ಕಾಂಗ್ರೆಸ್‌ಗೆ ಬೆಂಬಲ: ಹೆಚ್.ವಿಶ್ವನಾಥ್ ಬೆಂಗಳೂರು: ಸಿದ್ದರಾಮಯ್ಯ ಕೋಲಾರದಲ್ಲಿ ಗೆಲ್ಲುತ್ತಾರೆ. ನಾವು ಕೂಡ ಅವರ ಪರ ಪ್ರಚಾರ ಮಾಡುತ್ತೇವೆ ಎಂದು ವಿಧಾನ ಪರಿಷತ್ ಬಿಜೆಪಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿದರು. ವಿಧಾನ ಸೌಧದಲ್ಲಿ ಮಾತನಾಡಿದ ಅವರು, ಕೋಲಾರದಲ್ಲಿ ಸಿದ್ದರಾಮಯ್ಯಗೆ ಸಿದ್ದರಾಮಯ್ಯ ಅವರೇ ಪ್ಲಸ್ ಪಾಯಿಂಟ್ ಎಂದರು.
ಕಾಂಗ್ರೆಸ್‌ಗೆ ಬೆಂಬಲ: ಇಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದೇನೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ವಿಪಕ್ಷ ನಾಯಕ ಸಿದ್ದರಾಮಯ್ಯರನ್ನೂ ಭೇಟಿ ಮಾಡಿದ್ದೇನೆ. ನಾನು ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತೇನೆ. ಇದು ಕಾಂಗ್ರೆಸ್ ಪಕ್ಷ ಸೇರ್ಪಡೆಯಲ್ಲ. ನಾನು ಸ್ವತಂತ್ರ. ಯಾವುದೇ ಪಕ್ಷಕ್ಕೆ ಸೇರಿದವನಲ್ಲ. ನಾನು ಕಾಂಗ್ರೆಸ್‌ಗೆ ಬೆಂಬಲ ನೀಡುತ್ತೇನೆ ಎಂದು ತಿಳಿಸಿದರು. ತಮ್ಮ ನಿವಾಸದ ಬಳಿ ಮಾತನಾಡಿದ ಡಿಕೆಶಿ, ಹೆಚ್.ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆ ದಿನಾಂಕ ನಿಗದಿಯಾಗಿದೆ ಎಂದು ತಿಳಿಸಿದ್ದರು. ಈ ಬಗ್ಗೆ ಹೆಚ್.ವಿಶ್ವನಾಥ್ ಪ್ರತಿಕ್ರಿಯೆ ನೀಡಲಿಲ್ಲ.
ರಾಜಕೀಯದಲ್ಲಿ ವಿಶ್ವಾಸ ಮುಖ್ಯ: ನನ್ನ ಮನೆಗೆ ವಾಪಸ್ ಹೋಗುವುದಕ್ಕೆ ಏನಿದೆ. ಯಾವುದೇ ಷರತ್ತುಗಳಿಲ್ಲ. ನಾನು ಪಕ್ಷ ಬಿಡುವಾಗ ತಿಳಿಸಿಯೇ ಹೋಗುವುದು. ಜೆಡಿಎಸ್ ಬಿಡುವಾಗ ದೇವೇಗೌಡ ಅವರಿಗೂ ತಿಳಿಸಿದ್ದೆ. ಕಾಂಗ್ರೆಸ್ ಬಿಡುವಾಗ ಪರಮೇಶ್ವರ್ ಅವರಿಗೆ ಕಚೇರಿಯಲ್ಲೇ ತಿಳಿಸಿದ್ದೆ. ರಾಜಕೀಯದಲ್ಲಿ ವಿಶ್ವಾಸ ಮುಖ್ಯ ಎಂದರು. ಸಿದ್ದರಾಮಯ್ಯ ಮುಂದಿನ ಸಿಎಂ ಆಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, ಇನ್ನೂ ಚುನಾವಣೆ ಆಗಿಲ್ಲ. ಚುನಾವಣೆ ಆದ ಮೇಲೆ ಗೊತ್ತಾಗುತ್ತದೆ ಎಂದು ತಿಳಿಸಿದರು.
ಹೆಚ್.ವಿಶ್ವನಾಥ್ ಈಗಾಗಲೇ ಬಿಜೆಪಿಯಿಂದ ದೂರ ಉಳಿದಿದ್ದು, ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಈಗಾಗಲೇ ಈ ಸಂಬಂಧ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯರನ್ನು ಭೇಟಿಯಾಗಿ ಒಂದು ಸುತ್ತಿನ ಚರ್ಚೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಸರ್ಕಾರದ ವಿರುದ್ಧ ವಾಗ್ದಾಳಿ: ಸಚಿವ ಸ್ಥಾನ ಕೊಟ್ಟರೂ ನನಗೆ ಬೇಡ. ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ. ಸರ್ಕಾರದಿಂದ ಒಳ್ಳೆಯ ಕಾರ್ಯಕ್ರಮಗಳನ್ನು ನಿರೀಕ್ಷೆ ಮಾಡಿದ್ದೆವು. ಅದೆಲ್ಲವೂ ಸುಳ್ಳಾಯಿತು ಎಂದು ಎಂಎಲ್ಸಿ ಹೆಚ್.ವಿಶ್ವನಾಥ್ ಬಿಜೆಪಿ ಸರ್ಕಾರದ ವಿರುದ್ದ ಇತ್ತೀಚೆಗೆ ವಾಗ್ದಾಳಿ ನಡೆಸಿದ್ದರು. ಚನ್ನಪಟ್ಟಣದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ನಾವೆಲ್ಲ ಸೇರಿ ತಂದಿದ್ದು. ನಾವು ಹೊರಗೆ ಬರದಿದ್ದರೆ ಸರ್ಕಾರ ಎಲ್ಲಿ ಬರುತ್ತಿತ್ತು?. ಸರ್ಕಾರ ರಚನೆಯಾಗಬೇಕಾದಾಗ ನಾವು ಬೇಕಿತ್ತು. ಸರ್ಕಾರ ಸರಿಯಾಗಿ ಆಡಳಿತ ನಡೆಸುತ್ತಿಲ್ಲ ಎಂದು ಟೀಕಿಸಿದ್ದರು.
ಇದನ್ನೂ ಓದಿ:ರಾಜ್ಯ ಸರ್ಕಾರದ ಮೇಲಿದ್ದ ನಿರೀಕ್ಷೆಗಳೆಲ್ಲ ಸುಳ್ಳಾದವು: ಹೆಚ್.ವಿಶ್ವನಾಥ್
ಕೆ.ಎಸ್.ಈಶ್ವರಪ್ಪ ಟಾಂಗ್: ಹೆಚ್.ವಿಶ್ವನಾಥ್ ಹಾಗೂ ಸಿದ್ದರಾಮಯ್ಯ ಅವರಿಗೆ ಯಾವ ಪಕ್ಷದಲ್ಲಿರಬೇಕೆಂದೇನಿಲ್ಲ, ಅವರಿಗೆ ಅಧಿಕಾರದಲ್ಲಿ ಇರಬೇಕು ಎನ್ನುವುದೊಂದೇ ಮುಖ್ಯ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಟೀಕಿಸಿದ್ದರು. ಹೆಚ್.ವಿಶ್ವನಾಥ್ ಬಿಜೆಪಿ ತೊರೆಯುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಹೆಚ್.ವಿಶ್ವನಾಥ್ ಮತ್ತು ಸಿದ್ದರಾಮಯ್ಯರಿಗೆ ಯಾವ ಪಕ್ಷದಲ್ಲಿರಬೇಕು ಎಂದು ಇಲ್ಲ ಅವರಿಗೆ ಅಧಿಕಾರ ಮುಖ್ಯ. ಆದರೇ, ನಮ್ಮದು ಹಾಗಲ್ಲ. ನಮ್ಮ ಪಕ್ಷ ನನ್ನ ತಾಯಿ ಇದ್ದಂತೆ, ತಾಯಿಗೆ ಜೀವನದಲ್ಲಿ ದ್ರೋಹ ಮಾಡಿಲ್ಲ ಎಂದು ವಾಗ್ದಾಳಿ ನಡೆಸಿದ್ದರು.