ಬೆಂಗಳೂರು:ಛಲವಾದಿ ನಾರಾಯಣ ಸ್ವಾಮಿಯವರೇ, ನಿಮ್ಮ ಪ್ರತಿಭಟನೆಯ ಹಕ್ಕನ್ನು ನಾನು ಗೌರವಿಸುತ್ತೇನೆ. ಆದರೆ ಕೇವಲ ರಾಜಕೀಯ ಜಿದ್ದಾಜಿದ್ದಿಗಾಗಿ ಹಳೆಚಡ್ಡಿ ಹೊತ್ತುಕೊಳ್ಳಲೂ ಸಿದ್ಧರಾದ ನಿಮ್ಮ ಗುಲಾಮಿ ಮನಸ್ಥಿತಿಗೆ ನನ್ನ ಧಿಕ್ಕಾರ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಚಡ್ಡಿ ಬಗ್ಗೆ ಹೇಳಿಕೆ ಖಂಡಿಸಿ ಛಲವಾದಿ ನಾರಾಯಣಸ್ವಾಮಿ ಮಂಗಳವಾರ ಸಿದ್ದರಾಮಯ್ಯ ಮನೆ ಬಳಿ ಚಡ್ಡಿ ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು. ಈ ಕುರಿತು ಟ್ವೀಟ್ ಮಾಡಿರುವ ಅವರು, ಆರ್ಎಸ್ಎಸ್ಗೆ ಬೆಂಬಲ ನೀಡಲು ಹಳೆ ಚಡ್ಡಿ ಹೊತ್ತು ಕೊಂಡು ಮೆರವಣಿಗೆ ಮಾಡಿದ ನಾರಾಯಣಸ್ವಾಮಿಯವರೇ, ನಿಮ್ಮ ಸ್ಥಾನಮಾನ ಏನಿದ್ದರೂ ಇಷ್ಟಕ್ಕೆ ಸೀಮಿತ. ಆ ಸಂಘದ ಉನ್ನತ ಪದಾಧಿಕಾರಕ್ಕೆ ನೀವು ಸದಾ ಅಸ್ಪೃಶ್ಯ ನೆನಪಿರಲಿ ಎಂದು ತಿರುಗೇಟು ನೀಡಿದ್ದಾರೆ.
ನಿಮ್ಮ ಸಂಘದ ಉನ್ನತ ಪದಾಧಿಕಾರಿಗಳಲ್ಲಿ ದಲಿತರು ಮತ್ತು ಹಿಂದುಳಿದ ಜಾತಿಗಳು ಯಾಕೆ ಇಲ್ಲ? ಎನ್ನುವ ನನ್ನ ಪ್ರಶ್ನೆಗೆ ಆರ್ಎಸ್ಎಸ್ನವರು ಶಾಸಕ ಛಲವಾದಿ ನಾರಾಯಣ ಸ್ವಾಮಿಯವರ ಮೂಲಕ ಉತ್ತರ ನೀಡಿದ್ದಾರೆ. ಈ ಸಂದೇಶವನ್ನು ಬಿಜೆಪಿಯಲ್ಲಿರುವ ದಲಿತ ಬಂಧುಗಳು ಅರ್ಥಮಾಡಿಕೊಳ್ಳಲಿ ಎಂದು ಹಾರೈಸುವುದಾಗಿ ಹೇಳಿದ್ದಾರೆ.
ಛಲವಾದಿ ನಾರಾಯಣ ಸ್ವಾಮಿಯವರೇ, ಯಾರ್ಯಾರದೋ ಹಳೆ ಚಡ್ಡಿ ಹೊತ್ತುಕೊಂಡ ನಿಮ್ಮನ್ನು ಕಂಡು ಮನಸ್ಸಿಗೆ ನೋವಾಯಿತು. ನಿಮ್ಮನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷತೆಯಂತಹ ಸ್ಥಾನದಲ್ಲಿ ಕಾಣುವ ಆಸೆ ನನಗೆ. ಸ್ವಾಭಿಮಾನವನ್ನು ಉಸಿರಾಗಿಸಿಕೊಂಡು ಬದುಕಿದ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಸ್ವಲ್ಪ ಓದಿ ಸ್ವಾಭಿಮಾನದ ಪಾಠ ಕಲಿಯಬೇಕೆಂದಷ್ಟೇ ನಿಮಗೆ ನಾನು ನೀಡುವ ಸಲಹೆ ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಚಡ್ಡಿ ಮಾನವ ಕುಲದ ಗೌರವ ಕಾಪಾಡುವ ಸಂಕೇತ: ಛಲವಾದಿ ನಾರಾಯಣ ಸ್ವಾಮಿ