ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ನಾಳೆಯಿಂದ ಕಠಿಣ ಕ್ರಮಗಳನ್ನು ಜಾರಿಗೆ ತರುವುದಾಗಿ ಸರ್ಕಾರ ಹೇಳಿರುವುದರಿಂದ ಈಗಾಗಲೇ ಉದ್ಯೋಗ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿರುವ ದುಡಿಯುವ ವರ್ಗಕ್ಕೆ ನೆರವಾಗುವಂತೆ ಪ್ರತಿ ಪಕ್ಷ ನಾಯಕ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಸಿದ್ದರಾಮಯ್ಯ, ಪಕ್ಷದ ಶಾಸಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಸರ್ಕಾರಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ.
ರಾಜ್ಯದಲ್ಲಿ ಸದ್ಯ ಬೇಡಿಕೆ ಇರುವುದಕ್ಕಿಂತ ಹೆಚ್ಚಿನ ಆಕ್ಸಿಜನ್ ಉತ್ಪಾದನೆಯಾಗುತ್ತಿದೆ. ನಮ್ಮಲ್ಲಿ ಉತ್ಪಾದನೆಯಾಗುವ ಆಕ್ಸಿಜನ್ ಅನ್ನು ಇಲ್ಲಿಯೇ ಉಳಿಸಿಕೊಳ್ಳಬೇಕು. ಜಿಲ್ಲಾವಾರು ಆಕ್ಸಿಜನ್ ಘಟಕಗಳನ್ನು ಸ್ಥಾಪಿಸಬೇಕು. ಆಕ್ಸಿಜನ್ ಸಿಲಿಂಡರ್ಗಳು ಕಾಳಸಂತೆಯಲ್ಲಿ ಮಾರಾಟ ಮಾಡುವ ದಂಧೆ ನಿಲ್ಲಿಸಿ ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳಿಗೂ ಸುಲಭವಾಗಿ ಆಕ್ಸಿಜನ್ ಸಿಗುವಂತೆ ಮಾಡಬೇಕು.
ಆಕ್ಸಿಜನ್ ಉತ್ಪಾದನೆಯಾಗುತ್ತಿರುವ ಪ್ರದೇಶಗಳಲ್ಲೇ ಆಕ್ಸಿಜನ್ ಲಭ್ಯತೆಯ ಆಧಾರದ ಮೇಲೆ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ಸ್ಥಾಪಿಸಬೇಕು. ಜಿಲ್ಲಾವಾರು ಚಿಕಿತ್ಸೆ ಎಂಬ ಅವೈಜ್ಞಾನಿಕ ವಿಧಾನವನ್ನು ಕೈಬಿಟ್ಟು ಸುತ್ತಮುತ್ತಲ ಏಳೆಂಟು ಜಿಲ್ಲೆಗಳ ರೋಗಿಗಳನ್ನು ಒಂದು ಕಡೆ ತಂದು ಆಕ್ಸಿಜನ್ ನೀಡಿ ರಕ್ಷಿಸಬೇಕು. ಇದರಿಂದ ಒತ್ತಡ ಕಡಿಮೆಯಾಗುತ್ತದೆ.
ಕಠಿಣ ಕ್ರಮ ಕೈಗೊಳ್ಳಿ:
ಖಾಸಗಿ ಆಸ್ಪತ್ರೆಗಳವರು ರೆಮ್ಡಿಸಿವಿರ್ ಔಷಧಿ ತರುವಂತೆ ರೋಗಿಗಳಿಗೆ ಹೇಳುತ್ತಿದ್ದಾರೆ ಎನ್ನಲಾಗ್ತಿದೆ. ಈ ಜೀವ ರಕ್ಷಕ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಕುರಿತು ಕಠಿಣ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಪ್ರತಿ ರೋಗಿಗೆ ಕನಿಷ್ಟ ಮಟ್ಟದ ಮೊತ್ತವನ್ನು ನಿಗದಿಪಡಿಸಲಾಗಿದೆ. ಅದರಿಂದ ಸಮರ್ಪಕವಾಗಿ ರೆಮ್ಡಿಸಿವಿರ್ ನಂತಹ ಔಷಧಗಳನ್ನು ನೀಡಲಾಗುತ್ತಿಲ್ಲ ಎಂಬ ಮಾಹಿತಿ ಇದೆ.
ಈ ಅವ್ಯವಸ್ಥೆಯನ್ನು ಸರಿ ಮಾಡಬೇಕು. ರಾಜ್ಯದ ಅಸಹಾಯಕ ರೋಗಿಗಳಿಗೆ ಸಾಮಾನ್ಯ, ಐ.ಸಿ.ಯು, ವೆಂಟಿಲೇಟರ್, ಆಕ್ಸಿಜನ್ ವ್ಯವಸ್ಥೆ ಇರುವ ಸಾಕಷ್ಟು ಬೆಡ್ಗಳನ್ನು ಸ್ಥಾಪಿಸಲು ಯಾವ ಸಮಸ್ಯೆ ಇದೆ? ಬೆಡ್ಗಳು ಎಷ್ಟು ಬೇಕಾಗಬಹುದು ಎಂಬುದನ್ನು ಮೊದಲೇ ಅಂದಾಜಿಸಿ ಕಾರ್ಯೋನ್ಮಖರಾಗಬೇಕು. ವೈದ್ಯರುಗಳಿಗೆ ಸಂಬಂಧಿಸಿದಂತೆ, ಖಾಸಗಿ, ನಿವೃತ್ತರಾದವರನ್ನು ಅಗತ್ಯ ಬಿದ್ದರೆ ನೇಮಿಸಿಕೊಳ್ಳಬೇಕು. ದಾದಿಯರ ವಿಷಯದಲ್ಲೂ ಹಾಗೆ ಮಾಡಬೇಕು. ಈಗಾಗಲೇ ಕೋವಿಡ್ ನಿರೋಧಕ ಲಸಿಕೆ ಹಾಕಿಸಿಕೊಂಡಿರುವ ಅಂತಿಮ ವರ್ಷಗಳಲ್ಲಿರುವ ವಿದ್ಯಾರ್ಥಿಗಳನ್ನು ಚಿಕಿತ್ಸೆಗೆ ನಿಯೋಜಿಸಬೇಕು. ಲಸಿಕೆ ಹಾಕಿಸಿಕೊಳ್ಳದವರಿಗೆ ಆದ್ಯತೆಯ ಮೇಲೆ ಲಸಿಕೆ ಹಾಕಬೇಕು.