ಬೆಂಗಳೂರು: ಗುತ್ತಿಗೆದಾರರಿಂದ ಶೇ.40ರ ಕಮಿಷನ್ ಬೇಡಿಕೆಯ ಕುರಿತು ಸರ್ಕಾರದ ಮೇಲೆ ನ್ಯಾಯಾಂಗ ತನಿಖೆ ನಡೆಸುವಂತೆ ಒತ್ತಡ ಹಾಕುತ್ತೇವೆ. ಒಂದು ವೇಳೆ ಸರ್ಕಾರ ನಮ್ಮ ಆಗ್ರಹಕ್ಕೆ ಬೆಲೆ ಕೊಡದೇ ಹೋದರೆ ಈ ವಿಚಾರವನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವುದಾಗಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದರು.
ಇಂದು ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣನವರ ಭೇಟಿಯ ನಂತರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಾನು ವಿರೋಧ ಪಕ್ಷದ ನಾಯಕನಾದ ನಂತರ ಮೊದಲ ಬಾರಿಗೆ ಇಂದು ಕೆಂಪಣ್ಣನವರನ್ನು ಭೇಟಿಯಾಗಿ ಮಾತುಕತೆ ನಡೆಸಿದೆ. ಅವರು ಪ್ರಧಾನಿಗಳಿಗೆ ಬರೆದ ಪತ್ರವನ್ನೂ ನೋಡಿದೆ ಎಂದರು.
ಸರ್ಕಾರ ಏಪ್ರಿಲ್ ತಿಂಗಳಿನಲ್ಲಿ ಗುತ್ತಿಗೆದಾರರನ್ನು ಮಾತುಕತೆಗೆ ಕರೆದಿತ್ತು. ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಇಷ್ಟು ಸಮಯವಾದರೂ ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರವನ್ನು ತಾವು ವಿಧಾನಸಭೆಯಲ್ಲಿ ಒತ್ತಾಯಿಸಬೇಕು ಎಂದು ನನಗೆ ಮನವಿ ಮಾಡಿದ್ದಾರೆ. ಟೆಂಡರ್ ಅನುಮೋದನೆಗೆ ಮೊದಲೇ ಶೇ.30ರಿಂದ 40ರಷ್ಟು ಲಂಚ ಕೊಡಬೇಕಾಗಿದೆ. ಪ್ರಧಾನಿಗಳಿಗೆ ಪತ್ರ ಬರೆದು ಒಂದು ವರ್ಷವಾದರೂ ಅವರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದರು.
ಕಮಿಷನ್ ಆರೋಪ ಬಗ್ಗೆ ಸರ್ಕಾರದ ವಿರುದ್ಧ ನ್ಯಾಯಾಂಗ ತನಿಖೆ ಮಾಡಿ: ಸಿದ್ದರಾಮಯ್ಯ ಒತ್ತಾಯ ನಾವು ನ್ಯಾಯಾಂಗ ತನಿಖೆ ನಡೆಸುವುದಾದರೆ ದಾಖಲಾತಿ ಕೊಡಲು ತಯಾರಾಗಿದ್ದೇವೆ, ಒಂದು ವೇಳೆ ನಮ್ಮಿಂದ ಇದನ್ನು ಸಾಬೀತು ಮಾಡಲು ಆಗದೇ ಹೋದರೆ ಯಾವುದೇ ರೀತಿಯ ಕಾನೂನು ಕ್ರಮವನ್ನು ಎದುರಿಸಲು ಸಿದ್ಧರಿದ್ದೇವೆ ಎಂದೂ ಗುತ್ತಿಗೆದಾರರು ಹೇಳಿದ್ದಾರೆ. ನಾನೂ ಕೂಡ ಹೈಕೋರ್ಟ್ನ ಹಾಲಿ ನ್ಯಾಯಾಧೀಶರ ಉಸ್ತುವಾರಿಯಲ್ಲಿ ನ್ಯಾಯಾಂಗ ತನಿಖೆ ಮಾಡಿ ಎಂದು ಒತ್ತಾಯ ಮಾಡಿದ್ದೆ. ಸರ್ಕಾರ ಇದಕ್ಕೆ ಒಪ್ಪುತ್ತಿಲ್ಲ ಎಂದರು.
ಇದನ್ನೂ ಓದಿ:ಕಮಿಷನ್ ಆರೋಪ: ಲೋಕಾಯುಕ್ತಕ್ಕೆ ದೂರು ಕೊಡಲಿ, ತನಿಖೆಯಾಗಲಿ ಎಂದ ಸಿಎಂ ಬೊಮ್ಮಾಯಿ
ಭ್ರಷ್ಟಾಚಾರ ಎಲ್ಲ ಕಾಲದಲ್ಲೂ ಆಮೆ ವೇಗದಲ್ಲಿ ಇತ್ತು. ಈಗ ಶರವೇಗದಲ್ಲಿ ನಡೆಯುತ್ತಿದೆ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ಗುತ್ತಿಗೆದಾರರಿಗೆ ಜಲಸಂಪನ್ಮೂಲ, ಲೋಕೋಪಯೋಗಿ, ಗ್ರಾಮೀಣಾಭಿವೃದ್ಧಿ ಹಾಗೂ ಬಿಬಿಎಂಪಿಯಿಂದ ಸುಮಾರು 22 ಸಾವಿರ ಕೋಟಿ ರೂ.ಗೂ ಅಧಿಕ ಹಣ ಬಿಡುಗಡೆಯಾಗಬೇಕಿದೆಯಂತೆ. ಈ ಬೃಹತ್ ಬಾಕಿ ಮೊತ್ತವನ್ನು ಆದ್ಯತೆ ಮೇಲೆ ತಕ್ಷಣ ಬಿಡುಗಡೆ ಮಾಡಬೇಕೆಂಬ ಒತ್ತಾಯ ಗುತ್ತಿಗೆದಾರರದ್ದಾಗಿದೆ ಎಂದು ಹೇಳಿದರು.
ಅಲ್ಲದೇ, ಅನುದಾನ ಮೀಸಲಿಡದೆ ಟೆಂಡರ್ ಕರೆಯುತ್ತಾರೆ. ಇದರಿಂದ ಕಾಮಗಾರಿ ಹಣ ಬಿಡುಗಡೆ ಆಗುವುದು ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ. ಗುತ್ತಿಗೆದಾರರು ಸಾಕಷ್ಟು ಬೇಸರಗೊಂಡಿದ್ದಾರೆ. ಇಂಥಾ ಭ್ರಷ್ಟ ಸರ್ಕಾರ ಯಾವ ಕಾಲದಲ್ಲೂ ಇರಲಿಲ್ಲ ಎಂಬುದು ಅವರ ಅಳಲು. ನ್ಯಾಯಾಂಗ ತನಿಖೆಗೆ ನಡೆಸಿದರೆ ಸೂಕ್ತ ದಾಖಲೆ ತನಿಖೆಗೆ ನೀಡುವುದಾಗಿ ಹೇಳಿದ್ದಾರೆ. ಸರ್ಕಾರ ನ್ಯಾಯಾಂಗ ತನಿಖೆ ಮಾಡಲಿ. ಆದರೆ, ಇದನ್ನು ಸರ್ಕಾರ ಮಾಡಲು ಒಪ್ಪುತ್ತಿಲ್ಲ, ಇದರರ್ಥ ಭ್ರಷ್ಟಾಚಾರ ಮಾಡಿರುವುದನ್ನು ಒಪ್ಪಿಕೊಂಡಂತೆ ಅಲ್ಲವಾ? ಸರ್ಕಾರ ಪ್ರಾಮಾಣಿಕವಾಗಿದ್ದರೆ ನ್ಯಾಯಾಂಗ ತನಿಖೆ ನಡೆಸಲಿ ಎಂದು ಒತ್ತಾಯಿಸಿದರು.
ಇದನ್ನೂ ಓದಿ:ಮುಖ್ಯಮಂತ್ರಿ ಸೇರಿ ಎಲ್ಲರೂ ಭ್ರಷ್ಟರು, ಕಮಿಷನ್ ಬಗ್ಗೆ ಮೋದಿಗೆ ಮತ್ತೊಮ್ಮೆ ಪತ್ರ: ಕೆಂಪಣ್ಣ
ನ್ಯಾಯಾಂಗ ತನಿಖೆಗೆ ಸಮಸ್ಯೆಯೇನು?: ಸರ್ಕಾರ ಯಾವುದೇ ಭ್ರಷ್ಟಾಚಾರ ಮಾಡಿಲ್ಲ ಎಂದು ಹೇಳುತ್ತಿದೆ. ಗುತ್ತಿಗೆದಾರರ ಸಂಘದವರು ಸರ್ಕಾರದ ಭ್ರಷ್ಟಾಚಾರವನ್ನು ಸಾಬೀತು ಮಾಡುತ್ತೇವೆ, ಒಂದು ವೇಳೆ ನಾವು ಸಾಬೀತು ಮಾಡಲು ಆಗಿಲ್ಲ ಎಂದರೆ ನಮ್ಮ ಮೇಲೆ ಕಾನೂನು ಕ್ರಮ ಜರುಗಿಸಿ, ನಾವು ಎದುರಿಸಲು ಸಿದ್ಧರಿದ್ದೇವೆ ಎಂದು ಹೇಳುತ್ತಿದ್ದಾರೆ. ಹಾಗಾದರೆ ನ್ಯಾಯಾಂಗ ತನಿಖೆ ನಡೆಸಲು ಸರ್ಕಾರಕ್ಕೆ ಇರುವ ಸಮಸ್ಯೆಯೇನು ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.