ಬೆಂಗಳೂರು : ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕಳೆದ 10 ವರ್ಷಗಳಿಂದ ತೆಗೆದುಕೊಂಡ ಕಾನೂನು ಕ್ರಮಗಳ ಕುರಿತು ಅತ್ಯಂತ ಜರೂರಾಗಿ ಮಾಹಿತಿ ನೀಡಲು ಗೃಹ ಸಚಿವರಿಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಕೋರಿದ್ದಾರೆ.
ಎನ್ಡಿಪಿಎಸ್ ಕಾಯ್ದೆ; ಕಳೆದ 10 ವರ್ಷಗಳಲ್ಲಿ ಕೈಗೊಂಡ ಕ್ರಮದ ಮಾಹಿತಿ ಕೇಳಿದ ಸಿದ್ದರಾಮಯ್ಯ - Legal action
ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ಒಟ್ಟು ಎಂಟು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೇಳಿದ್ದಾರೆ.

ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ
ಗೃಹ ಸಚಿವ ಬಸವರಾಜ ಬೊಮ್ಮಾಯಿಗೆ ಈ ಸಂಬಂಧ ಪತ್ರ ಬರೆದಿರುವ ಅವರು ಒಟ್ಟು ಎಂಟು ಪ್ರಶ್ನೆಗಳಿಗೆ ಉತ್ತರ ನೀಡುವಂತೆ ಕೇಳಿದ್ದಾರೆ.
- ಎನ್.ಡಿ.ಪಿ.ಎಸ್. ಕಾಯ್ದೆಯಡಿ ಕಳೆದ 10 ವರ್ಷಗಳಿಂದ ಎಷ್ಟು ಜನರ ಮೇಲೆ ಪ್ರಕರಣಗಳನ್ನು ದಾಖಲಿಸಲಾಗಿದೆ. ದಾಖಲಿಸಿದ ಪ್ರಕರಣಗಳು ನ್ಯಾಯಾಲಯಗಳಲ್ಲಿ ಯಾವ ಸ್ಥಿತಿಯಲ್ಲಿವೆ? ನ್ಯಾಯಾಲಯಗಳಲ್ಲಿ ಖುಲಾಸೆಯಾದ ಪ್ರಕರಣಗಳೆಷ್ಟು? ಪ್ರಕರಣವಾರು, ಜಿಲ್ಲಾವಾರು ಮಾಹಿತಿ ನೀಡುವುದು.
- ಶಿಕ್ಷೆಯಾಗಿದ್ದರೆ, ಎಷ್ಟು ಜನರಿಗೆ ಶಿಕ್ಷೆಯಾಗಿದೆ? ವ್ಯಕ್ತಿವಾರು, ಶಿಕ್ಷೆಯ ಪ್ರಮಾಣವಾರು, ಜಿಲ್ಲಾವಾರು ಮಾಹಿತಿ ನೀಡುವುದು.
- ಪೊಲೀಸ್ ಅಧಿಕಾರಿ, ಸಿಬ್ಬಂದಿ ಸಹಕಾರವಿಲ್ಲದೆ ಗಾಂಜಾ ದಂಧೆ ಇಷ್ಟು ನಿರಾತಂಕವಾಗಿ ನಡೆಯಲು ಸಾಧ್ಯವೇ? ಸಾಧ್ಯವಿಲ್ಲವಾದರೆ ಸಂಬಂಧಿಸಿದ ಪೊಲೀಸ್ ಅಧಿಕಾರಿ/ಸಿಬ್ಬಂದಿ ಮೇಲೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ? ಎಷ್ಟು ಜನರನ್ನು ಅಮಾನತು ಮಾಡಲಾಗಿದೆ? ಎಷ್ಟು ಜನರಿಗೆ ಶಿಕ್ಷೆ ವಿಧಿಸಲಾಗಿದೆ? ಜಿಲ್ಲಾವಾರು ವಿವರ ನೀಡುವುದು.
- ಎನ್.ಡಿ.ಪಿ.ಎಸ್. ಕಾಯ್ದೆ ಪ್ರಕಾರ ವಿವಿಧ ಹಂತದ ಸಮಿತಿಗಳನ್ನು ರಚಿಸಬೇಕು, ಜಿಲ್ಲೆ ತಾಲೂಕು ಮತ್ತು ರಾಜ್ಯ ಮಟ್ಟದಲ್ಲಿ ಎಷ್ಟು ಸಮಿತಿಗಳನ್ನು ರಚಿಸಲಾಗಿದೆ? ಅವುಗಳು ಇದುವರೆವಿಗೆ ಏನು ಕ್ರಮಗಳನ್ನು ಕೈಗೊಂಡಿವೆ? ಎಷ್ಟು ಸಭೆಗಳನ್ನು ನಡೆಸಿವೆ ಎಂಬ ವಿವರಗಳನ್ನು ನೀಡುವುದು.
- ಡ್ರಗ್ಸ್ ದುಶ್ಚಟಕ್ಕೆ ಸಿಲುಕಿದ ಮಕ್ಕಳ ತಂದೆ-ತಾಯಿಗಳಿಂದ ಗುಪ್ತವಾಗಿ ಮಾಹಿತಿ ಪಡೆಯುವ ವ್ಯವಸ್ಥೆ ರಾಜ್ಯದಲ್ಲಿದೆಯೇ? ಒಟ್ಟು ಎಷ್ಟು ದೂರುಗಳನ್ನು ಸ್ವೀಕರಿಸಲಾಗಿದೆ? ಅವುಗಳ ಕುರಿತು ಈವರೆಗೆ ಯಾವ ಕ್ರಮಗಳನ್ನು ಕೈಗೊಳ್ಳಲಾಗಿದೆ?
- ಡ್ರಗ್ಸ್ ಎಂದು ಕರೆಯುವ ಈ ವಸ್ತುಗಳು ಎಲ್ಲಿಂದ ಸರಬರಾಜಾಗುತ್ತಿದೆ? ರಾಜ್ಯದ ಎಲ್ಲೆಲ್ಲಿಗೆ ಸರಬರಾಜಾಗುತ್ತಿದೆ? ಸರಬರಾಜುದಾರರ ಒಟ್ಟು ಆಸ್ತಿಗಳನ್ನು, ಇದುವರೆಗೆ ಮುಟ್ಟುಗೋಲು ಹಾಕಲಾಗಿದೆ? ಜಿಲ್ಲಾವಾರು ಮಾಹಿತಿ ನೀಡುವುದು.
- ಡ್ರಗ್ ವ್ಯಸನಕ್ಕೆ ಸಿಕ್ಕಿಕೊಂಡವರಲ್ಲಿ ಎಷ್ಟು ಜನರನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದೀರಿ? ಅವರಲ್ಲಿ ಎಷ್ಟು ಜನ ಸಂಪೂರ್ಣವಾಗಿ ವ್ಯಸನದಿಂದ ಮುಕ್ತರಾಗಿದ್ದಾರೆ? ಎಷ್ಟು ಜನ ಮತ್ತೆ ಅದೇ ವ್ಯಸನಕ್ಕೆ ಬಲಿಯಾಗಿದ್ದಾರೆ?
- ಡ್ರಗ್ಸ್ ವ್ಯಸನದಿಂದಾಗಿ ಮರಣ ಹೊಂದಿದ ವ್ಯಕ್ತಿಗಳೆಷ್ಟು? ಈ ವಿವರಗಳನ್ನು ಜಿಲ್ಲಾವಾರು ನೀಡುವುದು.
ಈ ಮೇಲಿನ ಪ್ರಶ್ನೆಗಳಿಗೆ ಅತ್ಯಂತ ತ್ವರಿತವಾಗಿ ಉತ್ತರ ನೀಡುವಂತೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿಗೆ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.