ಕರ್ನಾಟಕ

karnataka

ETV Bharat / state

ದುಡಿಯುವ ವರ್ಗಕ್ಕೆ ಬಜೆಟ್​​​ನಲ್ಲಿ ನ್ಯಾಯಯುತ ಅನುದಾನ ನೀಡುವಂತೆ ಸಿಎಂಗೆ ಸಿದ್ದರಾಮಯ್ಯ ಒತ್ತಾಯ - ಸಿಎಂ ಬಸವರಾಜ ಬೊಮ್ಮಾಯಿಗೆ ಸಿದ್ದರಾಮಯ್ಯ ಒತ್ತಾಯ

ಕೃಷಿ ಮತ್ತು ಸಣ್ಣ, ಸೂಕ್ಷ್ಮ ಕೈಗಾರಿಕಾ ವಲಯಗಳು ಒಟ್ಟು ಶೇ. 90ರಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿವೆ. ಇಂಥ ವಲಯಗಳನ್ನೇ ಬಿಜೆಪಿ ಸರ್ಕಾರ ದಮನ ಮಾಡಲು ಹೊರಟಿದೆ. ಕೇಂದ್ರ ಸರ್ಕಾರ ಕೂಡ 2022-23 ರ ಬಜೆಟ್‌ನಲ್ಲಿ ಈ ವಲಯಗಳಿಗೆ ಶೇ. 37 ರವರೆಗೆ ಸಬ್ಸಿಡಿ ಕಡಿತ ಮಾಡಿದೆ ಎಂದು ಸಿದ್ದರಾಮಯ್ಯ ಬೇಸರ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ
ಸಿದ್ದರಾಮಯ್ಯ

By

Published : Mar 2, 2022, 9:39 PM IST

ಬೆಂಗಳೂರು: ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನರ ಕಲ್ಯಾಣ, ಕೃಷಿ ಮತ್ತು ಪೂರಕ ಇಲಾಖೆಗಳು, ಸಣ್ಣ ಕೈಗಾರಿಕೆಗಳು, ಕುಶಲಕರ್ಮಿ ವರ್ಗಗಳು, ದುಡಿಯುವ ವರ್ಗಗಳಿಗೆ ಮುಂತಾದವುಗಳಿಗೆ ಪ್ರಸ್ತುತ ಬಜೆಟ್‌ನಲ್ಲಿ ನ್ಯಾಯಯುತ ಅನುದಾನವನ್ನು ಒದಗಿಸುವ ಕುರಿತು ಮುಖ್ಯಮಂತ್ರಿಗಳಿಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬರೆದ ಪತ್ರದಲ್ಲಿ ರಾಜ್ಯದಲ್ಲಿ ಕಳೆದ 3 ವರ್ಷಗಳಿಂದ ಹಿಂದುಳಿದ ವರ್ಗ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಯುವಜನರ ಕಲ್ಯಾಣ, ಅಲ್ಪಸಂಖ್ಯಾತರ ಕಲ್ಯಾಣ, ಕೃಷಿ, ಸಣ್ಣ ಕೈಗಾರಿಕೆಗಳು, ಕುಶಲಕರ್ಮಿ ವರ್ಗಗಳು ಮುಂತಾದವುಗಳಿಗೆ ಸಮರ್ಪಕ ಅನುದಾನಗಳನ್ನು ನೀಡದೆ ಅನ್ಯಾಯ ಮಾಡಲಾಗಿದೆ.

ಜನರ ಕಲ್ಯಾಣಕ್ಕೆ ಖರ್ಚು ಮಾಡುವ ಹಣವನ್ನು ವರ್ಷದಿಂದ ವರ್ಷಕ್ಕೆ ಕಡಿಮೆ ಮಾಡಲಾಗುತ್ತಿದೆ. 2017-18 ರಲ್ಲಿ ರಾಜ್ಯದ ಬಜೆಟ್ ಗಾತ್ರ 1,86,561 ಕೋಟಿ. ಇದು 2021-22 ರಲ್ಲಿ 2,46,207 ಕೋಟಿಗಳಿಗೆ ಏರಿಕೆಯಾಗಿದೆ. 2017-18 ಕ್ಕೆ ಹೋಲಿಕೆ ಮಾಡಿದರೆ 2021-22 ರ ಬಜೆಟ್ ಗಾತ್ರ 59646 ಕೋಟಿಗಳಷ್ಟು ಹೆಚ್ಚಾಗಿದೆ. ಆದರೆ ಈ 7 ಪ್ರಮುಖ ಕಲ್ಯಾಣ ಇಲಾಖೆಗಳಿಗೆ 2017-18 ರಲ್ಲಿ ನಮ್ಮ ಸರ್ಕಾರದ ಅವಧಿಯಲ್ಲಿ 17,102 ಕೋಟಿಗಳನ್ನು ಒದಗಿಸಿದ್ದೆವು.

ಆದರೆ, 2021-22 ರಲ್ಲಿ 14,181 ಕೋಟಿಗಳನ್ನು ಮಾತ್ರ ನೀಡಲಾಗಿದೆ. ಅಂದರೆ 2,921 ಕೋಟಿ ರೂಪಾಯಿಗಳನ್ನು ಕಡಿಮೆ ಮಾಡಿದಂತಾಗಿದೆ. ನಾನು 28-2-2022 ರಂದು ಬರೆದ ಪತ್ರದಲ್ಲಿ ಪರಿಶಿಷ್ಟ ಜಾತಿ, ಪಂಗಡಗಳ ಕಲ್ಯಾಣದ ವಿಷಯದಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಯಾವ ರೀತಿಯ ಅನ್ಯಾಯ ಮಾಡುತ್ತಿದೆಯೆಂದು ವಿವರಿಸಿದ್ದೆ ಎಂದು ತಿಳಿಸಿದ್ದಾರೆ.

2017-18 ಕ್ಕೆ ಹೋಲಿಸಿದರೆ 2021-22 ರ ಬಜೆಟ್ ಗಾತ್ರ ಸುಮಾರು 60 ಸಾವಿರ ಕೋಟಿಗಳಷ್ಟು ಹೆಚ್ಚಾಗಿದೆ. 2017-18 ಕ್ಕೆ ಹೋಲಿಸಿದರೆ ಶೇ. 24.5 ರಷ್ಟು ಬಜೆಟ್ ಗಾತ್ರ ಹೆಚ್ಚಾಗಿದೆ. ಆದರೆ ಇದೇ ಸಮಯದಲ್ಲಿ 20.59 ರಷ್ಟು ಈ 7 ಇಲಾಖೆಗಳಿಗೆ ಅನುದಾನ ಕಡಿಮೆಯಾಗಿದೆ. ಈ ವರ್ಗಗಗಳಿಗೆ ನೀಡುವ ಅನುದಾನವನ್ನು ಕಡಿಮೆ ಮಾಡುವುದನ್ನು ಸಾಧನೆ ಎಂದು ಹೇಳಬೇಕೆ? ಮಾತೆತ್ತಿದರೆ ಸರ್ಕಾರ ಕೊರೊನಾ ಎಂದು ಹೇಳುತ್ತದೆ.

ಆದರೆ ಕೊರೊನಾಕ್ಕಾಗಿ ಬಿಜೆಪಿ ಸರ್ಕಾರ ಖರ್ಚು ಮಾಡಿದ್ದೆಷ್ಟು? ಯಾವ ಕಡೆಯಿಂದ ಲೆಕ್ಕ ಹಾಕಿದರೂ ನಮ್ಮ ರಾಜ್ಯದಲ್ಲಿ 2020 ರ ಏಪ್ರಿಲ್ ನಿಂದ ಇದುವರೆಗೆ ಕೊರೊನಾ ನಿರ್ವಹಣೆಗಾಗಿ 8-10 ಸಾವಿರ ಕೋಟಿಗಳು ಮಾತ್ರ ಖರ್ಚು ಮಾಡಲಾಗಿದೆ. ಪಕ್ಕದ ಕೇರಳ ರಾಜ್ಯ 40 ಸಾವಿರ ಕೋಟಿ, ತಮಿಳುನಾಡು 30 ಸಾವಿರ ಕೋಟಿಗೂ ಹೆಚ್ಚು ಖರ್ಚು ಮಾಡಿವೆ. ಬಿಜೆಪಿ ಸರ್ಕಾರ ಕೊರೊನಾ ಹೆಸರು ಹೇಳಿಕೊಂಡು ರೈತರು, ದಲಿತರು, ಹಿಂದುಳಿದವರು, ಮಹಿಳೆಯರು, ಯುವಜನರು, ಕುಶಲ ಕರ್ಮಿ ಜಾತಿಗಳ ಜನರು ಮತ್ತು ಸಣ್ಣ ಕೈಗಾರಿಕಾ ಇಲಾಖೆಗಳಿಗೆ ದೊಡ್ಡ ರೀತಿಯಲ್ಲಿ ಅನುದಾನ ಕಡಿಮೆ ಮಾಡಿದೆ ಎಂದಿದ್ದಾರೆ.

ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ 2017-18 ರಲ್ಲಿ 3,112 ಕೋಟಿ ಕೋಟಿ ಕೊಟ್ಟಿದ್ದೆವು. ಈಗ ಆ ಪ್ರಮಾಣ 2,315 ಕೋಟಿಗೆ ಇಳಿಕೆಯಾಗಿದೆ. ಸುಮಾರು 797 ಕೋಟಿ ರೂಗಳಷ್ಟು ಇಳಿಕೆಯಾಗಿದೆ. ಬಿಜೆಪಿ ಸರ್ಕಾರ ಪರಿಶಿಷ್ಟ ಜಾತಿ, ಪಂಗಡ ಮತ್ತು ಮಹಿಳೆಯರು ಹಾಗೂ ಅಲ್ಪಸಂಖ್ಯಾತರ ವಿರೋಧಿಗಳು ಅಷ್ಟೆ ಅಲ್ಲ, ಹಿಂದುಳಿದ ವರ್ಗ, ಮಹಿಳೆಯರು, ಯುವಜನರು, ಕುಶಲ ಕರ್ಮಿ ಜಾತಿಗಳ ಜನರಿಗೆ ಮತ್ತು ಕೃಷಿ, ಸಣ್ಣ ಕೈಗಾರಿಕಾ ಇಲಾಖೆಗಳನ್ನು ದಮನ ಮಾಡುತ್ತಿದೆ ಹಾಗೂ ಕಾರ್ಪೊರೇಟ್ ಬಂಡವಾಳಿಗರ ಪರವಾದ ನಿಲುವುಳ್ಳವರಾಗಿದ್ದಾರೆ ಎಂಬ ಅಸಮಾಧಾನ ಜನರಲ್ಲಿ ವ್ಯಾಪಕವಾಗಿದೆ.

ಬಿಜೆಪಿ ಸರ್ಕಾರ ಹಿಂದುಳಿದ ವರ್ಗಗಳಿಗೆ ನಿರಂತರವಾಗಿ ಅನುದಾನಗಳನ್ನು ಕಡಿತ ಮಾಡಿದ್ದು ಒಂದು ಸಮಸ್ಯೆಯಾದರೆ ಈ ವರ್ಗದ ಮಕ್ಕಳ ಶಿಕ್ಷಣಕ್ಕೂ ಸಂಚಕಾರ ತರಲಾಗಿದೆ. ವಿದ್ಯಾಸಿರಿ ಯೋಜನೆಗೆ 2021-22 ರ ಬಜೆಟ್‍ನಲ್ಲಿ 150 ಕೋಟಿ ಒದಗಿಸಿದ್ದೇವೆಂದು ಹೇಳಲಾಗಿತ್ತು. ಆದರೆ ಜನವರಿ 2022 ರ ಅಂತ್ಯಕ್ಕೆ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಮೆಟ್ರಿಕ್ ನಂತರದ ವಿದ್ಯಾರ್ಥಿ ವೇತನ [ಕೇಂದ್ರ ಪುರಸ್ಕತ ಯೋಜನೆ]ಕ್ಕೆ 50 ಕೋಟಿ ನೀಡಲಾಗುವುದೆಂದು ಹೇಳಲಾಗಿತ್ತು. ಆದರೆ ಡಿಸೆಂಬರ್ ಅಂತ್ಯದ ವೇಳೆಗೆ ಕೇವಲ 19 ಲಕ್ಷ ಮಾತ್ರ ಬಿಡುಗಡೆ ಮಾಡಲಾಗಿದೆ. ಹಾಗಾಗಿ ಕೇಂದ್ರ ಸರ್ಕಾರವೂ ಅನ್ಯಾಯವೆಸಗುತ್ತಿದೆ.

ಹಿಂದುಳಿದ ವರ್ಗಗಳ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಅಲೆಮಾರಿ, ಅರೆ ಅಲೆಮಾರಿ ಜನಾಂಗದ ಅಭಿವೃದ್ಧಿಗಾಗಿ 12 ಕೋಟಿ ರೂಪಾಯಿಗಳನ್ನು ಬಜೆಟ್ ನಲ್ಲಿ ಮೀಸಲಿರಿಸಲಾಗಿದೆ. ಆದರೆ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳು ಆಶ್ರಮ ಶಾಲೆಗಳಲ್ಲಿದ್ದರೆ ಅವರಿಗೆ ಶುಚಿ ಕಿಟ್ ಅನ್ನು ನೀಡಲಾಗುತ್ತಿತ್ತು. ಸೋಪು, ಬಾಚಣಿಗೆ, ತಲೆಗೆ ಎಣ್ಣೆ ಇತ್ಯಾದಿಗಳಿರುವ ಕಿಟ್ ಅದು. ಇದಕ್ಕಾಗಿ 22 ಕೋಟಿ ರೂಪಾಯಿಗಳಿಗಿಳಿದಿದೆ.

ಇದರಲ್ಲಿ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿಗಳು ಆಶ್ರಮ ಶಾಲೆಗಳಲ್ಲಿದ್ದರೆ ಅವರಿಗಾಗಿ ಜಮಖಾನ, ಚಾಪೆ, ಬೆಡ್ ಶೀಟ್ ಇತ್ಯಾದಿಗಳಿಗಾಗಿ 9.25 ಕೋಟಿಗಳಿದ್ದರೂ ಒಂದು ರೂಪಾಯಿಯನ್ನೂ ಖರ್ಚು ಮಾಡಿಲ್ಲ. ಇದರಿಂದ ನಮ್ಮ ಹಿಂದುಳಿದ ವರ್ಗಗಳ ಮಕ್ಕಳು ನೆಲದಲ್ಲಿ ಮಲಗುವ ಪರಿಸ್ಥಿತಿ ಬಂದಿದೆ. ಐ ಐ ಟಿ, ಐಐಎಸ್‍ಸಿ, ಐಐಎಂ ಗಳಿಗೆ ಪ್ರವೇಶ ಪಡೆಯುವ ಮಕ್ಕಳಿಗೆ ಪ್ರೋತ್ಸಾಹ ಧನವಾಗಿ ಒಂದು ಬಾರಿಗೆ ತಲಾ 2 ಲಕ್ಷ ರೂಪಾಯಿ ನೀಡುವ ಯೋಜನೆ ಜಾರಿಗೆ ತಂದಿದ್ದೆವು. ಅದರಲ್ಲೂ ಸಹ ಒಂದು ರೂಪಾಯಿಯನ್ನೂ ನೀಡಿಲ್ಲ.

ದೇವರಾಜ ಅರಸು ವಿದೇಶಿ ವ್ಯಾಸಂಗಕ್ಕೆ ತೆರಳುವ ವಿದ್ಯಾರ್ಥಿಗಳಿಗೆ ವೇತನ ನೀಡುವ ಕಾರ್ಯಕ್ರಮಕ್ಕೂ ಒಂದು ರೂಪಾಯಿಯನ್ನು ನೀಡಿಲ್ಲ. ಯುಪಿಎಸ್‍ಸಿ, ಬ್ಯಾಂಕಿಂಗ್ ಮುಂತಾದವುಗಳಿಗೆ ತರಬೇತಿ ನೀಡಲು ನಿಗಧಿಗೊಳಿಸಿದ್ದ ಅನುದಾನದಲ್ಲಿ ಒಂದು ರೂಪಾಯಿಯನ್ನೂ ನೀಡಿಲ್ಲ. ಈ ಮೂರೂ ಕಾರ್ಯಕ್ರಮಗಳಿಗೆಂದು 20 ಕೋಟಿ ನಿಗಧಿಗೊಳಿಸಲಾಗಿದೆ. ಆದರೆ ಹಣವನ್ನು ಖರ್ಚು ಮಾಡದೆ ಹಾಗೆ ಉಳಿಸಿಕೊಳ್ಳಲಾಗಿದೆ. ಒಟ್ಟಾರೆ ಹಿಂದುಳಿದ ವರ್ಗಗಳ ಮಕ್ಕಳು ವಿದ್ಯಾವಂತರಾಗಿ ತಲೆ ಎತ್ತಿ ಬಾಳುವಂತಾಗಬಾರದು ಎಂಬುದೇ ಬಿಜೆಪಿ ಸರ್ಕಾರದ ಉದ್ದೇಶವಾಗಿರುವಂತಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಮಾತೆತ್ತಿದರೆ ಯುವಜನರ ಹೆಸರು ಪ್ರಸ್ತಾಪಿಸುವ ಬಿಜೆಪಿಯು ಯುವಜನರ ಕಲ್ಯಾಣಕ್ಕಾಗಿ ಯುವಜನ ಸೇವಾ ಇಲಾಖೆಗೆ ನಾವು ಕೊಡುತ್ತಿದ್ದ ಅನುದಾನದಲ್ಲಿ ಸುಮಾರು 122 ಕೋಟಿ ರೂಪಾಯಿಗಳಷ್ಟು ಕಡಿಮೆ ಮಾಡಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಪರಿಸ್ಥಿತಿಯೂ ಅಷ್ಟೆ. ನಮ್ಮ ಅವಧಿಯಲ್ಲಿ 4976 ಕೋಟಿ ರೂಗಳಷ್ಟು ಅನುದಾನ ನೀಡುತ್ತಿದ್ದೆವು. ಈಗ 458 ಕೋಟಿಗಳಷ್ಟು ಅನುದಾನ ಕಡಿಮೆಯಾಗಿದೆ.

ಅಂಗನವಾಡಿ ಸಹಾಯಕಿಯರು ಮತ್ತು ಕಾರ್ಯಕರ್ತೆಯರಿಗೆ ಒಂದು ರೂಪಾಯಿಯಷ್ಟು ಅನುದಾನವನ್ನೂ ಬಿಜೆಪಿ ಸರ್ಕಾರ ಹೆಚ್ಚು ಮಾಡಿಲ್ಲ. ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆಗೆ ನೀಡುತ್ತಿದ್ದ ಅನುದಾನದಲ್ಲಿ 855 ಕೋಟಿಗಳಷ್ಟು ಕಡಿಮೆಯಾಗಿದೆ. ಕೃಷಿ, ರೇಷ್ಮೆ, ತೋಟಗಾರಿಕಾ ಇಲಾಖೆಗಳಿಗೆ ನಾವು 2017-18 ರಲ್ಲಿ 6532 ಕೋಟಿ ಅನುದಾನ ನೀಡಿದ್ದೆವು.

ಈಗ ಅದರ ಪ್ರಮಾಣ 5843 ಕೋಟಿಗಳಿಗೆ ಇಳಿದಿದೆ. ಕೃಷಿ ಭಾಗ್ಯದಂತಹ ಅತ್ಯತ್ತಮ ಕಾರ್ಯಕ್ರಮಗಳನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಸರ್ಕಾರದ ನಿಲುವಿನಿಂದಾಗಿ ಕೃಷಿಯ ಬೆಳವಣಿಗೆ ನಿರಾಶಾದಾಯಕವಾಗಿದೆ. 2017-18 ರಲ್ಲಿ ಕೃಷಿಯ ಜಿಎಸ್‍ಡಿಪಿ ಬೆಳವಣಿಗೆ ದರವು ಶೇ.19.6 ರಷ್ಟಿತ್ತು. 2020-21 ರಲ್ಲಿ ಇದು ಶೇ. 5.7 ಕ್ಕೆ ಇಳಿಯಿತು. ಸಣ್ಣ ಕೈಗಾರಿಕೆಗಳ ಪರಿಸ್ಥಿತಿಯೂ ಹೀಗೆ ಆಗಿದೆ.

ಕೃಷಿ ಮತ್ತು ಸಣ್ಣ, ಸೂಕ್ಷ್ಮ ಕೈಗಾರಿಕಾ ವಲಯಗಳು ಒಟ್ಟು ಶೇ. 90 ರಷ್ಟು ಉದ್ಯೋಗವನ್ನು ಸೃಷ್ಟಿಸುತ್ತಿವೆ. ಇಂಥ ವಲಯಗಳನ್ನೆ ಬಿಜೆಪಿ ಸರ್ಕಾರ ದಮನ ಮಾಡಲು ಹೊರಟಿದೆ. ಕೇಂದ್ರ ಸರ್ಕಾರ ಕೂಡ 2022-23 ರ ಬಜೆಟ್ ನಲ್ಲಿ ಈ ವಲಯಗಳಿಗೆ ಶೇ. 37 ರವರೆಗೆ ಸಬ್ಸಿಡಿಯನ್ನು ಕಡಿತ ಮಾಡಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಕೇಂದ್ರ, ರಾಜ್ಯ ಸರ್ಕಾರಗಳು ದಮನಿತ ವರ್ಗಗಳ ಮತ್ತು ಆದ್ಯತಾ ವಲಯಗಳ ಕುರಿತಾದ ನಿರ್ಲಕ್ಷ್ಯದಿಂದಾಗಿ ಜನರು ವಿಪರೀತ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ಕಲಿಯುತ್ತಿರುವ ಮಕ್ಕಳಿಗೆ ಸಮರ್ಪಕ ವಿದ್ಯಾರ್ಥಿ ವೇತನಗಳಿಲ್ಲ. ಸಾಲ, ಸಹಾಯ ಧನ, ಪ್ರೋತ್ಸಾಹ ಧನಗಳನ್ನು ನಿಲ್ಲಿಸಲಾಗಿದೆ. ಕೃಷಿ ಮತ್ತದರ ಪೂರಕ ಇಲಾಖೆಗಳು ನಿರ್ಲಕ್ಷ್ಯಕ್ಕೆ ಒಳಗಾಗಿವೆ.

ಅಲ್ಪಸಂಖ್ಯಾತರು, ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡಗಳ ಜನರು, ಸಣ್ಣ ಪುಟ್ಟ ಕೈಗಾರಿಕೋದ್ಯಮಿಗಳು, ಯುವಜನರು ಸೇರಿದಂತೆ ಸಮಸ್ತ ದುಡಿಯುವ ವರ್ಗಗಳು ಈ ಸರ್ಕಾರದ ಆಡಳಿತದಲ್ಲಿ ವಿಪರೀತ ದಮನಕ್ಕೆ ಒಳಗಾಗಿವೆ. ಆದ್ದರಿಂದ ಸರ್ಕಾರ ಈ ವರ್ಷದ ಬಜೆಟ್‍ನಲ್ಲಿ ದಲಿತ, ದಮನಿತ, ರೈತ, ಮಹಿಳೆ, ಯುವ ಜನ, ಪಶುಪಾಲಕ, ಕುಶಲ ಕರ್ಮಿ ಜಾತಿ, ವರ್ಗಗಳು ಸೇರಿದಂತೆ ಎಲ್ಲ ದುಡಿಯುವ ಜನರಿಗೆ ಅದ್ಯತೆಯನ್ನು ನೀಡಿ ನ್ಯಾಯಯುತ ಅನುದಾನಗಳನ್ನು ನೀಡಬೇಕೆಂದು ಆಗ್ರಹಿಸುತ್ತೇನೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ABOUT THE AUTHOR

...view details