ಬೆಂಗಳೂರು: ರಾಜ್ಯ ಸರ್ಕಾರದ ವಿರುದ್ಧ ಸರಣಿ ಟ್ವೀಟ್ ಮಾಡುವ ಮೂಲಕ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಸೇರಿದಂತೆ 14 ಗಣ್ಯರಿಗೆ ಕೊಲೆ ಬೆದರಿಕೆ ಪತ್ರ ಬರೆದಿರುವುದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಇದರ ಸೂಕ್ತ ತನಿಖೆ ನಡೆಸಿ, ತಪ್ಪಿತಸ್ಥರನ್ನು ಶಿಕ್ಷಿಸಬೇಕು. ಭಯದ ವಾತಾವರಣ ಸೃಷ್ಟಿಸಿ ಜನರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಗೊಳಿಸುವ, ಯಾವುದೇ ಶಕ್ತಿಗಳಾದರೂ ಸರಿ ಅಂಥವರಿಗೆ ತಕ್ಕ ಶಿಕ್ಷೆಯಾಗಲೇಬೇಕು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಮೈಸೂರಿನಲ್ಲಿ 'ಫ್ರೀ ಕಾಶ್ಮೀರ್' ಫಲಕ ಪ್ರದರ್ಶಿಸಿದ್ದ ಯುವತಿ ಪರ ನಾನು ವಕಾಲತ್ತು ವಹಿಸುತ್ತಿಲ್ಲ. ನನ್ನ ಲೈಸೆನ್ಸ್ ಅನ್ನು ಹಿಂದೆ ಅಮಾನತು ಮಾಡಲಾಗಿತ್ತು. ಈ ಅಮಾನತು ತೆಗೆಯುವಂತೆ ಅರ್ಜಿ ಸಲ್ಲಿಸಿದ್ದೇನೆ. ಆದ್ರೆ ಯುವತಿಯ ಪರ ಯಾರೇ ವಕಾಲತ್ತು ವಹಿಸಿದರೂ ಅವರಿಗೆ ಬೆಂಬಲ ನೀಡುತ್ತೇನೆ. ಈ ಬಗ್ಗೆ ಗೊಂದಲ ಬೇಡ ಎಂದು ಹೇಳಿದ್ದಾರೆ.
ಜನಸಂಘ ವಿರೋಧಿಸಿತ್ತು:
ಬಿಜೆಪಿಯವರು ಸಂವಿಧಾನ ವಿರೋಧಿಗಳು. ಸ್ವಾತಂತ್ರ್ಯ ನಂತರ ಸಂಸತ್ನಲ್ಲಿ ಸಂವಿಧಾನ ಮಂಡನೆಯಾದಾಗ, ಆಗಿನ ಜನಸಂಘ ಅದನ್ನು ವಿರೋಧಿಸಿತ್ತು. ಆರ್ಎಸ್ಎಸ್ ಮತ್ತು ಜನಸಂಘಗಳು ಸಂವಿಧಾನದ ಮೇಲೆ ನಂಬಿಕೆಯಿಟ್ಟವರಲ್ಲ. ಅವರಿಗೆ ಮನುವಾದ, ಮನುಸ್ಮೃತಿ ಮೇಲಷ್ಟೇ ನಂಬಿಕೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ತಕ್ಕ ಶಿಕ್ಷೆಯಾಗುತ್ತಿದೆ
ಇನ್ನು ಪಕ್ಷ ಹಾಗೂ ಜನರ ನಂಬಿಕೆಗೆ ದ್ರೋಹ ಮಾಡಿ, ಬಿಜೆಪಿ ಸೇರಿ ಚುನಾವಣೆಯಲ್ಲಿ ಸೋತು, ಅತ್ತ ಸಚಿವ ಸ್ಥಾನವೂ ಸಿಗದೆ, ಇತ್ತ ಶಾಸಕರೂ ಅಲ್ಲದೆ ಅತಂತ್ರ ಸ್ಥಿತಿಯಲ್ಲಿರುವವರಿಗೆ ತಕ್ಕ ಶಿಕ್ಷೆಯಾಗುತ್ತಿದೆ. ಇದು ನ್ಯಾಯಕ್ಕೆ ಸಂದ ಜಯ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.