ಬೆಂಗಳೂರು:ಬಿಬಿಸಿ ಗುಜರಾತ್ನಲ್ಲಿ 2002ರಲ್ಲಿ ನಡೆದ ಗೋದ್ರಾ ಗಲಭೆಯ ಬಗ್ಗೆ ಮಾಡಿರುವ ಸಾಕ್ಷ್ಯ ಚಿತ್ರಕ್ಕೆ ಭಾರತದಲ್ಲಿ ನಿಷೇಧ ಹೇರಿರುವ ಬಗ್ಗೆ ಪ್ರಶ್ನಿಸಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. ಅಲ್ಲದೇ ಸಿದ್ದರಾಮಯ್ಯ ನಿಜ ಕನಸುಗಳು ಎಂದು ಪುಸ್ತಕ ಬಿಡುಗಡೆ ಮಾಡುವುದು ಎಷ್ಟು ಸರಿ ಎಂದು ಈ ಬಗ್ಗೆಯೇ ಟ್ವಿಟರ್ನಲ್ಲಿ ಚರ್ಚೆಗೆಳೆದಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರದ ಕುರಿತಾಗಿ ಸರಣಿ ಟ್ವೀಟ್ ಮಾಡಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಬಿಬಿಸಿ ಸಾಕ್ಷ್ಯಚಿತ್ರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೇ ಬಿಜೆಪಿ ನಾಯಕರು ದೇಶಾದ್ಯಂತ ಪ್ರತಿಪಕ್ಷದ ನಾಯಕರನ್ನು ಹೀಗಳೆದಾಗ ಭಾರತದ ಗೌರವಕ್ಕೆ ಧಕ್ಕೆ ಉಂಟಾಗುವುದಿಲ್ಲವೇ? ಎಂದು ಕಿಡಿ ಕಾರಿದ್ದಾರೆ.
ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರಹಾಕಿರುವ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿಯವರ ಕುರಿತು ಬಿಬಿಸಿ ತಯಾರಿಸಿದ್ದ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡದಂತೆ ಮಾಧ್ಯಮಗಳ ಮೇಲೆ ಕೇಂದ್ರ ಸರ್ಕಾರ ನಿರ್ಬಂಧ ಹೇರಿದೆ. ಇದೇ ರೀತಿ ಪ್ರತಿಪಕ್ಷದ ನಾಯಕರ ಚಾರಿತ್ರ್ಯಹನನ ಮಾಡದಂತೆಯೂ ಮಾಧ್ಯಮಗಳ ಮೇಲೆ ನಿರ್ಬಂಧ ಹೇರಬೇಕಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಕಳೆದ ಎಂಟು ವರ್ಷಗಳಿಂದ ಬಿಜೆಪಿ ನಾಯಕರುನನ್ನ ವಿರುದ್ಧ ಸುಳ್ಳಿನ ಕಂತೆಗಳ ಅಪಪ್ರಚಾರ ಮಾಡಿದ್ದಾರೆ. ಬಿಜೆಪಿಯ ಅಧಿಕೃತ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿಗಳನ್ನು ಹರಡಿದ್ದಾರೆ, ನನ್ನ ಹೆಸರನ್ನೇ ತಿರುಚಿ ಗೇಲಿ ಮಾಡಿದ್ದಾರೆ. ಇದು ಕರ್ನಾಟಕ ಮತ್ತು ಕನ್ನಡಿಗರಿಗೆ ಮಾಡುವ ಅವಮಾನವಲ್ಲವೇ? ಎಂದಿದ್ದಾರೆ.
ಬಿಬಿಸಿ ಅಧ್ಯಯನ ಮಾಡಿ ಬಿಡುಗಡೆ ಮಾಡುತ್ತಿರುವ ಸಾಕ್ಷ್ಯಚಿತ್ರದಿಂದ ದೇಶದ ಗೌರವ ಹೋಗುತ್ತದೆ ಎಂದಾದರೇ, ರಾಜ್ಯಮಟ್ಟದ ನಾಯಕನ ಕುರಿತು ಯಾರೋ ಪುಸ್ತಕ ಬರೆದರೆ ಅದು ಅನೈತಿಕತೆ ಅಲ್ಲವೇ ಎಂಬ ರೀತಿ ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ. ನನ್ನ ವಿರುದ್ಧ ಯಾರೋ ಅನಾಮಧೇಯರು ಸುಳ್ಳಿನ ಕಂತೆಗಳ ಪುಸ್ತಕ ಬರೆಯುತ್ತಾರೆ. ಆ ಪುಸ್ತಕವನ್ನು ಸಚಿವರೊಬ್ಬರ ಅಧ್ಯಕ್ಷತೆಯಲ್ಲಿ ಬಿಡುಗಡೆ ಗೊಳಿಸಲು ಸಮಾರಂಭ ಆಯೋಜಿಸುತ್ತಾರೆ. ಇಂತಹ ಕುಚೇಷ್ಠೆ - ಕುಚೋದ್ಯಗಳನ್ನು ಬೆಂಬಲಿಸುವವರಿಗೆ ವಿಶ್ವಾಸಾರ್ಹ ಹಿನ್ನೆಲೆಯ ಬಿಬಿಸಿ ಮಾಧ್ಯಮ ಸಂಸ್ಥೆಯನ್ನು ವಿರೋಧಿಸುವ ಯಾವ ನೈತಿಕತೆ ಇದೆ ಎಂದು ಟೀಕಿಸಿದ್ದಾರೆ.
ಬಿಬಿಸಿ ಸಾಕ್ಷ್ಯಚಿತ್ರದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಬಿಜೆಪಿ ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಸಾಕ್ಷ್ಯಚಿತ್ರ ಪ್ರಸಾರ ಮಾಡದಂತೆ ನಿಷೇಧ ಹೇರಿದೆ. ಕಾಂಗ್ರೆಸ್ ಯುವ ಘಟಕ ಸಾರ್ವಜನಿಕವಾಗಿ ಕೆಲವೆಡೆ ವಿವಾದಿತ ಸಾಕ್ಷ್ಯಚಿತ್ರವನ್ನು ಪ್ರಸಾರ ಮಾಡುತ್ತಿದೆ. ಇದು ಬಿಜೆಪಿ ನಾಯಕರನ್ನು ಕೆರಳಿಸಿದೆ. ಈ ಸಂಬಂಧ ಬಿಜೆಪಿ ನಾಯಕರು ಬಿಬಿಸಿ ಸಾಕ್ಷ್ಯಚಿತ್ರದಿಂದ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಗೌರವಕ್ಕೆ ಧಕ್ಕೆ ಉಂಟಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ:ಈ ಬಗ್ಗೆ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ ತನ್ನ ಬಗ್ಗೆ ಸಿದ್ದರಾಮಯ್ಯ ನಿಜ ಕನಸುಗಳು ಎಂಬ ಪುಸ್ತಕ ಬಿಡುಗಡೆ ಮಾಡಲು ಮುಂದಾಗಿರುವ ಬಗ್ಗೆ ಉಲ್ಲೇಖಿಸಿದ್ದಾರೆ. ಆ ಪುಸ್ತಕವನ್ನು ಸಚಿವ ಅಶ್ವತ್ಥ್ ನಾರಾಯಣ್ ಬಿಡುಗಡೆ ಮಡಲು ಉದ್ದೇಶಿಸಲಾಗಿತ್ತು. ಆದರೆ ಬಳಿಕ ಕೋರ್ಟ್ ಪುಸ್ತಕ ಬಿಡುಗಡೆಗೆ ತಡೆಯಾಜ್ಞೆ ವಿಧಿಸಿತ್ತು.
ಇದನ್ನೂ ಓದಿ:ಸಿದ್ದು ನಿಜ ಕನಸುಗಳ ಕೃತಿಯಲ್ಲೇನಿದೆ ನೋಡದೇ ತಡೆ ತಂದಿದ್ದು ಅಸಹಿಷ್ಣುತೆಗೆ ನಿದರ್ಶನ: ರೋಹಿತ್ ಚಕ್ರತೀರ್ಥ ವ್ಯಂಗ್ಯ