ಬೆಂಗಳೂರು: ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಉಪ ಚುನಾವಣೆ ಮುಂದೂಡಿಕೆಯಾಗಿರುವುದರಿಂದ ಬೆಳಗಾವಿಯಲ್ಲಿಯೇ ವಿಧಾನ ಮಂಡಲ ಅಧಿವೇಶನ ನಡೆಸುವಂತೆ, ಇದಕ್ಕಾಗಿ ಶೀಘ್ರವೇ ದಿನಾಂಕ ನಿಗದಿ ಪಡಿಸುವಂತೆ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆದಿರುವ ಅವರು, ಉತ್ತರ ಕರ್ನಾಟಕ ಭಾಗದ ಸಮಸ್ಯೆಗಳ ಬಗ್ಗೆ ಗಮನ ಸೆಳೆಯುವ ಉದ್ದೇಶದಿಂದಲೇ ನಿರ್ಮಿಸಿರುವ ಬೆಳಗಾವಿಯ ಸುವರ್ಣಸೌಧದ ಬದಲಾಗಿ ಬೆಂಗಳೂರಿನಲ್ಲಿ ಅಧಿವೇಶನ ನಡೆಸಬೇಕೆಂದು ರಾಜ್ಯ ಸರ್ಕಾರ ತೀರ್ಮಾನಿಸಿರುವುದು ಸರಿಯಲ್ಲ. ಬೆಳಗಾವಿಯಲ್ಲೇ ಅಧಿವೇಶನ ನಡೆಸುವುದರಿಂದ ನೆರೆ ಪರಿಹಾರ ಕಾರ್ಯಗಳು ಸಹ ಚುರುಕಾಗುತ್ತವೆ ಎಂದಿದ್ದಾರೆ.
ರಾಜ್ಯದಲ್ಲಿ ಇತ್ತೀಚೆಗೆ ಉಂಟಾದ ಅತಿವೃಷ್ಟಿಯಿಂದಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಅಪಾರ ಪ್ರಮಾಣದ ಹಾನಿಯಾಗಿದೆ. ಲಕ್ಷಾಂತರ ಮಂದಿ ಮನೆ-ಮಠ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಹೊಲ ಗದ್ದೆ ತೋಟಗಳಿಗೆ ನೀರು ನುಗ್ಗಿ ಕೃಷಿಕರಿಗೆ ಸಂಕಷ್ಟ ಸ್ಥಿತಿ ಎದುರಾಗಿದೆ. ಪ್ರವಾಹದ ಭೀಕರತೆ ಉತ್ತರ ಕರ್ನಾಟಕ ಭಾಗದಲ್ಲಿ ತೀವ್ರವಾಗಿದ್ದು, ಅದರಲ್ಲಿಯೂ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದ ಭಾರಿ ಹಾನಿಯಾಗಿದೆ. ಇತ್ತೀಚಿಗೆ ಪ್ರವಾಸ ಕೈಗೊಂಡಾಗ ಜನರ ಕಷ್ಟಗಳನ್ನು ಕಣ್ಣಾರೆ ನೋಡಿದ್ದೇನೆ. ಇದಲ್ಲದೇ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭರದಿಂದ ಜನ ತತ್ತರಿಸಿದ್ದು ಕುಡಿವ ನೀರು ಉದ್ಯೋಗವಿಲ್ಲದೇ ಮತ್ತು ಜಾನುವಾರುಗಳಿಗೆ ಮೇವು ಸಿಗದೇ ತತ್ತರಿಸಿದ್ದಾರೆ ಎಂದಿದ್ದಾರೆ.
ಪ್ರವಾಹ ಪೀಡಿತರಿಗೆ ಪರಿಹಾರ ಕಾರ್ಯ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ ಇಂಥ ಸಂದರ್ಭ ವಿಧಾನಮಂಡಲ ಅಧಿವೇಶನವನ್ನು ಬೆಳಗಾವಿಯಲ್ಲಿ ನಡೆಸುವುದು ಸಮಂಜಸವಲ್ಲ ಆಶಾಭಾವನೆ ಮೂಡುತ್ತದೆ ಎಂದಿದ್ದಾರೆ.