ಬೆಂಗಳೂರು: ಕೇಂದ್ರದ ಮಾಜಿ ಸಚಿವ, ದಿ. ಜಾರ್ಜ್ ಫರ್ನಾಂಡೀಸ್ ಅವರ ಜೀವನ ಚರಿತ್ರೆ ಕುರಿತಾದ "ದಿ ಲೈಫ್ ಅಂಡ್ ಟೈಮ್ಸ್ ಆಫ್ ಜಾರ್ಜ್ ಫರ್ನಾಂಡೀಸ್" ಪುಸ್ತಕವನ್ನು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಬಿಡುಗಡೆ ಮಾಡಿದರು. ನಗರದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿದರು. ನಿವೃತ್ತ ನ್ಯಾಯಮೂರ್ತಿಗಳಾದ ವೆಂಕಟಾಚಲ, ಸಂತೋಷ್ ಹೆಗಡೆ, ಲೇಖಕ ಡಾ. ರಾಹುಲ್ ರಾಮಗುಂಡಂ, ಮೈಕೇಲ್ ಫರ್ನಾಂಡೀಸ್, ಪತ್ರಕರ್ತ ಹನೀಫ್ ಮತ್ತಿತರರು ಭಾಗವಹಿಸಿದ್ದರು.
ನಗರದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಸಿದ್ದರಾಮಯ್ಯ, ನನ್ನ ರಾಜಕೀಯ ಬದುಕಿನಲ್ಲಿ ಜಾರ್ಜ್ ಫರ್ನಾಂಡಿಸ್ ಅವರಿಗೆ ವಿಶೇಷ ಸ್ಥಾನ ಇದೆ. ಮೈಸೂರಿನಲ್ಲಿ ನಾನು ಕಾನೂನು ವ್ಯಾಸಂಗ ಮಾಡುತ್ತಿದ್ದಾಗ ನನಗೆ ಮೇಷ್ಟ್ರಾಗಿದ್ದವರು ಖ್ಯಾತ ಸಮಾಜವಾದಿ ಮತ್ತು ರೈತನಾಯಕ ಪ್ರೊ.ಎಂ.ಡಿ ನಂಜುಂಡಸ್ವಾಮಿಗಳು. ಅವರೇ ನನ್ನನ್ನು ರಾಜಕೀಯಕ್ಕೆ ಎಳೆದು ತಂದವರು ಎಂದರು.
ರಾಜಕೀಯವನ್ನು ಮೀರಿದ್ದ ಸ್ನೇಹ: ಅವರ ಒತ್ತಾಯದಿಂದ ನಾನು ಸಮಾಜವಾದಿ ಪಕ್ಷ ಸೇರಿದ್ದೆ. ಅವರ ಮೂಲಕ ನನಗೆ ಜಾರ್ಜ್ ಫರ್ನಾಂಡಿಸ್ ಪರಿಚಯವಾಗಿದ್ದವರು. ಕನ್ನಡಿಗರೇ ಆಗಿದ್ದರಿಂದ ಹೆಚ್ಚು ಆತ್ಮೀಯರಾಗಿದ್ದರು. ಆ ದಿನದಿಂದ ಇತ್ತೀಚೆಗೆ ಅವರು ಅನಾರೋಗ್ಯದಿಂದ ಹಾಸಿಗೆ ಹಿಡಿಯುವವರೆಗೆ ನನಗೆ ಅವರ ಜೊತೆ ಸ್ನೇಹಪೂರ್ವಕ ಒಡನಾಟ ಇತ್ತು. ಕೊನೆದಿನಗಳ ಅವರ ರಾಜಕೀಯ ನಿಲುವುಗಳ ಬಗ್ಗೆ ನನಗೆ ಭಿನ್ನಾಭಿಪ್ರಾಯವಿದ್ದರೂ ಸ್ನೇಹ ರಾಜಕೀಯವನ್ನು ಮೀರಿದ್ದ ಸಂಬಂಧವಾಗಿತ್ತು ಎಂದರು.
ಸೈದ್ಧಾಂತಿಕ ಬದ್ಧತೆ ಇತ್ತು: ಜಾರ್ಜ್ ಫರ್ನಾಂಡೀಸ್ ಅವರು ಮೊರಾರ್ಜಿ ದೇಸಾಯಿ ಅವರು ಪ್ರಧಾನಿಯಾಗಿದ್ದಾಗ ಕೈಗಾರಿಕಾ ಸಚಿವರಾಗಿದ್ದರು. ಆಗ ಮೈಸೂರಿಗೆ ಒಮ್ಮೆ ಬಂದಿದ್ದರು. ಮೈಸೂರಿನ ತಮ್ಮೆಲ್ಲಾ ಸ್ನೇಹಿತರನ್ನು ಒಟ್ಟಿಗೆ ಸೇರಿಸಿಕೊಂಡು ನಾನು ಕೋಕೋ ಕೋಲಾ ವಿರುದ್ಧ ಹೋರಾಟವನ್ನು ಮಾಡುತ್ತೇನೆ. ಅದಕ್ಕೆ ನಿಮ್ಮ ಬೆಂಬಲ ಬೇಕು ಮತ್ತು ಯಾವತ್ತೂ ಕೊಕೊ ಕೋಲಾ ಕುಡಿಯುವುದಿಲ್ಲ ಎಂದು ಶಪಥ ಮಾಡಬೇಕು ಎಂದು ನನಗೆ ಹೇಳಿದ್ದರು. ಅವರ ಮಾತಿಗೆ ಒಪ್ಪಿ ಕೋಕೋ ಕೋಲಾ ಕುಡಿಯುವುದನ್ನು ಬಿಟ್ಟವನು ಇಲ್ಲಿಯವರೆಗೆ ಕುಡಿದಿಲ್ಲ. ಜಾರ್ಜ್ ಫರ್ನಾಂಡೀಸ್ ಅವರಲ್ಲಿ ಸೈದ್ಧಾಂತಿಕ ಬದ್ಧತೆ ಇತ್ತು. ಅವರು ಶೂನ್ಯದಿಂದ ಬಹಳ ಎತ್ತರಕ್ಕೆ ಬೆಳೆದವರು.
ಯಶಸ್ಸು ಕಂಡವರು ಬೆರಳೆಣಿಕೆ ಮಂದಿ:ಬರಿಗೈಲಿ ಮುಂಬೈಗೆ ಹೋಗಿ, ಅಲ್ಲಿ ಕಾರ್ಮಿಕ ಸಂಘಟನೆಯನ್ನು ಕಟ್ಟಿ, ರಾಜಕೀಯವಾಗಿ ಬೆಳೆದವರು. ದಕ್ಷಿಣ ಭಾರತದಿಂದ ಕೇಂದ್ರಕ್ಕೆ ಹೋಗಿ ರಾಜಕೀಯದಲ್ಲಿ ಯಶಸ್ಸು ಕಂಡವರು ಬೆರಳೆಣಿಕೆ ಮಂದಿ. ಜಾರ್ಜ್ ಮೊದಲ ಚುನಾವಣೆಯಲ್ಲಿಯೇ ಮುಂಬೈನಲ್ಲಿ ಆಗಿನ ಕಾಂಗ್ರೆಸ್ ಪಕ್ಷದ ಜನಪ್ರಿಯ ನೇತಾರ ಎಸ್.ಕೆ ಪಾಟೀಲ್ ಅವರನ್ನು ಮಣಿಸಿ ಗೆಲುವು ಸಾಧಿಸಿ ಜಯಂಟ್ ಕಿಲ್ಲರ್ ಎಂದು ಹೆಸರಾದವರು. ತುರ್ತುಪರಿಸ್ಥಿತಿಯ ನಂತರ ನಡೆದ ಚುನಾವಣೆಯಲ್ಲಿ ಬಿಹಾರ ರಾಜ್ಯದ ಮುಜಫರ್ ಲೋಕಸಭಾ ಕ್ಷೇತ್ರದಿಂದ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದು ಬಿಟ್ಟರು. ಅದರ ನಂತರ ಆ ರಾಜ್ಯವನ್ನೇ ತಮ್ಮ ರಾಜಕೀಯದ ಅಖಾಡವನ್ನಾಗಿ ಮಾಡಿಬಿಟ್ಟರು. ಕರ್ನಾಟಕದ ರಾಜಕಾರಣದ ಬಗ್ಗೆ ಅವರಿಗೆ ಆಸಕ್ತಿ ಇತ್ತು. ಈ ಕಾರಣದಿಂದಾಗಿಯೇ 1984ರಲ್ಲಿ ಅವರು ಬೆಂಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೆ ಗೆಲುವು ಸಿಗಲಿಲ್ಲ. ಅದರ ನಂತರ ಜಾರ್ಜ್ ಕರ್ನಾಟಕದಿಂದ ದೂರವೇ ಹೋಗಿ ಬಿಟ್ಟರು ಎಂದು ವಿವರಿಸಿದರು.
1980ರಲ್ಲಿ ನಾನು ಮೊದಲ ಬಾರಿ ಚುನಾವಣಾ ರಂಗ ಪ್ರವೇಶಿಸಿದವನು. ಅದಕ್ಕೆ ಜಾರ್ಜ್ ಅವರ ಒತ್ತಾಯವೂ ಕಾರಣ. ನಾನು ಜನತಾ ಪಕ್ಷದ ಅಭ್ಯರ್ಥಿಯಾಗಿ ಲೋಕಸಭೆಗೆ ಸ್ಪರ್ಧಿಸಬೇಕೆಂದು ಜಾರ್ಜ್ ಬಂದು ಕೇಳಿಕೊಂಡರು. ಚುನಾವಣೆ ನನಗೆ ಹೊಸತು, ಅನುಭವವೂ ಇರಲಿಲ್ಲ, ದುಡ್ಡೂ ಇರಲಿಲ್ಲ. 'ಸಾಂಕೇತಿಕವಾಗಿ ಸ್ಪರ್ಧಿಸಿ, ಸೋಲು-ಗೆಲುವು ಮುಖ್ಯ ಅಲ್ಲ' ಎಂದು ನನ್ನ ಮನ ಒಲಿಸಿ ಚುನಾವಣೆಗೆ ನಿಲ್ಲಿಸಿದರು. ದುಡ್ಡೇನೋ ಸ್ವಲ್ಪ ಕೊಟ್ಟರು, ಅದು ಕೆಲವು ದಿನಗಳಲ್ಲಿ ಖರ್ಚಾಯಿತು. ಅದರ ನಂತರ ಕೈ ಖಾಲಿ. ಆ ಚುನಾವಣೆಯಲ್ಲಿ ನಾನು ಹೀನಾಯವಾಗಿ ಸೋತು ಬಿಟ್ಟೆ. ಅದರ ನಂತರ ಜನತಾ ಪಕ್ಷ ಒಡೆದುಹೋಯಿತು. ಜಾರ್ಜ್, ಚರಣ್ ಸಿಂಗ್ ಎಲ್ಲ ಸೇರಿ ಜನತಾ (ಸೆಕ್ಯುಲರ್) ಪಕ್ಷ ಕಟ್ಟಿದ್ದರು.
ನಿಜವಾದ ರಾಜಕೀಯ ಪಯಣ ಶುರು: 1983ರ ವಿಧಾನಸಭಾ ಚುನಾವಣೆಯಲ್ಲಿ ಆ ಪಕ್ಷದಿಂದ ಸ್ಪರ್ಧಿಸುವಂತೆ ಜಾರ್ಜ್ ಮತ್ತೆ ಕೇಳಿಕೊಂಡರು. ಆಗಲೂ ನಾನು ಮೊದಲು ಹಿಂಜರಿದು ಆ ಮೇಲೆ ಒಪ್ಪಿಕೊಂಡೆ. ಏನೋ ಸಮಸ್ಯೆಯಾಗಿ ಆ ಚುನಾವಣೆಗೆ ಅವರ ಪಕ್ಷದ ಬಿ ಫಾರ್ಮ್ ಸಿಗದೆ ನಾನು ಪಕ್ಷೇತರನಾಗಿ ಸ್ಪರ್ಧಿಸಬೇಕಾಯಿತು. ಆ ಚುನಾವಣೆಯ ಪ್ರಚಾರದಲ್ಲಿ ಜಾರ್ಜ್ ಅವರು ಕರ್ಪೂರಿ ಠಾಕೂರ್ ಜೊತೆ ಬಂದು ಪ್ರಚಾರ ಮಾಡಿದ್ದರು. ಚುನಾವಣಾ ಖರ್ಚಿಗೆ ಆ ಕಾಲದಲ್ಲಿ ಜಾರ್ಜ್ ನನಗೆ ಹತ್ತು ಸಾವಿರ ರೂಪಾಯಿ ಕೊಟ್ಟಿದ್ದನ್ನು ಮರೆಯಲಾರೆ. ಆ ಚುನಾವಣೆಯಲ್ಲಿ ಗೆದ್ದ ನಂತರ ನನ್ನ ನಿಜವಾದ ರಾಜಕೀಯ ಪಯಣ ಶುರುವಾಗಿದ್ದು ಎಂಬ ಮಾಹಿತಿ ನೀಡಿದರು.