ಬೆಂಗಳೂರು:ರಾಜ್ಯ ಸರ್ಕಾರದ ವತಿಯಿಂದ ಟಿಪ್ಪು ಜಯಂತಿ ಆಚರಣೆ ರದ್ದುಪಡಿಸಿದ್ದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಖಂಡಿಸಿದ್ದಾರೆ.
ಟ್ವಿಟ್ಟರ್ ಮೂಲಕ ಬೇಸರ ವ್ಯಕ್ತಪಡಿಸಿರುವ ಅವರು, ಟಿಪ್ಪು ಸುಲ್ತಾನ್ ಒಂದು ಧರ್ಮಕ್ಕೆ ಸೇರಿದವರಲ್ಲ. ನಮ್ಮ ರಾಜ್ಯಕ್ಕೆ ಮಾತ್ರವಲ್ಲ, ಇಡೀ ದೇಶಕ್ಕೆ ಸೇರಿರುವ ಆಸ್ತಿ. ಈ ಕಾರಣಕ್ಕಾಗಿಯೇ ಟಿಪ್ಪು ಜಯಂತಿ ಆಚರಣೆಯ ನಿರ್ಧಾರ ಕೈಗೊಂಡಿದ್ದೆ. ಜಾತಿ-ಧರ್ಮದ ಹೆಸರಲ್ಲಿ ಸಮಾಜವನ್ನು ಒಡೆಯಲು ಹೊರಟಿರುವ ಬಿಜೆಪಿಯ ನಡೆ ಅನಿರೀಕ್ಷಿತವೇನಲ್ಲ ಎಂದಿದ್ದಾರೆ.
ಅಪ್ರತಿಮ ದೇಶಭಕ್ತ:
ಟಿಪ್ಪು ಸುಲ್ತಾನ್ ದೇಶದ ಮೊದಲ ಸ್ವಾತಂತ್ರ್ಯ ಹೋರಾಟಗಾರ. ನಾಡಿಗಾಗಿ ಮಕ್ಕಳನ್ನೇ ಒತ್ತೆ ಇಟ್ಟ ಅಪ್ರತಿಮ ದೇಶಭಕ್ತ. ಸ್ವಾತಂತ್ರ್ಯ ಹೋರಾಟದಲ್ಲಿಯೇ ಭಾಗವಹಿಸದ ಸಂಘ ಪರಿವಾರಕ್ಕೆ ಇದೆಲ್ಲ ಅರ್ಥವಾಗುವ ವಿಷಯ ಅಲ್ಲ ಎಂದು ಟಿಪ್ಪು ಸುಲ್ತಾನ್ ಪರ ಬ್ಯಾಟ್ ಬೀಸಿದ್ದಾರೆ.
ಬಿ.ಎಸ್.ಯಡಿಯೂರಪ್ಪನವರು ಕೈಯಲ್ಲಿ ಕತ್ತಿ ಹಿಡಿದು ಟಿಪ್ಪು ವೇಷ ಧರಿಸಿ ಕುಣಿದಾಡುತ್ತಾ ಟಿಪ್ಪು ಜಯಂತಿಯಲ್ಲಿ ಭಾಗವಹಿಸಿದ್ದರು. ಈಗ ಸಂಘ ಪರಿವಾರವನ್ನು ಖುಷಿಪಡಿಸಲು ಜಯಂತಿಯನ್ನು ರದ್ದು ಮಾಡಿದ್ದಾರೆ ಎಂದಿರುವ ಸಿದ್ದರಾಮಯ್ಯ, ಇದೇ ಟ್ವೀಟ್ನಲ್ಲಿ ಸಿಎಂ ಯಡಿಯೂರಪ್ಪ, ಆರ್. ಅಶೋಕ್ ಹಾಗೂ ಶೆಟ್ಟರ್ ಅವರು ಟಿಪ್ಪು ಪೇಟ ಖಡ್ಗ ಧರಿಸಿ ನಿಂತಿರುವ ಹಳೆಯ ಫೋಟೋ ಕೂಡ ಲಗತ್ತಿಸಿದ್ದಾರೆ.