಪಾರದರ್ಶಕವಾಗಿ ನಡೆಯುವಂತೆ ನೋಡಿಕೊಳ್ಳಬೇಕೆಂದು ಆಗ್ರಹಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬುದ್ಧ, ಬಸವ, ಅಂಬೇಡ್ಕರ್, ಮಹಾವೀರ ಇವರು ಕಾಲಾತೀತರು: ಸಿಎಂ ಬೊಮ್ಮಾಯಿ

ABOUT THE AUTHOR

...view details