ಬೆಂಗಳೂರು :ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಯಾತ್ರೆ ಪ್ರಾರಂಭಿಸಿವೆ. ಒಂದೆಡೆ ಕಾಂಗ್ರಸ್ ಭಾರತ್ ಜೋಡೋ ಮಾಡುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ಜನಸಂಕಲ್ಪ ಯಾತ್ರೆ ನಿನ್ನೆಯಿಂದ ಆರಂಭಿಸಿದೆ. ಈ ನಡುವೆ ನಾಯಕರ ವಾಕ್ಸಮರವೂ ಹೆಚ್ಚಾಗುತ್ತಿದೆ. ಬಿಜೆಪಿ ನಾಯಕರು ಭಾರತ್ ಜೋಡೋ ಬಗ್ಗೆ ನಾಲಿಗೆ ಹರಿ ಬಿಟ್ಟರೆ, ಇತ್ತ ಕಾಂಗ್ರೆಸ್ನವರು ಜನಸಂಕಲ್ಪ ಯಾತ್ರೆ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಬಿಜೆಪಿಯ ಜನಸಂಕಲ್ಪ ಯಾತ್ರೆಯ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಸಿದ್ದರಾಮಯ್ಯ ಮಾಜಿ ಮತ್ತು ಹಾಲಿ ಮುಖ್ಯ ಮಂತ್ರಿಗೆ ಸವಾಲ್ ಹಾಕಿದ್ದಾರೆ.
ನಡೆದು ಯಾತ್ರೆ ಮಾಡಿ ತೋರಿಸಿ : ಬಡಾಯಿ ಬೊಮ್ಮಾಯಿ ಎಂದು ಸರಣಿ ಟ್ವೀಟ್ ಮೂಲಕ ಸಿಎಂ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ಅವರು, ಜನಸಂಕಲ್ಪ ಯಾತ್ರೆಗೆ ಹೊರಟಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಹಾಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ನನ್ನ ಎರಡೇ ಎರಡು ಸವಾಲು.. 1. ಕಾರು-ಜೀಪು ಬಿಟ್ಟು ನಾಲ್ಕು ಕಿ.ಮೀ. ಎಡವದೆ ನಡೆದುಕೊಂಡು ಹೋಗಿ. 2. ಸಿದ್ದರಾಮಯ್ಯ ಎಂಬ ಹೆಸರೆತ್ತದೆ ಐದು ನಿಮಿಷ ಭಾಷಣ ಮಾಡಿ ಎಂದು ಸವಾಲು ಹಾಕಿದ್ದಾರೆ.
ಜನ ನಿಮ್ಮ ದ್ರೋಹ ಮರೆಯಲ್ಲ : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರಿಗೆ ಒಬ್ಬಂಟಿಯಾಗಿ ಯಾತ್ರೆ ಹೊರಡುವ ಧೈರ್ಯ ಇಲ್ಲ, ಜನ ಕಲ್ಲು ಹೊಡೆಯುತ್ತಾರೋ ಎಂಬ ಭಯ. ಇದಕ್ಕಾಗಿ ರಕ್ಷಣೆಗಾಗಿ ಬಿಎಸ್ ಯಡಿಯೂರಪ್ಪ ಅವರನ್ನು ಜೊತೆಯಲ್ಲಿ ಕರೆದುಕೊಂಡು ಬಂದಿದ್ದಾರೆ. ಮುಖ್ಯಮಂತ್ರಿ ಸ್ಥಾನವನ್ನು ಕಿತ್ತುಕೊಂಡಾಗ ಬಹಿರಂಗವಾಗಿಯೇ ಬಸವರಾಜ್ ಬೊಮ್ಮಾಯಿ ಅವರು ಕಣ್ಣೀರು ಹಾಕಿದ್ದನ್ನು ರಾಜ್ಯದ ಜನ ನೋಡಿದ್ದಾರೆ. ಅವರ ಬೆನ್ನಿಗೆ ಇರಿದವರು ಯಾರು ಎನ್ನುವುದೂ ಜನರಿಗೆ ಗೊತ್ತು. ಯಡಿಯೂರಪ್ಪ ಕರೆದುಕೊಂಡು ಬಂದ ಕೂಡಲೇ ಜನ ನಿಮ್ಮ ದ್ರೋಹವನ್ನು ಮರೆಯಲಾರರು ಎಂದು ಹೇಳಿದ್ದಾರೆ.
ಕಂತು ಪಾವತಿಸಿದಿದ್ದರೆ ಮನೆಗೆ : ಬಿಜೆಪಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರೇ ಹೇಳುವಂತೆ ಬಸವರಾಜ್ ಬೊಮ್ಮಾಯಿ ಅವರೊಬ್ಬ'ಎರಡುವರೆ ಸಾವಿರ ಕೋಟಿ ರೂಪಾಯಿಯ 'ಪೇ-ಸಿಎಂ' ಹೈಕಮಾಂಡ್ಗೆ ಸರಿಯಾಗಿ ಕಂತು ಪಾವತಿಯಾದರೆ ಮಾತ್ರ ಅವರು ಸುರಕ್ಷಿತ. ತಪ್ಪಿದರೆ ಮನೆಗೆ ಎಂದು ಟೀಕಿಸಿ ಮತ್ತೆ ಪೇ ಸಿಎಂ ಪ್ರಸ್ತಾಪಿಸಿದ್ದಾರೆ.