ಬೆಂಗಳೂರು : ಕರ್ನಾಟಕ ಮತ್ತು ಕನ್ನಡಿಗರಿಗೆ ಕೇಂದ್ರದ ಬಿಜೆಪಿ ಸರ್ಕಾರದಿಂದ ಆಗುತ್ತಿರುವ ಅನ್ಯಾಯಗಳನ್ನು ಹೇಳುತ್ತಲೇ ಬಂದಿದ್ದೇನೆ. ಇದಕ್ಕೆ ಉತ್ತರ ನೀಡಬೇಕಾಗಿರುವವರು ಪ್ರಧಾನಿ ನರೇಂದ್ರ ಮೋದಿಯವರೇ ಹೊರತು, ಬಿಜೆಪಿಯ ಐಟಿ ಸೆಲ್ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಪ್ರಧಾನಿಯವರು ಒಪ್ಪಿ ದಿನ ಮತ್ತು ಸ್ಥಳವನ್ನು ನಿಗದಿಪಡಿಸಿದರೆ ಈ ಬಗ್ಗೆ ಸಾರ್ವಜನಿಕ ಚರ್ಚೆಗೆ ನಾನು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದ್ದಾರೆ.
ನಾಡಿಗೆ ಬರಗಾಲ ಬಂದು ಆರು ತಿಂಗಳುಗಳಾಗಿವೆ. ಬರ ಪರಿಹಾರದ ಕೆಲಸಗಳಿಗಾಗಿ 18,177 ಕೋಟಿ ರೂಪಾಯಿ ನೀಡಲು ಮೂರು ತಿಂಗಳುಗಳಿಂದ ಒತ್ತಾಯಿಸುತ್ತ ಬಂದಿದ್ದೇವೆ. ಪತ್ರ ಬರೆದಿದ್ದೇವೆ. ನಾನೇ ಖುದ್ದಾಗಿ ಹೋಗಿ ಪ್ರಧಾನಮಂತ್ರಿಯವರನ್ನು ಭೇಟಿಯಾಗಿ ನಮ್ಮ ರೈತರ ಕಷ್ಟಗಳನ್ನು ವಿವರಿಸಿದ್ದೇನೆ. ಇಲ್ಲಿಯವರೆಗೆ ಒಂದು ಪೈಸೆ ಪರಿಹಾರ ಬಿಡುಗಡೆ ಮಾಡಿಲ್ಲ ಎಂದು ಸಿಎಂ ದೂರಿದ್ದಾರೆ.
ತೆರಿಗೆ ಹಣವನ್ನು ಕಳೆದುಕೊಂಡಿದ್ದಾರೆ:ಯುಪಿಎ ಸರ್ಕಾರದ 14ನೇ ಹಣಕಾಸು ಆಯೋಗವು ಕರ್ನಾಟಕಕ್ಕೆ ನಿಗದಿಪಡಿಸಿದ್ದ ಶೇ. 4.72 ತೆರಿಗೆ ಪಾಲನ್ನು ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಾರಿಗೆ ಬಂದ 15ನೇ ಹಣಕಾಸು ಆಯೋಗವು ಶೇ.3.64 ಕ್ಕೆ ಇಳಿಕೆ ಮಾಡಿ ವಂಚಿಸಲಾಗಿದೆ. ಇದರಿಂದ ಕನ್ನಡಿಗರು ಕಳೆದ 4 ವರ್ಷಗಳಲ್ಲಿ ಸುಮಾರು 45,000 ಕೋಟಿ ರೂಪಾಯಿಯಷ್ಟು ಗಳಿಕೆಯಿಂದ ಕಟ್ಟಿದ ತೆರಿಗೆ ಹಣವನ್ನು ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ ಅನುಷ್ಠಾನಗೊಳ್ಳುತ್ತಿರುವ ಕೇಂದ್ರ ಸರ್ಕಾರದ ಸಹಭಾಗಿತ್ವದ ಯೋಜನೆಗಳಿಗೆ ನೀಡುತ್ತಿರುವ ಅನುದಾನವನ್ನು ವರ್ಷದಿಂದ ವರ್ಷಕ್ಕೆ ಕಡಿತಗೊಳಿಸಲಾಗುತ್ತಿದೆ. 2021-22ರ ಅವಧಿಯಲ್ಲಿ 20 ಸಾವಿರ ಕೋಟಿ ರೂಪಾಯಿ ಇದ್ದ ಅನುದಾನ, 2022-23ರಲ್ಲಿ 13 ಸಾವಿರ ಕೋಟಿ ರೂಪಾಯಿಗೆ ಇಳಿಕೆಯಾಗಿದೆ ಎಂದು ಹೇಳಿದ್ದಾರೆ.