ಬೆಂಗಳೂರು: ಸರ್ಕಾರದ ನೀತಿಗಳು ಮತ್ತು ಕೋವಿಡ್ ಮುಂತಾದ ಕಾರಣಗಳಿಂದಾಗಿ ಇಂದು ರೈತರ ಬಳಿ ಬಿತ್ತನೆ ಚಟುವಟಿಕೆಗಳಿಗೆ ಕೈಯಲ್ಲಿ ಹಣವಿಲ್ಲದಂತಾಗಿದೆ. ಹಾಗಾಗಿ ರೈತರಿಗೆ ಬಿತ್ತನೆ ಬೀಜ, ಗೊಬ್ಬರವನ್ನು ಉಚಿತವಾಗಿ ನೀಡಲು ಕ್ರಮವಹಿಸಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು, ಕೂಡಲೇ ಸಾಲ ವಿತರಣೆ ಚಟುವಟಿಕೆಗಳನ್ನು ಆರಂಭಿಸಬೇಕು. ಹೆಸರು, ಉದ್ದು, ಅಲಸಂದೆ, ತೊಗರಿ ಮುಂತಾದ ದ್ವಿದಳ ಧಾನ್ಯಗಳು ಹಾಗೂ ಸೋಯಾ, ಶೇಂಗಾ ಮುಂತಾದ ಎಣ್ಣೆ ಬೀಜಗಳನ್ನು ಹೇಗಾದರೂ ಮಾಡಿ ಸಂಗ್ರಹಿಸಿ ಬೇಡಿಕೆ ಇದ್ದಷ್ಟು ನೀಡಲು ಕೂಡಲೇ ಸಮರೋಪಾದಿಯಲ್ಲಿ ಸಮರ್ಪಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಪತ್ರದಲ್ಲಿ ಅವರು, ಈ ವರ್ಷ ಕೇವಲ ಶೇ 19, ಅಂದರೆ 410 ಕ್ವಿಂಟಾಲ್ ಹೆಸರು ಕಾಳು ಬಿತ್ತನೆ ಬೀಜವನ್ನು ರೈತ ಸಂಪರ್ಕ ಕೇಂದ್ರಗಳಿಗೆ ವಿತರಣೆ ಮಾಡಲಾಗಿದೆ. ಕಳೆದ ವರ್ಷ ತುಮಕೂರಿಗೆ 851 ಕ್ವಿಂಟಾಲ್ ಕಾಳನ್ನು ವಿತರಿಸಿದ್ದರೆ, ಈ ವರ್ಷ ಕೇವಲ 90 ಕ್ವಿಂಟಾಲ್ ವಿತರಿಸಲಾಗಿದೆ. ಹಾಸನಕ್ಕೆ 618 ಕ್ವಿಂಟಾಲಿಗೆ ಬದಲಾಗಿ 87.5 ಕ್ವಿಂಟಾಲ್, ಮೈಸೂರಿಗೆ 418 ಕ್ವಿಂಟಾಲ್ ಬೇಡಿಕೆಗೆ ಬದಲಾಗಿ 165.50, ಚಾಮರಾಜನಗರಕ್ಕೆ 222 ಕ್ವಿಂಟಾಲಿನ ಬದಲು 67.5 ಕ್ವಿಂಟಾಲ್ ನೀಡಲಾಗಿದೆ. ಇದನ್ನು ದ್ರೋಹವೆನ್ನದೆ ಇನ್ನು ಯಾವ ಭಾಷೆಯಲ್ಲಿ ಹೇಳಬೇಕು? ಎಂದಿದ್ದಾರೆ.
ಈ ವರ್ಷದ ಪೂರ್ವ ಮುಂಗಾರಿನಲ್ಲಿ ಮಳೆಯ ಪ್ರಮಾಣವೂ ಕಡಿಮೆಯಾಗಿಲ್ಲ. ಕಳೆದ ಬಾರಿಗೆ ಹೋಲಿಸಿದರೆ ಸರಾಸರಿಗಿಂತ ಶೇ 15-20 ರಷ್ಟು ಹೆಚ್ಚು ಮಳೆಯಾಗಿದೆ. ಆದರೆ ಸರ್ಕಾರ ಬಿತ್ತನೆ ಬೀಜ ಸರಬರಾಜು ಮಾಡದೆ ತೊಂದರೆ ಮಾಡಿದೆ. ನನಗಿರುವ ಮಾಹಿತಿಯ ಪ್ರಕಾರ ಈ ವರ್ಷ ಬೇಡಿಕೆಯನ್ನು ಅಂದಾಜು ಮಾಡದೆ, ಸಾಕಷ್ಟು ಪ್ರಮಾಣದಲ್ಲಿ ಬಿತ್ತನೆ ಬೀಜವನ್ನು ಸಂಗ್ರಹಣೆ ಮಾಡಿಕೊಳ್ಳದೆ ಮೈಮರೆಯಲಾಗಿದೆ. ಕಡೆಗೆ ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಕಳೆದ ವರ್ಷ ಬಿತ್ತನೆ ಬೀಜ ಪಡೆದ ರೈತರಿಗೆ ಈ ವರ್ಷ ನೀಡಲಾಗದು ಎಂದು ರೈತ ಸಂಪರ್ಕ ಕೇಂದ್ರಗಳಲ್ಲಿ ಹೇಳಿ ಕಳಿಸಿದ್ದಾರೆ.
ಕೃಷಿ ಇಲಾಖೆಯೂ ಸಹ ಸುತ್ತೋಲೆಗಳನ್ನು ಹೊರಡಿಸಿದೆ. ಈಗ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಬಿತ್ತನೆ ಕೆಲಸಗಳು ಪ್ರಾರಂಭವಾಗುತ್ತವೆ. ಅಲ್ಲಿಗೂ ಸಹ ಸಾಕಷ್ಟು ಪ್ರಮಾಣದ ಬಿತ್ತನೆ ಕಾಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಎಂಬ ಆರೋಪಗಳು ಬರುತ್ತಿವೆ.ನನಗೆ ಇರುವ ಮಾಹಿತಿ ಪ್ರಕಾರ ಕೃಷಿ ಇಲಾಖೆ 8391 ಕ್ವಿಂಟಾಲಿಗೆ ಬದಲು ಕೇವಲ 5000 ರಿಂದ 5500 ಕ್ವಿಂಟಾಲ್ ಹೆಸರು ಕಾಳನ್ನು ವಿತರಿಸಲು ಈಗ ಹೊರಟಿದೆ. ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.