ಬೆಂಗಳೂರು:ಇಡೀ ದೇಶ ಕೋವಿಡ್ 19 ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವಾಗ, ಕಳೆದ 10 ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ನಿರಂತರ ಏರಿಕೆಯ ಜನಸಾಮಾನ್ಯರಿಗೆ ಸಾಕಷ್ಟು ತೊಂದರೆ ಉಂಟು ಮಾಡುತ್ತಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಗೆ ಈ ಸಂಬಂಧ ಪತ್ರ ಬರೆದಿರುವ ಅವರು, ಕಳೆದ 10 ದಿನಗಳಲ್ಲಿ ಪ್ರತಿ ಲೀಟರ್‌ಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳ ಆಗುತ್ತಲೇ ಇದೆ. ಈ ಅವಧಿಯಲ್ಲಿ ಸುಮಾರು 5.5 ರೂ.ನಷ್ಟು ಅಂದಾಜು ಇಂಧನ ಬೆಲೆ ಹೆಚ್ಚಳವಾಗಿದೆ. ಈಗ ಬೆಂಗಳೂರಿಗೆ ಪೆಟ್ರೋಲ್ ಬೆಲೆ 74.6 ರೂ. ಇದ್ದದ್ದು 79.79 ರೂ. ಆಗಿದೆ. ಡೀಸೆಲ್ ಬೆಲೆ 67.11 ರೂ.ನಿಂದ 72.07 ರೂ. ರೂ. ಆಗಿದೆ. ಕಚ್ಚಾತೈಲದ ಬೆಲೆ ಅತ್ಯಂತ ಕೆಳ ಮಟ್ಟಕ್ಕೆ ಇಳಿದಿದ್ದರೂ ಇಂಧನ ಬೆಲೆ ಮಾತ್ರ 2018ರ ಅಕ್ಟೋಬರ್ ಮಟ್ಟವನ್ನು ತಲುಪಿದೆ. ಇಂಧನ ಬೆಲೆಗಳ ನಿರ್ವಹಣೆಗೆ ಸಂಬಂಧಿಸಿದಂತೆ ನಿಮ್ಮ ಸರ್ಕಾರ ತೆಗೆದುಕೊಳ್ಳುವ ನೀತಿ ನಿರ್ಧಾರಗಳು ಸಾಮಾನ್ಯವಾಗಿ ಅಳವಡಿಸಿಕೊಳ್ಳುವ ವಿವೇಕಯುತ ಕ್ರಮವಾಗಿ ಗೋಚರಿಸುತ್ತಿಲ್ಲ.
ಇದೇ ವರ್ಷ ಮಾರ್ಚ್, ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಕಚ್ಚಾ ತೈಲದ ಬೆಲೆ ಗಮನಾರ್ಹವಾಗಿ ಕಡಿಮೆಯಾಗಿದ್ದು ಇಂಧನ ಬೆಲೆಯನ್ನು ಪ್ರಮಾಣಾನುಗುಣವಾಗಿ ಕಡಿಮೆ ಮಾಡುವ ಮೂಲಕ ಜನರಿಗೆ ಪ್ರಯೋಜನಗಳನ್ನು ತಲುಪಿಸಲು ನಿಮ್ಮ ಸರ್ಕಾರ ಪ್ರಯತ್ನ ಮಾಡಬೇಕಿತ್ತು. ಅಂತಹ ಆಸಕ್ತಿ ಸರ್ಕಾರಕ್ಕೆ ಇದ್ದಂತೆ ಕಾಣುತ್ತಿಲ್ಲ. ಕಳೆದ 6 ವರ್ಷಗಳಲ್ಲಿ, ಕಚ್ಚಾ ಬೆಲೆ ತೀರಾ ಕಡಿಮೆಯಾದಾಗ ನಮ್ಮ ಅನುಕೂಲಕ್ಕೆ ಬಳಸಬಹುದಾದ ತೈಲ ಶೇಖರಣಾ ಸಾಮರ್ಥ್ಯವನ್ನು ಹೆಚ್ಚಿಸಲು ಸರ್ಕಾರವು ವಿಫಲವಾಗಿದೆ. ನಿಮ್ಮ ಸರ್ಕಾರವು ಅಬಕಾರಿ ಸುಂಕವನ್ನು ಹೆಚ್ಚಿಸುವ ಯಾವುದೇ ಅವಕಾಶವನ್ನು ಕಳೆದುಕೊಂಡಿಲ್ಲ. ಪ್ರಸ್ತುತ ಪೆಟ್ರೋಲ್‌ಗೆ ವಿಧಿಸುವ ಅಬಕಾರಿ ಸುಂಕ ರೂ. ಪ್ರತಿ ಲೀಟರ್‌ಗೆ 12.98 ರೂ.ಗೆ ಏರಿಕೆ ಮಾಡಿದ್ದು, ಇಂದು ಇವೆಲ್ಲವನ್ನು ತಗ್ಗಿಸಿ ಅತ್ಯಂತ ಕಡಿಮೆ ಬೆಲೆಗೆ ಪೆಟ್ರೋಲ್ ಹಾಗೂ ಡೀಸೆಲ್ ಪೂರೈಸಬಹುದು ಎಂದು ಸಲಹೆ ನೀಡಿದ್ದಾರೆ.