ಬೆಂಗಳೂರು:ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಇಂದು ಬೆಳಗ್ಗೆ ಸುರಪುರಕ್ಕೆ ಪ್ರಯಾಣ ಬೆಳೆಸಿದ್ದಾರೆ. ಹೀಗಾಗಿ ಅವರು ಮೊದಲ ದಿನದ ಕಲಾಪಕ್ಕೆ ಗೈರಾಗಲಿದ್ದಾರೆ. ಬೆಂಗಳೂರಿನಿಂದ ಬೆಳಗ್ಗೆ 7.30 ಕ್ಕೆ ತೆರಳಿರುವ ಅವರು ಮೊದಲು ಸುರಪುರದಲ್ಲಿ, ನಂತರ ಶಹಾಪುರದಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶ ನಡೆಸಲಿದ್ದಾರೆ. ಇದಾದ ಬಳಿಕ ಕಲಬುರಗಿಗೆ ತೆರಳಿ ವಾಸ್ತವ್ಯ ಹೂಡಲಿದ್ದಾರೆ.
ಪ್ರವಾಸ ಪಟ್ಟಿ ಇಂತಿದೆ.. ಇಂದು ಸಿದ್ದರಾಮಯ್ಯ ಅವರು ಬೆಂಗಳೂರಿನಿಂದ ಸುರಪುರ ತಲುಪಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡು ಬಳಿಕ ಬಸ್ ಮೂಲಕ ಶಹಾಪುರ ತಲುಪಿ ಸಭೆ ನಡೆಸಲಿದ್ದಾರೆ. ಅಲ್ಲಿಂದ ಕಾರಿನಲ್ಲಿ 80 ಕಿ.ಮೀ ಕ್ರಮಿಸಿ ಕಲಬುರಗಿ ಉತ್ತರ ಹಾಗೂ ದಕ್ಷಿಣ ವಿಧಾನಸಭೆ ಕ್ಷೇತ್ರಗಳ ಜಂಟಿ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಅಂದು ಕಲಬುರುಗಿಯಲ್ಲೇ ವಾಸ್ತವ್ಯ ಹೂಡಲಿರುವ ಅವರು ಫೆ.11 ರಂದು ಅಲ್ಲಿಂದ 90 ಕಿ.ಮೀ ಕಾರಲ್ಲಿ ತೆರಳಿ ಸಿಂದಗಿಯಲ್ಲಿ ಸಭೆ ನಡೆಸುವವರಿದ್ದಾರೆ. ಬಳಿಕ ಇಂಡಿ, ನಾಗಠಾಣದಲ್ಲಿ ಸಭೆ ನಡೆಸಿ ವಿಜಯಪುರಕ್ಕೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ.
ಫೆ.12 ರಂದು ಬೆಳಗ್ಗೆ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ ಪಾಟೀಲ್ ಪ್ರತಿನಿಧಿಸುವ ಬಬಲೇಶ್ವರದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಅಲ್ಲಿಂದ ಮಧ್ಯಾಹ್ನ ದೇವರ ಹಿಪ್ಪರಗಿ, ಸಂಜೆ ಬಸವನ ಬಾಗೇವಾಡಿಯಲ್ಲಿ ಸಭೆ ಆಯೋಜಿಸಲಿದ್ದಾರೆ. ಆಲಮಟ್ಟಿಯಲ್ಲಿ ವಾಸ್ತವ್ಯ ಹೂಡಲಿರುವ ಅವರು ಫೆ.13 ರಂದು ಬೆಂಗಳೂರಿಗೆ ಆಗಮಿಸಿ ವಿಧಾನಸಭೆಯಲ್ಲಿ ರಾಜ್ಯಪಾಲರ ಕಾರ್ಯ ಕಲಾಪದಲ್ಲಿ ಭಾಗಿಯಾಗಲಿದ್ದಾರೆ.
ಇಂದಿನಿಂದ ಅಧಿವೇಶನ ಪ್ರಾರಂಭ:2023ನೇ ಸಾಲಿನ ಮೊದಲ ವಿಧಾನ ಮಂಡಲ ಜಂಟಿ ಅಧಿವೇಶನ ಇಂದು ಆರಂಭವಾಗಲಿದ್ದು, ವಿಧಾನಸಭೆ ಹಾಗೂ ವಿಧಾನಪರಿಷತ್ ಉದ್ದೇಶಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಮಾಡಲಿದ್ದಾರೆ. ರಾಜ್ಯ ಸರ್ಕಾರದ ಒಂದು ವರ್ಷದ ಸಾಧನೆಯನ್ನು ಬಣ್ಣಿಸಲಿದ್ದಾರೆ. ಈ ಸಂದರ್ಭ ಪ್ರತಿಪಕ್ಷ ನಾಯಕರಾಗಿ ಸಿದ್ದರಾಮಯ್ಯ ಉಪಸ್ಥಿತಿ ಅನಿವಾರ್ಯವಾಗಿತ್ತು. ಆದರೆ ಮೇ ತಿಂಗಳಲ್ಲಿ ನಡೆಯುವ ವಿಧಾನಸಭೆ ಚುನಾವಣೆಯನ್ನು ಪ್ರಮುಖ ಆದ್ಯತೆಯಾಗಿಸಿಕೊಂಡಿರುವ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆಯನ್ನೇ ಪ್ರಮುಖವಾಗಿ ಪರಿಗಣಿಸಿದೆ. ಇದರ ಸಲುವಾಗಿ ಇಂದು ಪ್ರವಾಸ ಬೆಳೆಸಿರುವ ಸಿದ್ದರಾಮಯ್ಯ ಭಾನುವಾರ ಸಂಜೆ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯಲ್ಲಿ ಭಾಗಿಯಾಗಲಿದ್ದಾರೆ.
ಇದನ್ನೂ ಓದಿ:ನಾಳೆ ಮಂಗಳೂರಿಗೆ ಅಮಿತ್ ಶಾ; ಕೇಂದ್ರ ಗೃಹ ಸಚಿವರ ರೋಡ್ ಶೋ ರದ್ದು, ಕೋರ್ ಕಮಿಟಿ ಸಭೆ ಮಾತ್ರ
ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವ ಕನಸು ಕಾಣುತ್ತಿರುವ ಕಾಂಗ್ರೆಸ್ ನಿರಂತರ ಪ್ರವಾಸ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಎರಡನೇ ಹಂತದ ಪ್ರಜಾಧ್ವನಿ ಬಸ್ ಯಾತ್ರೆಯು ಫೆಬ್ರವರಿ ಮೂರರಂದು ಚಾಲನೆ ಪಡೆದಿದ್ದು, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಉತ್ತರ ಕರ್ನಾಟಕ ಭಾಗ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ದಕ್ಷಿಣ ಕರ್ನಾಟಕ ಭಾಗದ ನೇತೃತ್ವ ವಹಿಸಿದ್ದಾರೆ. ಪ್ರತಿಪಕ್ಷ ನಾಯಕರ ಅನುಪಸ್ಥಿತಿಯಲ್ಲಿ ಉಪನಾಯಕ ಯು.ಟಿ ಖಾದರ್ ಇಂದು ಕಲಾಪದಲ್ಲಿ ಪ್ರತಿಪಕ್ಷ ನಾಯಕರ ಜವಾಬ್ದಾರಿ ನಿಭಾಯಿಸಲಿದ್ದಾರೆ. ನಿನ್ನೆಯವರೆಗೂ ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಇಂದು ಕಲಾಪದಲ್ಲಿ ಭಾಗಿಯಾಗುವ ಸಾಧ್ಯತೆ ಹೆಚ್ಚಿದೆ.
ಸರ್ಕಾರದ ವಿರುದ್ಧ ಹೋರಾಟಕ್ಕೆ ಪ್ರತಿಪಕ್ಷ ಸಜ್ಜು: ಇಂದು ವಿಧಾನಸಭೆಯಲ್ಲಿ ಜಂಟಿ ಅಧಿವೇಶನವನ್ನು ಉದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದು ಇದಾದ ಬಳಿಕ ಸಂತಾಪ ಸೂಚಿಸಿ ಕಲಾಪವನ್ನು ಸೋಮವಾರಕ್ಕೆ ಮುಂದೂಡಲಾಗುತ್ತದೆ. ಯಾವುದೇ ಚರ್ಚೆಗಳು ಇಂದು ನಡೆಯುವುದಿಲ್ಲ. ರಾಜ್ಯಪಾಲರ ಭಾಷಣ ಸಂದರ್ಭ ಯಾವ ರೀತಿ ಅದಕ್ಕೆ ಪ್ರತಿಕ್ರಿಯಿಸಬೇಕು? ಹಾಗೂ ಭಾಷಣದ ಬಳಿಕ ಯಾರ್ಯಾರು ಮಾತನಾಡಬೇಕು? ಎಂಬುದರ ಕುರಿತು ಕಾಂಗ್ರೆಸ್ ನಾಯಕರು ಚರ್ಚಿಸಿದ್ದಾರೆ. ವಾಡಿಕೆಯಂತೆ ಪ್ರತಿಪಕ್ಷವಾಗಿ ರಾಜ್ಯಪಾಲರ ಭಾಷಣವನ್ನು ಕಾಂಗ್ರೆಸ್ ಖಂಡಿಸುವುದು ಬಹುತೇಕ ಖಚಿತ. ಇನ್ನು, ಭಾಷಣದ ವೇಳೆ ಗದ್ದಲ ಅಥವಾ ಪ್ರತಿರೋಧವನ್ನು ಕಾಂಗ್ರೆಸ್ ಒಡ್ಡುತ್ತದೆಯೇ? ಎಂಬ ಬಗ್ಗೆ ಮಾಹಿತಿ ಇಲ್ಲವಾಗಿದೆ.
ಮುಂದಿನ ಸೋಮವಾರದಿಂದ ಗುರುವಾರದವರೆಗೆ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಲಿದ್ದು ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಭಯ ಸದನಗಳಲ್ಲೂ ರಾಜ್ಯಪಾಲರ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಉತ್ತರ ನೀಡಲಿದ್ದಾರೆ. ಮುಂದಿನ ಶುಕ್ರವಾರ ರಾಜ್ಯ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಆಗಲಿದೆ. ಫೆಬ್ರವರಿ 20ರಿಂದ ಒಂದು ವಾರ ಬಜೆಟ್ ಮೇಲಿನ ಚರ್ಚೆ ನಡೆದು ಬಜೆಟ್ ಅಂಗೀಕಾರ ಪಡೆಯಲಿದೆ. ಬಜೆಟ್ ಪೂರ್ವ ಹಾಗೂ ಬಜೆಟ್ ನಂತರದ ಎರಡು ವಾರದ ವಿಧಾನ ಮಂಡಲ ಉಭಯ ಸದನಗಳ ಅಧಿವೇಶನ ಸಾಕಷ್ಟು ಚರ್ಚೆ ಹಾಗೂ ಆಡಳಿತ ಮತ್ತು ಪ್ರತಿಪಕ್ಷಗಳ ವಾಕ್ ಸಮರಕ್ಕೆ ವೇದಿಕೆ ಆಗಲಿದೆ.
ಇದನ್ನೂ ಓದಿ:ನಾಳೆಯಿಂದ ಬಜೆಟ್ ಅಧಿವೇಶನ ಆರಂಭ: ಸರ್ಕಾರದ ವಿರುದ್ಧ ಹೋರಾಟಕ್ಕೆ ಕಾಂಗ್ರೆಸ್ ಸಿದ್ಧತೆ