ಬೆಂಗಳೂರು:ಪ್ರವಾಹದಿಂದ ರಾಜ್ಯ ತತ್ತರಿಸಿದ್ದು, ಇಂತಹ ಭೀಕರ ಪ್ರವಾಹ ನಾನು ನನ್ನ ರಾಜಕೀಯ ಜೀವನದಲ್ಲೇ ಕಂಡಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೊಂಡಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಅವರು, ರಾಜ್ಯದ 16 ಜಿಲ್ಲೆಗಳು ಪ್ರವಾಹಪೀಡಿತವಾಗಿವೆ. 20ಕ್ಕೂ ಅಧಿಕ ಜನರು ಬಲಿಯಾಗಿದ್ದಾರೆ. ಸಾವಿರಾರು ಸಂಖ್ಯೆಯಲ್ಲಿ ಜಾನುವಾರುಗಳು ಸಾವನ್ನಪ್ಪಿವೆ. ಹಲವಾರು ಮನೆಗಳು ಕೊಚ್ಚಿ ಹೋಗಿವೆ. ಲಕ್ಷಾಂತರ ಎಕರೆ ಬೆಳೆ ನಷ್ಟವಾಗಿದೆ. ಹೀಗೆ ಇನ್ನೂ ಅನೇಕ ದುರಂತಗಳು ಸಂಭವಿಸಿವೆ ಎಂದು ಹೇಳಿದ್ದಾರೆ.
ಬಾದಾಮಿ ಒಂದೇ ಅಲ್ಲ, ಶಾಸಕಾಂಗ ಪಕ್ಷದ ನಾಯಕನಾಗಿ ರಾಜ್ಯದ ಎಲ್ಲ ಪ್ರವಾಹಪೀಡಿತ ಪ್ರದೇಶಗಳಿಗೆ ಭೇಟಿ ಕೊಡಬೇಕಿತ್ತು. ಆದರೆ ವೈದ್ಯರು ನೀಡಿರುವ ಕೆಲ ಸೂಚನೆಗಳನ್ನು ಪಾಲಿಸಲೇಬೇಕಾದ ಅನಿವಾರ್ಯತೆ ಎದುರಾಗಿರುವುದರಿಂದ ನನ್ನಿಂದ ಅದು ಸಾಧ್ಯವಾಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಬಾದಾಮಿ ಶಾಸಕನಾಗಿರುವುದರಿಂದ ಕ್ಷೇತ್ರದ ಜನರು ನನ್ನ ಉಪಸ್ಥಿತಿ ಬಯಸುವುದು ಸಾಮಾನ್ಯ. ಕಣ್ಣಿನ ಶಸ್ತ್ರಚಿಕಿತ್ಸೆಗೆ ಒಳಗಾಗುವ ಮುನ್ನವೇ ಇಂತಹ ದುರ್ಘಟನೆ ಸಂಭವಿಸಿದ್ದರೆ ಖಂಡಿತಾ ಶಸ್ತ್ರಚಿಕಿತ್ಸೆಯನ್ನು ಸ್ವಲ್ಪ ದಿನಗಳ ಕಾಲ ಮುಂದೂಡುತ್ತಿದ್ದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.