ಕರ್ನಾಟಕ

karnataka

ETV Bharat / state

'ಬುರುಡೆ ಬೊಮ್ಮಾಯಿ' ಸರಣಿ ಟ್ವೀಟ್ ಮೂಲಕ ಸಿಎಂಗೆ ಸಿದ್ದರಾಮಯ್ಯ ಸವಾಲ್

ಎರಡೂಕಾಲು ವರ್ಷಗಳಲ್ಲಿ ರಾಜ್ಯ ಬಿಜೆಪಿ ಏನೆಲ್ಲ ಕೆಲಸ ಮಾಡಿದೆ ಎಂದು ಪಟ್ಟಿಕೊಡಲಿ. ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ ಎಂದು ಬೊಮ್ಮಾಯಿ ಸರ್ಕಾರಕ್ಕೆ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.

siddaramaiah tweets under burude bommai hashtag
ಸಿದ್ದರಾಮಯ್ಯ ಸವಾಲ್

By

Published : Oct 23, 2021, 10:53 PM IST

ಬೆಂಗಳೂರು: 'ಬುರುಡೆ ಬೊಮ್ಮಾಯಿ' ಎಂಬ ಹ್ಯಾಶ್ ಟ್ಯಾಗ್ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ಸರಣಿ ಟ್ವೀಟ್ ಮೂಲಕ ಸಿಎಂ ಬಸವರಾಜ್ ಬೊಮ್ಮಾಯಿ ವಿರುದ್ಧ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಎರಡೂಕಾಲು ವರ್ಷಗಳಲ್ಲಿ ರಾಜ್ಯ ಬಿಜೆಪಿ ಏನೆಲ್ಲಾ ಕೆಲಸ ಮಾಡಿದೆ ಎಂದು ಪಟ್ಟಿಕೊಡಲಿ. ಐದು ವರ್ಷದ ನನ್ನ ಆಡಳಿತದಲ್ಲಿ ನಾನು ಯಾವೆಲ್ಲಾ ಯೋಜನೆ ಜಾರಿ ಮಾಡಿದ್ದೆ ಎಂದು ಪಟ್ಟಿ ಕೊಡುತ್ತೇನೆ. ಈ ಬಗ್ಗೆ ಒಂದೇ ವೇದಿಕೆಯಲ್ಲಿ ಚರ್ಚೆಯಾಗಲಿ. ಬೊಮ್ಮಾಯಿ ಅವರಿಗೆ ಇದು ನನ್ನ ಸವಾಲು. ನಮ್ಮ ಸರ್ಕಾರದ ಯಾವ ಭಾಗ್ಯ ಯಾರಿಗೆ ಮುಟ್ಟಿದೆ ಎಂಬ ಲೆಕ್ಕಬೇಕಾ ಬೊಮ್ಮಾಯಿ ಅವರೇ? ಎಂದು ಪ್ರಶ್ನಿಸಿದ್ದಾರೆ.

ಅಕ್ಕಿ ಪಡೆದ 1.10 ಕೋಟಿ ಕುಟುಂಬಗಳ 4 ಕೋಟಿ ಬಡವರ ಮನೆಗೆ ಹೋಗಿ ಕೇಳಿ ಉತ್ತರ ಕೊಟ್ಟಾರು. ಕೊರೊನಾ ಸೋಂಕಿನಿಂದ ಉದ್ಯೋಗ ಕಳೆದು ಕೊಂಡ ಜನ ಬದುಕಿದ್ದು ಅನ್ನಭಾಗ್ಯ ಅಕ್ಕಿಯಿಂದ, ಇಂದಿರಾ ಕ್ಯಾಂಟೀನ್​​ನಿಂದ. ನರೇಂದ್ರ ಮೋದಿ ಅವರು ಹೇಳಿದಂತೆ ನೀವು ಬಡಿದ ತಟ್ಟೆ, ಹಚ್ಚಿದ ದೀಪದಿಂದ ಅಲ್ಲ. ನೀವು ನಿರ್ದಯಿಗಳು ನಾವು ಕೊಟ್ಟ ಅಕ್ಕಿಯನ್ನು ಕಸಿದುಕೊಳ್ಳಲು ಹೊರಟಿದ್ದೀರಿ ಬೊಮ್ಮಾಯಿ.

ಕ್ಷೀರಭಾಗ್ಯ ಯೋಜನೆಯ ಲೆಕ್ಕ ಬೇಕಾ ಬೊಮ್ಮಾಯಿ ಅವರೇ, ಕ್ಷೀರಭಾಗ್ಯದ ಹಾಲು ಕುಡಿದ ರಾಜ್ಯದ 1.07 ಕೋಟಿ ಶಾಲಾ ಮಕ್ಕಳನ್ನು ಕೇಳಿ. ಕೊರೊನಾ ನೆಪದಲ್ಲಿ ಅವರು ಕುಡಿಯುತ್ತಿದ್ದ ಹಾಲನ್ನು, ಮಧ್ಯಾಹ್ನದ ಬಿಸಿಯೂಟವನ್ನು ಕಿತ್ತುಕೊಂಡವರು ನೀವೇ ಅಲ್ಲವೇ? ಎಂದು ಕೇಳಿದ್ದಾರೆ.

ನಮ್ಮ ಸರ್ಕಾರ ಜಾರಿಗೆ ತಂದಿದ್ದ ಕೃಷಿಭಾಗ್ಯ, ಕ್ಷೀರಧಾರೆ, ಪಶುಭಾಗ್ಯ, ಶೂ ಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ, ಮಾತೃಪೂರ್ಣ ಹೀಗೆ ಹಲವು ಜನಪರ ಯೋಜನೆಗಳನ್ನು ನಿಲ್ಲಿಸಿದವರು ನೀವೇ ಅಲ್ಲವೇ ಬೊಮ್ಮಾಯಿ ಅವರೇ?ಇದೇನಾ ನಿಮ್ಮ ಅಭಿವೃದ್ಧಿ? ನಾವು ಜಾರಿ ಮಾಡಿದ್ದ ಅನುಗ್ರಹ ಯೋಜನೆಯನ್ನು ನಿಲ್ಲಿಸುವ ಮೂಲಕ ಬಡ ರೈತರ, ಹೈನುಗಾರರ, ಕುರಿಗಾಹಿಗಳ ಬದುಕನ್ನು ಸಂಕಷ್ಟಕ್ಕೀಡು ಮಾಡಿದವರು ರಾಜ್ಯ ಬಿಜೆಪಿ ಅವರು. ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇದೆಯೇ? ಎಂದು ಪ್ರಶ್ನಿಸಿದ್ದಾರೆ.

ಲಾಕ್ ಡೌನ್ ಇದ್ದಾಗ ಬಡವರಿಗೆ ಉಚಿತವಾಗಿ ಹತ್ತು ಕೆ.ಜಿ ಅಕ್ಕಿ ಕೊಡಿ, ಪ್ರತಿ ಬಿಪಿಎಲ್ ಕುಟುಂಬಕ್ಕೆ ಹತ್ತು ಸಾವಿರ ಧನಸಹಾಯ ಮಾಡಿ ಎಂದು ಸದನದಲ್ಲಿ ಒತ್ತಾಯಿಸಿದರೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಎಂದವರು ನಿಮ್ಮವರೇ ಅಲ್ಲವೇ ಬೊಮ್ಮಾಯಿ ? ಜನರ ಕಷ್ಟಕಾಲದಲ್ಲಿ ನೆರವಿಗೆ ಧಾವಿಸದ ನಿಮ್ಮ ಸರ್ಕಾರ ಇದ್ದರೆಷ್ಟು ಹೋದರೆಷ್ಟು? ಎಂದು ಕೇಳಿದ್ದಾರೆ.

ಸಾಲದ ವಿವರ:

2008-2013 ರ ವರೆಗಿನ ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಾಲದ ಪ್ರಮಾಣ ಹಿಂದಿನ ಸರ್ಕಾರದ ಅವಧಿಗೆ ಹೋಲಿಸಿದರೆ ಒಟ್ಟಾರೆ ಶೇ. 94.18 ರಷ್ಟು ಏರಿಕೆಯಾಗಿತ್ತು. ನಮ್ಮ ಸರ್ಕಾರದ ಅವಧಿಯಲ್ಲಿ 2013-18 ರವರೆಗೆ ಏರಿಕೆಯಾಗಿದ್ದು ಶೇಕಡಾ 78 ರಷ್ಟು ಮಾತ್ರ. ನಾವು 2012-13 ರಲ್ಲಿ ಅಧಿಕಾರಕ್ಕೆ ಬಂದಾಗ ಇದ್ದ ಸಾಲ ರೂ. 1,21,000 ಕೋಟಿ. 2017-18 ರಲ್ಲಿ ನಮ್ಮ ಸರ್ಕಾರದ ಕೊನೆ ಬಜೆಟ್ ವೇಳೆ ಇದ್ದ ಸಾಲ ರೂ.2,42,420 ಕೋಟಿ ಎಂದಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ಈಗಿನ ಸಾಲ ರೂ.4,57,899 ಕೋಟಿ. 2020-21 ರಲ್ಲಿಯೇ ಮಾಡಿರುವ ಸಾಲ ರೂ. 69,000 ಕೋಟಿ.ಕಳೆದ 4 ವರ್ಷಗಳಲ್ಲಿ ರಾಜ್ಯ ಸರ್ಕಾರ ರೂ.2,14,479 ಕೋಟಿ ಹೆಚ್ಚು ಸಾಲ‌ಮಾಡಿದೆ. ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾದ 3 ವರ್ಷಗಳಲ್ಲಿ ಸುಮಾರು ರೂ.1,90,000 ಕೋಟಿ ಸಾಲ ಮಾಡಿದ್ದಾರೆ. ಈಗ ಪ್ರತಿ ವರ್ಷ ಸಾಲ ಮಾಡುವ ಪ್ರಮಾಣ ರೂ. 72,000 ಕೋಟಿಗೆ ತಲುಪಲಿದೆ.

ಕಳೆದ ವರ್ಷ ರೂ.69 ಸಾವಿರ ಕೋಟಿ ಸಾಲ ಮಾಡಿದರೂ ಕೊರೊನಾ ನಿರ್ವಹಣೆಗೆ ಖರ್ಚು ಮಾಡಿದ್ದು 5,400 ಕೋಟಿ ರೂ.ಗಳು ಮಾತ್ರ ಎಂದು ಹೇಳಿದ್ದೀರಿ. ಹಾಗಾದರೆ ಉಳಿದ ಹಣ ಎಲ್ಲಿಗೆ ಹೋಯಿತು ರಾಜ್ಯ ಬಿಜೆಪಿ? ಜಿ.ಎಸ್.ಡಿ.ಪಿ ಯಲ್ಲಿ ಶೇಕಡಾವಾರು ಸಾಲದ ಪ್ರಮಾಣ ನಮ್ಮ ಸರ್ಕಾರದ ಅವಧಿಯಲ್ಲಿ 17 ರಿಂದ 20 ರ ಒಳಗೆ ಇತ್ತು.

ಇದು ದೇಶದಲ್ಲಿಯೇ ಅತ್ಯುತ್ತಮ ನಿರ್ವಹಣೆಯಾಗಿತ್ತು. ಆದರೆ ಈಗ ಅದು 26.9 ರಷ್ಟಾಗಿದೆ. ನಿಯಮಗಳ ಪ್ರಕಾರ ಇದು ಶೇ. 25 ಮೀರುವಂತಿಲ್ಲ. ಸಾಲಕ್ಕಾಗಿ ನಿಯಮಗಳನ್ನೇ ತಿದ್ದಿದವರು ನೀವಲ್ಲವೇ ರಾಜ್ಯ ಬಿಜೆಪಿ? ಎಂದು ಪ್ರಶ್ನಿಸಿದ್ದಾರೆ.

2013ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ ರಾಜ್ಯದ ಜಿ.ಎಸ್.ಡಿ.ಪಿ ಕೇವಲ 6,01,582 ಕೋಟಿ ಇತ್ತು. ನಾನು ಅಧಿಕಾರದಿಂದ ಇಳಿಯುವಾಗ ಅದು ರೂ.14,08,585 ಕೋಟಿಗೆ ಏರಿಕೆಯಾಗಿತ್ತು. ರಾಜ್ಯ ಸರ್ಕಾರದ ಜಿ.ಎಸ್.ಡಿ.ಪಿ ಎಷ್ಟು ಎಂದು ಹೇಳುವುದು ನಾವಲ್ಲ. ಕೇಂದ್ರ ಸರ್ಕಾರ. ನರೇಂದ್ರ ಮೋದಿ ಅವರ ಕೇಂದ್ರದ ಬಿಜೆಪಿ ಸರ್ಕಾರವೇ ನಮ್ಮ ಜಿ.ಎಸ್.ಡಿ.ಪಿ ಯನ್ನು ಶ್ಲಾಘಿಸಿತ್ತು. ನಮ್ಮ 5 ವರ್ಷದ ಅವಧಿಯಲ್ಲಿ ಜಿ.ಎಸ್.ಡಿ.ಪಿ ಯ ಪ್ರಮಾಣ 8,07,003 ರಷ್ಟು ಹೆಚ್ಚಾಯಿತು.

2018-19 ರಿಂದ 2021-22 ರವರೆಗೆ ಕಳೆದ 4 ವರ್ಷಗಳಲ್ಲಿ ಹೆಚ್ಚಾದ ಜಿಎಸ್‍ಡಿಪಿಯ ಪ್ರಮಾಣ ಕೇವಲ 2,93,642 ಕೋಟಿ ರೂಪಾಯಿ ಮಾತ್ರ. ರಾಜ್ಯ ಬಿಜೆಪಿ ಆಡಳಿತದಲ್ಲಿ ಒಂದು ಕಡೆ ರಾಜ್ಯದ ಆರ್ಥಿಕತೆ ವೇಗವಾಗಿ ಕುಸಿದು ಹೋಗುತ್ತಿದೆ. ಆದರೆ ಸಾಲದ ಪ್ರಮಾಣ ರಾಕೆಟ್ಟಿನ ವೇಗದಲ್ಲಿ ಬೆಳೆಯುತ್ತಿದೆ. ಕೇಂದ್ರ ಬಿಜೆಪಿ ಸರ್ಕಾರವು ನಮ್ಮ ರಾಜ್ಯದಿಂದ ಪ್ರತಿ ವರ್ಷ ರೂ. 2,50,000 ಕೋಟಿಗೂ ಹೆಚ್ಚು ಹಣವನ್ನು ತೆರಿಗೆ- ಸುಂಕಗಳಿಂದ ಸಂಗ್ರಹಿಸುತ್ತದೆ. ಪ್ರತಿ ವರ್ಷ ಪೆಟ್ರೋಲ್ ಮತ್ತು ಡೀಸೆಲ್ ಎರಡರಿಂದಲೇ ರೂ. 30,000 ಕೋಟಿಗೂ ಹೆಚ್ಚಿನ ಹಣವನ್ನು ರಾಜ್ಯದ ಜನರಿಂದ ಸುಲಿಯುತ್ತಿದೆ ರಾಜ್ಯ ಬಿಜೆಪಿ ಎಂದು ಆರೋಪಿಸಿದ್ದಾರೆ.

ABOUT THE AUTHOR

...view details