ಕರ್ನಾಟಕ

karnataka

ETV Bharat / state

ಪ್ರತ್ಯೇಕ ರಾಜ್ಯದ ಹೇಳಿಕೆ: ಸಂಪುಟದಿಂದ ಕತ್ತಿ ಕೈಬಿಡುವಂತೆ ಸಿದ್ದರಾಮಯ್ಯ ಆಗ್ರಹ - Umesh Katti Statement

ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಪ್ರಸ್ತಾಪಿಸಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Siddaramaiah
ಸಿದ್ದರಾಮಯ್ಯ

By

Published : Jun 23, 2022, 7:10 PM IST

ಬೆಂಗಳೂರು: ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯದ ಬಗ್ಗೆ ಮತ್ತೆ ಪ್ರಸ್ತಾಪಿಸಿರುವ ಸಚಿವ ಉಮೇಶ್ ಕತ್ತಿ ವಿರುದ್ಧ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ಟ್ವೀಟ್ ಮೂಲಕ ತಮ್ಮ ಅಸಮಾಧಾನ ಹೊರ ಹಾಕಿರುವ ಅವರು, ರಾಜ್ಯವನ್ನು ಇಬ್ಭಾಗ ಮಾಡುವ ಚರ್ಚೆ ಪ್ರಧಾನಿ ನರೇಂದ್ರ ಮೋದಿ ಅವರ‌ ಮಟ್ಟದಲ್ಲಿಯೇ ನಡೆಯುತ್ತಿದೆ ಎಂಬ ಆಘಾತಕಾರಿ ಸಂಗತಿಯನ್ನು‌ ಸಚಿವ ಉಮೇಶ್ ಕತ್ತಿ ಬಹಿರಂಗಪಡಿಸಿದ್ದಾರೆ. ಇದರ ಸತ್ಯಾನುಸತ್ಯತೆಗಳನ್ನು ಪ್ರಧಾನಿ ಮೋದಿ‌ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸ್ಪಷ್ಟಪಡಿಸಬೇಕೆಂದು ಆಗ್ರಹಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್

ಸಚಿವರಾದ ಉಮೇಶ್ ಕತ್ತಿ ಅವರು ಜವಾಬ್ದಾರಿ ಸ್ಥಾನದಲ್ಲಿರುವವರು. ಪಕ್ಷ ಇಲ್ಲವೇ ಸರ್ಕಾರದ ಮಟ್ಟದಲ್ಲಿ ಅಂತಹ ಚರ್ಚೆ ನಡೆಯದೇ ರಾಜ್ಯ ಒಡೆಯುವ ಯೋಜನೆಯ ಬಗ್ಗೆ ಮಾತನಾಡಿರಲಾರರು. ಅವರು ಹೇಳಿರುವುದು‌ ಸುಳ್ಳಾಗಿದ್ದರೆ, ಇಂತಹ ಬೇಜವಾಬ್ದಾರಿ ಹೇಳಿಕೆಗಾಗಿ ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು. ಸಾವಿರಾರು ಹಿರಿಯ ಕನ್ನಡಿಗರ ಅವಿರತ ಹೋರಾಟದ ಫಲವಾಗಿ ಸ್ಥಾಪನೆಗೊಂಡ ಕರ್ನಾಟಕವನ್ನು ಒಡೆಯುವ ಯೋಚನೆ ಮಾಡುವುದೇ ನಾಡು-ನುಡಿಗೆ ಬಗೆಯುವ ದ್ರೋಹವಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್

ಸಚಿವ ಉಮೇಶ್ ಕತ್ತಿ ಅವರು ಪ್ರತ್ಯೇಕ ರಾಜ್ಯ ಸ್ಥಾಪನೆಯ ಕೂಗು ಹಾಕುತ್ತಿರುವುದು ಇದೇ ಮೊದಲ‌ ಸಲವೇನಲ್ಲ. ಭಾಷಾ ಸೂಕ್ಷ್ಮ ಪ್ರದೇಶವಾದ ಬೆಳಗಾವಿಯಲ್ಲಿಯೇ ಇಂತಹ ಪ್ರಚೋದನಕಾರಿ ಹೇಳಿಕೆಗಳ ಪರಿಣಾಮದ ಹೊಣೆಯನ್ನು ರಾಜ್ಯ ಬಿಜೆಪಿ ಸರ್ಕಾರವೇ ಹೊರಬೇಕಾಗುತ್ತದೆ ಎಂದು ಸಿದ್ದರಾಮಯ್ಯ ಎಚ್ಚರಿಸಿದ್ದಾರೆ.

ಸಿದ್ದರಾಮಯ್ಯ ಟ್ವೀಟ್

ಬೆಳಗಾವಿ ನಗರದ ಬಾರ್ ಅಸೋಸಿಯೇಷನ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಮಾತನಾಡಿದ್ದ ಸಚಿವ ಉಮೇಶ್ ಕತ್ತಿ, 2024ರ ಲೋಕಸಭೆ ಚುನಾವಣೆ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದರು. ಈ ವಿಚಾರವನ್ನು ಈ ಹಿಂದೆಯೂ ಸಾಕಷ್ಟು ಬಾರಿ ಪ್ರಸ್ತಾಪಿಸಿದ್ದರು. ಇದೀಗ ಮತ್ತೊಮ್ಮೆ ಪ್ರತ್ಯೇಕ ರಾಜ್ಯದ ಧ್ವನಿ ಎತ್ತುವ ಮೂಲಕ ಪ್ರತಿಪಕ್ಷಗಳ ತೀವ್ರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.

ಇದನ್ನೂ ಓದಿ:2024ರ ಲೋಕಸಭೆ ಎಲೆಕ್ಷನ್​ ನಂತರ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ; ಸಚಿವ ಕತ್ತಿ

ABOUT THE AUTHOR

...view details