ಬೆಂಗಳೂರು:ನಿಜವಾದ ಅರ್ಹತೆ ಇರುವ ಶಿಕ್ಷಣ ತಜ್ಞರ ಸಮಿತಿ ಮೂಲಕ ಪಠ್ಯ ಪರಿಷ್ಕರಣಾ ಸಮಿತಿ ಮಾಡಿರುವ ಅದ್ವಾನಗಳನ್ನು ಕೂಡಲೇ ಸರಿಪಡಿಸಬೇಕು ಹಾಗೂ ನಾಡಿನ ಸಂಸ್ಕೃತಿ, ಪರಂಪರೆ, ಚರಿತ್ರೆ, ಸಂವಿಧಾನದ ಆಶಯಗಳ ಬಗ್ಗೆ ಗೌರವ ಇರುವವರನ್ನು ಸಮಿತಿಗಳಿಗೆ ನೇಮಿಸಬೇಕು. ಇಷ್ಟೆಲ್ಲಾ ಎಡವಟ್ಟುಗಳಿಗೆ ಕಾರಣರಾದ ಶಿಕ್ಷಣ ಸಚಿವ ಬಿ. ಸಿ ನಾಗೇಶ್ ಅವರ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸುದೀರ್ಘ ಪತ್ರ ಬರೆದಿರುವ ಸಿದ್ದರಾಮಯ್ಯ ಅವರು, ನಾಡಿನ ಜನತೆಯ ಆಕ್ರೋಶದ ಬಳಿಕ ಬಹಳ ತಡವಾಗಿಯಾದರೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯನ್ನು ವಿಸರ್ಜಿಸಿದ್ದೀರಿ. ಆದರೆ, ಈ ಸಮಿತಿ ಪಠ್ಯದೊಳಗೆ ತುರುಕಿರುವ ಸಂವಿಧಾನ ವಿರೋಧಿ ಮತ್ತು ಸಂಗತಿಗಳನ್ನು ಹಾಗೇ ಉಳಿಸಿಕೊಂಡಿದ್ದೀರಿ.
ಜನರ ವಿವೇಕವನ್ನು ಶತಮಾನಗಳಿಂದ ತಿದ್ದುತ್ತಾ ಬಂದಿರುವ ಚಿಂತಕರ ಜೀವಪರ ವಿಚಾರಗಳಿದ್ದ ಪಠ್ಯಗಳಲ್ಲಿನ ವಾಕ್ಯ, ಪದ, ಪ್ಯಾರಾಗಳನ್ನು ತೆಗೆದುಹಾಕಿ, ಉಳಿದವಕ್ಕೆ ಕತ್ತರಿ ಹಾಕಿ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿರುವ ಪ್ರತಿಗಾಮಿ ಹಾಗೂ ಜಾತಿ ಶ್ರೇಷ್ಠತೆಯ ವ್ಯಸನದ ಸಂಗತಿಗಳನ್ನು ಪಠ್ಯದೊಳಗೆ ಉಳಿಸಿಕೊಳ್ಳುವ ಸರ್ಕಾರದ ಹುನ್ನಾರ ಹಾಗೂ ಪ್ರಧಾನವಾಗಿ ಒಂದು ಜಾತಿಯವರ ಬರಹಗಳನ್ನು, ವಿಚಾರಗಳನ್ನು ನಾಡಿನ ಮೇಲೆ ಹೇರಲು ಹೊರಟಿರುವುದು ಅತ್ಯಂತ ಅಪಾಯಕಾರಿ ನಡೆಯಾಗಿದೆ ಎಂದು ನಾಡಿನ ಅನೇಕ ಚಿಂತಕರು ಪ್ರತಿಭಟಿಸಿದ್ದಾರೆ ಎಂದು ತಿಳಿಸಿದ್ದಾರೆ.
ಪತ್ರದ ಸಾರಾಂಶ : 'ಪಠ್ಯ ಪುಸ್ತಕ ಪರಿಷ್ಕರಣೆಗೆ ಅಗತ್ಯವಾದ ಬೌದ್ಧಿಕ ತಿಳುವಳಿಕೆ ಮತ್ತು ಅರ್ಹತೆಗಳಿಲ್ಲದ, ಸಾಮಾಜಿಕ ತಾಣಗಳಲ್ಲಿ ಶೂದ್ರ-ದಲಿತ ಪರಂಪರೆ ಮತ್ತು ಸಂಸ್ಕೃತಿ ಬಗೆಗೆ ವಿಕೃತಿ ಕಾರಿಕೊಳ್ಳುವುದನ್ನೇ ಪಾಂಡಿತ್ಯ ಎಂದುಕೊಂಡಿರುವ ಹಾಗೂ ಮಹಿಳೆಯರ ಬಗ್ಗೆ ಕನಿಷ್ಠ ಗೌರವವೂ ಇಲ್ಲದಂತೆ ಬಹಿರಂಗವಾಗಿ ಪೋಸ್ಟ್ ಗಳನ್ನು ಹಾಕಿ ಅಸಹ್ಯವಾಗಿ ಆಚರಿಸುತ್ತಿದ್ದ ವ್ಯಕ್ತಿಯನ್ನು ಪಠ್ಯ ಪರಿಷ್ಕರಣೆ ಸಮಿತಿಗೆ ಅಧ್ಯಕ್ಷನನ್ನಾಗಿ ಮಾಡಿ ನಾಡಿನ ಸಾಂಸ್ಕೃತಿಕ ಪರಂಪರೆಗೆ ದ್ರೋಹ ಎಸಗಿದ್ದು ಸರ್ಕಾರ ಮಾಡಿರುವ ಗಂಭೀರ ಅಪರಾಧ'.
'ಸರ್ಕಾರದ ಈ ಅಪರಾಧಕ್ಕಾಗಿ ನಾಡಿನ ಪ್ರಮುಖ ಮಠಾಧೀಶರು, ಚಿಂತಕರು ಆಕ್ರೋಶ ಹೊರಹಾಕಿದ್ದಾರೆ. ನಾಡಿನ ಸಾಂಸ್ಕೃತಿಕ ಜಗತ್ತು ವ್ಯಾಪಕ ಪ್ರತಿರೋಧ ವ್ಯಕ್ತಪಡಿಸಿದೆ. ಪಠ್ಯಗಳಲ್ಲಿ ಬಸವಣ್ಣ, ನಾರಾಯಣಗುರು, ಅಂಬೇಡ್ಕರ್, ಕುವೆಂಪು, ಸ್ವಾಮಿ ವಿವೇಕಾನಂದ, ಸಾವಿತ್ರಿಬಾಯಿ ಫುಲೆ, ರಾಣಿ ಅಬ್ಬಕ್ಕ ಮುಂತಾದ ಈ ನೆಲದ ನಿಜವಾದ ಜ್ಞಾನ ಪರಂಪರೆ ಮತ್ತು ಆಧ್ಯಾತ್ಮ ಪರಂಪರೆಯ ಹಲವು ಮಹಾತ್ಮರ ಕುರಿತಾದ ಪಠ್ಯಗಳನ್ನು ತೆಗೆದು ಹಾಕಿರುವುದಕ್ಕೆ ಅಥವಾ ಉಳಿಸಿಕೊಂಡಿರುವ ಪಠ್ಯಗಳಲ್ಲಿನ ಸಂವಿಧಾನದ ಆಶಯಗಳನ್ನು ತೆಗೆದಿರುವುದಕ್ಕೆ ಇದುವರೆಗೂ ಸರ್ಕಾರ ಕ್ಷಮೆ ಕೇಳಿಲ್ಲ ಮತ್ತು ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುತ್ತೇವೆ ಎನ್ನುವ ಭರವಸೆಯನ್ನೂ ನೀಡಿಲ್ಲ.
ಸರ್ಕಾರ ಒಪ್ಪಿಕೊಂಡಿರುವುದನ್ನು ಸ್ವಾಗತಿಸುತ್ತೇನೆ.. ಬಸವಣ್ಣನವರ ಕುರಿತಂತೆ ತಿರುಚಿದ ಸಂಗತಿಗಳನ್ನು ಮಕ್ಕಳಿಗೆ ಬೋಧಿಸಲು ಹೊರಟಿದ್ದಾರೆ ಎಂದು ಶ್ರೀ ಪಂಡಿತಾರಾಧ್ಯ ಸ್ವಾಮೀಜಿಗಳು ಮತ್ತು ಲಿಂಗಾಯತ ಮಠಾಧೀಶರ ಒಕ್ಕೂಟದವರು ನಿಮ್ಮ (ಸಿಎಂ) ಗಮನಕ್ಕೆ ತಂದರು. ಬಳಿಕ, ಬಸವಣ್ಣನವರ ಪಠ್ಯವನ್ನು ತಿರುಚಿ, ಶರಣ ಸಂಸ್ಕೃತಿ ಪರಂಪರೆಗೆ ವಿರುದ್ಧವಾದ ಅಂಶಗಳನ್ನು ಕಪಟತನದಿಂದ ಪಠ್ಯದಲ್ಲಿ ಸೇರಿಸಿದ್ದನ್ನು ಪರಿಷ್ಕರಿಸಲು ಸರ್ಕಾರ ಒಪ್ಪಿಕೊಂಡಿರುವುದನ್ನು ನಾನು ಸ್ವಾಗತಿಸುತ್ತೇನೆ.
ಆದರೆ, ಈ ಪರಿಷ್ಕರಣೆಯನ್ನು ಯಾರಿಂದ ಮಾಡಿಸುತ್ತೀರಿ? ಬಸವಣ್ಣನವರಿಗೆ ಬಗೆದಿರುವ ದ್ರೋಹದಂತೆಯೇ ಇನ್ನಿತರೆ ಪಾಠಗಳಲ್ಲಿ ಮಾಡಿರುವ ಅನಿಷ್ಠಗಳನ್ನು ಅಳಿಸುವ ಬಗ್ಗೆ ಸರ್ಕಾರದ ನಿಲುವು ಏನು? ಎಂಬುದರ ಕುರಿತು ಸರ್ಕಾರ ಏನನ್ನೂ ಹೇಳಿಲ್ಲ. ಹೀಗಾಗಿ, ಪಠ್ಯ ಪರಿಷ್ಕರಣಾ ಸಮಿತಿಯ ಆಯ್ಕೆಯಿಂದ ಅದನ್ನು ವಿಸರ್ಜಿಸುವವರೆಗೂ ಸರ್ಕಾರ ಮೇಲಿಂದ ಮೇಲೆ ಅಪರಾಧ ಮಾಡುತ್ತಲೇ ಇದೆ ' ಎಂದು ಗುಡುಗಿದ್ದಾರೆ.