ಬೆಂಗಳೂರು: ಚೀನಾ ದೇಶ ಗಡಿ ತಂಟೆ ಶುರುಹಚ್ಚಿ ಏಳು ವಾರಗಳಾಗುತ್ತಾ ಬಂತು. ಅಲ್ಲಿನ ಬೆಳವಣಿಗೆಗಳ ನಿಜ ಸಂಗತಿಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಈವರೆಗೆ ಅಧಿಕೃತ ಹೇಳಿಕೆ ನೀಡಿಲ್ಲ. ಆಳುವವರ ಮೌನ ಜನದ್ರೋಹ ಮಾತ್ರವಲ್ಲ, ದೇಶದ್ರೋಹವೂ ಹೌದು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪರೋಕ್ಷವಾಗಿ ಕಿಡಿಕಾರಿದ್ದಾರೆ.
ಆಳೋರ ಮೌನ ಜನದ್ರೋಹದ ಜತೆಗೆ ದೇಶದ್ರೋಹವೂ ಹೌದು.. 'ಮೋ-ಶಾ' ವಿರುದ್ಧ ಸಿದ್ದರಾಮಯ್ಯ ಕಿಡಿ.. - siddaramiah tweet about border issue
ಚೀನಾ ದಾಳಿ ಹಾಗೂ ಒತ್ತುವರಿಯನ್ನು ಮಟ್ಟಹಾಕುವ ವಿಚಾರದಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
![ಆಳೋರ ಮೌನ ಜನದ್ರೋಹದ ಜತೆಗೆ ದೇಶದ್ರೋಹವೂ ಹೌದು.. 'ಮೋ-ಶಾ' ವಿರುದ್ಧ ಸಿದ್ದರಾಮಯ್ಯ ಕಿಡಿ.. Siddaramaiah](https://etvbharatimages.akamaized.net/etvbharat/prod-images/768-512-7651567-698-7651567-1592391144930.jpg)
ಈ ಕುರಿತು ಟ್ವೀಟ್ ಮಾಡಿರುವ ಅವರು, ದೇಶಕ್ಕಾಗಿ ಬೆವರು-ರಕ್ತ ಹರಿಸಿದ ನಾಯಕರ ಪಕ್ಷವಾದ ಕಾಂಗ್ರೆಸ್ ಪಕ್ಷ ಭಾರತದ ಏಕತೆ,ಅಖಂಡತೆ ಮತ್ತು ಸಾರ್ವಭೌಮತೆಗೆ ಸದಾ ಬದ್ಧವಾಗಿದೆ. ಹೀಗಾಗಿ ವೀರ ಸೈನಿಕರ ಬಲಿದಾನ ವ್ಯರ್ಥವಾಗಬಾರದು. ಹುತಾತ್ಮರ ಕುಟುಂಬಕ್ಕೆ ಗೌರವದ ಶ್ರದ್ಧಾಂಜಲಿ ಸಲ್ಲಿಸೋಣ. ಚೀನಾದ ದುಷ್ಕೃತ್ಯವನ್ನು ಒಕ್ಕೊರಲಿನಿಂದ ಖಂಡಿಸೋಣ ಎಂದಿದ್ದಾರೆ.
ಶತ್ರು ದೇಶದ ವಿರುದ್ಧ ಹೋರಾಡುವುದು ಸರ್ಕಾರ ಅಲ್ಲ, ದೇಶ. ಸರ್ಕಾರ ದೇಶಕ್ಕೆ, ದೇಶದ ಜನತೆಗೆ ಉತ್ತರದಾಯಿಯಾಗಿರಬೇಕು ಎಂದಿರುವ ಅವರು, ದೇಶದ ಪ್ರತಿಯೊಬ್ಬ ಪ್ರಜೆಯೂ ಕೇಂದ್ರ ಸರ್ಕಾರವನ್ನು ನಂಬಿದ್ದಾರೆ. ಹೀಗಾಗಿ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಂಬಿಕೆಯನ್ನು ಉಳಿಸಿಕೊಳ್ಳುವ ಹೊಣೆಯೂ ಕೇಂದ್ರ ಸರ್ಕಾರದ್ದು ಎಂದು ಬರೆದುಕೊಂಡಿದ್ದಾರೆ.