ಬೆಂಗಳೂರು: ಇಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನ ಆಯೋಜಿಸಿದ್ದ ಹದಿನೆಂಟನೇ ವರ್ಷದ 'ರಮಣಶ್ರೀ ಶರಣ ಪ್ರಶಸ್ತಿ' ಪ್ರದಾನ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ವಿ.ಸೋಮಣ್ಣ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡರು. ಮೂವರು ನಾಯಕರು ಒಂದೇ ವೇದಿಕೆ ಹಂಚಿಕೊಂಡಿರುವುದು ವಿಧಾನಸಭಾ ಚುನಾವಣೆಯ ಬಳಿಕ ಇದೇ ಮೊದಲು.
ವಿ.ಸೋಮಣ್ಣ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ವಿರುದ್ಧ ಸ್ಪರ್ಧಿಸಿ ಸೋತಿದ್ದರು. ಅದಾದ ಬಳಿಕ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಸೋಮಣ್ಣ ಬಿಜೆಪಿಯಿಂದ ಸ್ವಲ್ಪ ಅಂತರ ಕಾಯ್ದುಕೊಂಡಿದ್ದರು. ಬಿಜೆಪಿ ರಾಜ್ಯಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದ ಸೋಮಣ್ಣ, ಬಿ.ವೈ.ವಿಜಯೇಂದ್ರ ಆಯ್ಕೆಯಿಂದ ಅಸಮಾಧಾನಗೊಂಡಿದ್ದರು. ಹೀಗಾಗಿ ಅವರು ಮತ್ತೆ ಕಾಂಗ್ರೆಸ್ ಸೇರುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸೋಮಣ್ಣನ ಮೇಲೆ ನನಗೆ ದ್ವೇಷ ಇಲ್ಲ: ಸಿಎಂ ಸಿದ್ದರಾಮಯ್ಯ ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, "ಸೋಮಣ್ಣ ಮತ್ತು ಬೊಮ್ಮಾಯಿ ಅವರನ್ನು ಹೊಗಳಿದರು. ನಾನು ಸೋಮಣ್ಣ, ಬೊಮ್ಮಾಯಿ ಒಂದೇ ಪಕ್ಷದಲ್ಲಿ ಇದ್ದೆವು. ಆಗ ಬಹಳ ಪ್ರೀತಿ, ವಿಶ್ವಾಸ ಇತ್ತು. ಈಗಲೂ ಬೊಮ್ಮಾಯಿಯವರ ಜತೆ ಅದೇ ಪ್ರೀತಿ ಇದೆ. ವೈಯಕ್ತಿಕವಾಗಿ ಬೊಮ್ಮಾಯಿಯವರ ತಂದೆ ನನಗೆ ಬಹಳ ಸಹಾಯ ಮಾಡಿದ್ದಾರೆ. ಇವರಿಗೆ ನನ್ನ ಮೇಲೆ ಆಂತರಿಕ ಪ್ರೀತಿ ಇದೆ. ಸೋಮಣ್ಣ ವರುಣಾದಲ್ಲಿ ನನ್ನ ವಿರುದ್ಧ ಸ್ಪರ್ಧೆ ಮಾಡಿದ್ದ. ಆದರೂ ಸೋಮಣ್ಣನಿಗೂ ನನ್ನ ಮೇಲೆ ಪ್ರೀತಿ ಇದೆ. ಪಾಪ ಹೈಕಮಾಂಡ್ ಹೇಳಿದ್ರು ಅಂತ ನನ್ನ ವಿರುದ್ಧ ನಿಂತ್ಕೊಂಡಿದ್ದ" ಎಂದರು.