ಬೆಂಗಳೂರು : ಬೆಳಗಾವಿಯಲ್ಲಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ವಿಧಾನಸಭೆ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಪತ್ರ ಬರೆದಿದ್ದಾರೆ.
ಪತ್ರದಲ್ಲಿ, ಕರ್ನಾಟಕ ರಾಜ್ಯ ವಿಧಾನಮಂಡಲದ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ 2005’ ರ ಸೆಕ್ಷನ್ 3 ಮತ್ತು 4 ರಂತೆ ಜುಲೈ ತಿಂಗಳಲ್ಲಿ ವಿಧಾನಸಭೆಯ ಅಧಿವೇಶನ ನಡೆಸಬೇಕಾಗಿತ್ತು. ಆದರೆ, ಸರ್ಕಾರ ಇದುವರೆಗೂ ಕೂಡ ಅಧಿವೇಶನ ನಡೆಸಲು ಯಾವುದೆ ಕ್ರಮಗಳನ್ನು ಕೈಗೊಳ್ಳದಿರುವುದು ನಿಯಮ ಬಾಹಿರ ಕ್ರಮವಾಗಿದೆ ಎಂದಿದ್ದಾರೆ.
ಸಿಎಂಗೆ ಸಿದ್ದರಾಮಯ್ಯ ಬರೆದ ಪತ್ರದ ಪ್ರತಿ ರಾಜ್ಯದ ಜನರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮುಖ್ಯವಾಗಿ ರಾಜ್ಯದ ಆರ್ಥಿಕ, ರಾಜಕೀಯ, ಆಡಳಿತಾತ್ಮಕ ಮತ್ತು ಆರೋಗ್ಯ ಕ್ಷೇತ್ರಗಳು ಆರೋಗ್ಯವು ಕುಸಿದು ಬಿದ್ದಿದೆ. ಕೋವಿಡ್ ಎರಡನೇ ಅಲೆಯನ್ನು ರಾಜ್ಯ ಸರ್ಕಾರ ನಿಭಾಯಿಸಿದ ರೀತಿ ಅತ್ಯಂತ ಅರಾಜಕವಾಗಿತ್ತು ಮತ್ತು ಜನರ ಪಾಲಿಗೆ ಮಾರಣಾಂತಿಕವಾಗಿತ್ತು.
ಈಗಾಗಲೇ ಮತ್ತೆ 3ನೇ ಅಲೆಯ ಭೀತಿ ಜನರನ್ನು ಕಾಡುತ್ತಿದೆ. ಜನರಿಗೆ ಸಮರ್ಪಕವಾಗಿ ಲಸಿಕೆ ಸಿಗುತ್ತಿಲ್ಲ. ಕೋವಿಡ್ 3ನೇ ಅಲೆ ನಿಭಾಯಿಸಲು ಸರ್ಕಾರ ಯಾವ ರೀತಿಯ ತಯಾರಿ ಮಾಡಿಕೊಂಡಿದೆ ಎಂಬ ಕುರಿತು ಮಾಹಿತಿ ಇಲ್ಲ. ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಬೇಕಾದ ನ್ಯಾಯಯುತವಾದ ಹಣ ನೀಡದೇ ವಂಚಿಸುತ್ತಿದೆ. ಆದರೂ ರಾಜ್ಯ ಸರ್ಕಾರ ಕಮಕ್ ಕಿಮಕ್ ಎನ್ನದೇ ಕುಳಿತಿದೆ.
ಓದಿ : ಕೆಆರ್‌ಎಸ್ ಬಿರುಕು ಬಿಟ್ಟಿದೆ ಅಂತಾ ನಾನು ಹೇಳಿಯೇ ಇಲ್ಲ: ಸಂಸದೆ ಸುಮಲತಾ ಯೂಟರ್ನ್
ಇದರ ನಡುವೆ ರಾಜ್ಯ ಸರ್ಕಾರವು ಭೀಕರ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ. ರಾಜ್ಯವನ್ನು ಮತ್ತೆ ಪ್ರವಾಹದ ಭೀತಿ ಕಾಡುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಪ್ರವಾಹದಿಂದ ಸಂಭವಿಸಿದ ಹಾನಿಗೆ ಸರ್ಕಾರ ಸಮರ್ಪಕ ಪರಿಹಾರ ನೀಡಿಲ್ಲ. ಕೃಷಿ ಕ್ಷೇತ್ರವನ್ನು ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಶಿಕ್ಷಣ ವ್ಯವಸ್ಥೆಯೂ ಅಧೋಗತಿಗೆ ಇಳಿದಿದೆ.
ರಾಜ್ಯದ ಅನೇಕ ಜಿಲ್ಲೆಗಳಲ್ಲಿ ದಲಿತ, ದಮನಿತ ಹೆಣ್ಣು ಮಕ್ಕಳ ಮೇಲೆ ಘೋರವಾದ ಅತ್ಯಾಚಾರ ಪ್ರಕರಣಗಳು, ಮರ್ಯಾದಾ ಹತ್ಯೆಗಳು ನಡೆಯುತ್ತಿವೆ. ಜನರ ಆತ್ಮಹತ್ಯೆಗಳು ಹೆಚ್ಚಾಗುತ್ತಿವೆ. ಕೃಷಿ ಕ್ಷೇತ್ರದ ಕುರಿತ ಸರ್ಕಾರದ ನಿರ್ಲಕ್ಷ್ಯ ಹೆಚ್ಚುತ್ತಿದೆ. ಮತ್ತೆ ಅಕ್ರಮ ಗಣಿಗಾರಿಕೆ ದಂಧೆ ಹೆಚ್ಚಾಗುತ್ತಿದೆ. ಒಟ್ಟಾರೆ ರಾಜ್ಯದ ಆಡಳಿತವು ಅಂಧಕಾರದಲ್ಲಿ ಮುಳುಗಿದೆ ಎಂದಿದ್ದಾರೆ.
ಕಷ್ಟಗಳ ಚರ್ಚೆ :ರಾಜ್ಯದ ಜನರು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ಚರ್ಚಿಸಿ ಅವುಗಳಿಗೆ ಸಮರ್ಪಕ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ನಿಯಮ ಪ್ರಕಾರ ಪ್ರತಿ ವರ್ಷ ಕನಿಷ್ಠ 60 ದಿನಗಳ ಕಾಲ ಅಧಿವೇಶನ ನಡೆಸಬೇಕು. ಮೇಲೆ ಉಲ್ಲೇಖಿಸಿದ ಕಾಯ್ದೆಯ ಪ್ರಕಾರ ವರ್ಷದಲ್ಲಿ ಕನಿಷ್ಠ 4 ಅಧಿವೇಶನಗಳನ್ನು ನಡೆಸಬೇಕು. ಜನವರಿಯಲ್ಲಿ 15, ಮಾರ್ಚ್ನಲ್ಲಿ 20, ಜುಲೈನಲ್ಲಿ 15, ಮತ್ತು ನವೆಂಬರ್ನಲ್ಲಿ 10 ದಿನಗಳ ಕಾಲ ಅಧಿವೇಶನ ನಡೆಸಬೇಕು.
ಆದರೆ, ಬಿಜೆಪಿ ಆಡಳಿತದ ಸರ್ಕಾರವು ಈ ನಿಯಮಗಳನ್ನೆಲ್ಲ ಗಾಳಿಗೆ ತೂರುತ್ತಿದೆ. 2020 ರಲ್ಲಿ ಒಟ್ಟಾರೆ 31 ದಿನ ಮತ್ತು 2021 ರಲ್ಲಿ ಇದುವರೆಗೆ 20 ದಿನ ಮಾತ್ರ ಅಧಿವೇಶನ ನಡೆಸಿದೆ. ಈ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ಬೆಳಗಾವಿಯಲ್ಲಿ ಇದುವರೆಗೆ ಒಂದು ಅಧಿವೇಶನವನ್ನೂ ನಡೆಸಿಲ್ಲ. ಸರ್ಕಾರದ ನಿಯಮ ಬಾಹಿರವಾದ ಈ ಕ್ರಮವು ಅಕ್ಷಮ್ಯವಾಗುತ್ತದೆ. ಆದ್ದರಿಂದ ಕೂಡಲೇ ಅಧಿವೇಶನ ನಡೆಸಲು ಅಧಿಸೂಚನೆ ಹೊರಡಿಸಲು ಸೂಕ್ತ ಕ್ರಮ ಕೈಗೊಳ್ಳಬೆಕೆಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.