ಬೆಂಗಳೂರು: ಮತದಾರರ ಪಟ್ಟಿ ಪರಿಷ್ಕರಣೆ ಪ್ರಕರಣ ಹೆಸರಿನಲ್ಲಿ ಸರ್ಕಾರ ಮಾಹಿತಿ ಕಳ್ಳತನ ಮಾಡುತ್ತಿದೆ ಎಂಬ ಕುರಿತು ಬಿಜೆಪಿ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕರು ಕಳೆದರಡು ದಿನಗಳಿಂದ ಗಂಭೀರ ಆರೋಪ ಮಾಡುತ್ತಾ ಬಂದಿದ್ದಾರೆ. ಪ್ರಕರಣದಲ್ಲಿ ಹೊಂಬಾಳೆ ಹೆಸರು ಕೂಡ ಕೇಳಿ ಬಂದಿತ್ತು.
ಈ ಪ್ರಕರಣದ ಕುರಿತು ಇಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಮತದಾರರ ಪಟ್ಟಿ ಪರಿಷ್ಕರಣೆ ಎನ್ನುವುದು ಕೆಜಿಎಫ್ ಚಿತ್ರದ ರಾಕಿಭಾಯ್ ನ ಸೇಡಿನ ಕತೆಯೂ ಅಲ್ಲ, ಕಾಂತಾರ ಚಿತ್ರದ ಗುಳಿಗ - ಪಂಜುರ್ಲಿಯ ದಂತಕತೆಯೂ ಅಲ್ಲ. ಯಾರು ಯಾವ ಕೆಲಸ ಮಾಡಬೇಕೋ, ಅದನ್ನೇ ಮಾಡಬೇಕು ಎಂದು ತಿವಿದಿದ್ದಾರೆ.
ಪ್ರಕರಣದಲ್ಲಿ ಚಿಲುಮೆ ಸಂಸ್ಥೆ ಹೆಸರು ಕೇಳಿ ಬಂದಿದ್ದು, ಈ ಸಂಸ್ಥೆಗೆ ಮತದಾರರ ಜಾಗೃತಿಗೆ ಅನುಮತಿ ನೀಡಲಾಗಿತ್ತು. ಈ ಚಿಲುಮೆ ಸಂಸ್ಥೆ ಈ ಹಿಂದೆ ಹೊಂಬಾಳೆ ಎಂಬ ಹೆಸರಿನಲ್ಲಿ ಕಾರ್ಯ ನಿರ್ವಹಿಸುತ್ತಿತ್ತು. ಈ ಹಿನ್ನೆಲೆಯಲ್ಲಿ ಹೊಂಬಾಳೆ ಸಂಸ್ಥೆಯ ಮಾಲೀಕರ ಸಂಬಂಧಿಯಾಗಿರುವ ಸಚಿವ ಅಶ್ವತ್ಥ್ ನಾರಾಯಣ್ ಅವರನ್ನು ಪರೋಕ್ಷವಾಗಿ ಉದ್ದೇಶಿಸಿ ಸಿದ್ದರಾಮಯ್ಯ ಈ ಟ್ವೀಟ್ ಮಾಡಿದ್ದಾರೆ.
ಅಲ್ಲದೇ ಚಿಲುಮೆ ಸಂಸ್ಥೆಯ ಹಿನ್ನೆಲೆ ಪ್ರಶ್ನಿಸಿರುವ ಮಾಜಿ ಸಿಎಂ, ಸಂಸ್ಥೆಯ ಹಣಕಾಸು ವ್ಯವಹಾರ, ಹಣಕಾಸಿನ ಮೂಲ ಹಾಗೂ ಉದ್ಯೋಗಿಗಳ ಸಂಖ್ಯೆ ಎಷ್ಟು ಎಂಬುದರ ಬಗ್ಗೆ ಕೂಡ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ. ಚಿಲುಮೆ ಸಂಸ್ಥೆ ಹೆಸರಿನಲ್ಲಿ ದೂರು ಬಂದಾಕ್ಷಣ ಅದಕ್ಕೆ ನೀಡಿರುವ ಅನುಮತಿಯನ್ನು ಬಿಬಿಎಂಪಿಯಿಂದ ರದ್ದು ಮಾಡಲಾಗಿದೆ. ಈ ಗುತ್ತಿಗೆಯನ್ನು ಸರ್ಕಾರ ರದ್ದು ಮಾಡಿದೆ ಎಂದರೆ, ಆದ ಅಪರಾಧವನ್ನು ಒಪ್ಪಿಕೊಂಡಂತೆ ಅಲ್ಲವೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸಮಾಜ ಸೇವೆಗೆ ಬೇಕಾದಷ್ಟು ಅವಕಾಶ ಇರುವಾಗ ಮತದಾರರ ಪಟ್ಟಿ ಪರಿಷ್ಕರಣೆಯನ್ನು ಉಚಿತವಾಗಿ ಮಾಡುತ್ತೇವೆ ಎಂದು ಸಂಸ್ಥೆ ಅರ್ಜಿ ನೀಡಿದರೂ, ಚಿಲುಮೆ ಸಂಸ್ಥೆಗೆ ಅನುಮತಿ ನೀಡಲಾಗಿದೆ. ಆಗಲೇ, ಅದರ ಹಿಂದಿನ ದುರುದ್ದೇಶದ ಅರಿವು ಬಿಬಿಎಂಪಿಗೆ ಆಗಬೇಕಿತ್ತು. ಆಗಿಲ್ಲ ಎಂದರೆ ಬಿಬಿಎಂಪಿ ಹಗರಣದದಲ್ಲಿ ಭಾಗಿಯಾಗಿದೆ ಎಂದು ಅರ್ಥ ಎಂದು ಟೀಕಿಸಿದ್ದಾರೆ.
ಇದೇ ವೇಳೆ, ಸಿಎಂ ಬಸವರಾಜ ಬೊಮ್ಮಾಯಿ ಅವರು ಜಾತಿ ಗಣತಿ ಹೆಸರಿನಲ್ಲಿ ಸಿದ್ದರಾಮಯ್ಯ ನಡೆಸಿದ್ದು ಏನು ಎಂಬ ಪ್ರಶ್ನೆಗೆ ಟ್ವೀಟ್ ಮೂಲಕ ಉತ್ತರಿಸಿರುವ ಸಿದ್ದರಾಮಯ್ಯ, ಒಂದು ಸಂಸ್ಥೆಯ ಹಿನ್ನೆಲೆಯನ್ನೂ ಪರಿಶೀಲಿಸದೇ ಮತದಾರರ ಪಟ್ಟಿ ಪರಿಷ್ಕರಣೆಗೆ ನೀಡಿರುವ ಅನುಮತಿಗೂ, ಸುಪ್ರೀಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ನಡೆಸಿರುವ ಜಾತಿಗಣತಿಗೂ ಸಂಬಂಧ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ:ಆಪರೇಷನ್ ಮತದಾರರ ಪಟ್ಟಿ ಪರಿಷ್ಕರಣೆ ಹಗರಣ: ಚೀಫ್ ಜಸ್ಟಿಸ್ ಉಸ್ತುವಾರಿಯಲ್ಲಿ ತನಿಖೆ ಮಾಡಿಸಿ