ಬೆಂಗಳೂರು :ಕೊರೊನಾ ಎರಡನೇ ಅಲೆ ಪರಿಣಾಮವನ್ನು ನಿಯಂತ್ರಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಸಂಪೂರ್ಣ ವಿಫಲವಾಗಿವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಟ್ವೀಟ್ ಮೂಲಕ ತಮ್ಮ ಆಕ್ರೋಶ ಹೊರ ಹಾಕಿರುವ ಅವರು, ಕೋವಿಡ್-19 ಎರಡನೇ ಅಲೆ ನಿಯಂತ್ರಿಸುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದುರ್ಬಲವಾದ ಸಾರ್ವಜನಿಕ ಆರೈಕೆ, ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ರೋಗಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಿರುವುದು ಸರ್ಕಾರದ ದೌರ್ಬಲ್ಯ ಎತ್ತಿ ತೋರಿಸುತ್ತಿದೆ ಎಂದಿದ್ದಾರೆ.
ಕೋವಿಡ್-19ಗೆ ಯಾವುದೇ ವೈದ್ಯಕೀಯ ಚಿಕಿತ್ಸೆ ಇಲ್ಲದೆ ಜನ ಅಸಹಾಯಕರಾಗಿದ್ದಾರೆ. 1ನೇ ಅಲೆ ಸಂದರ್ಭ ಭಾರತಕ್ಕೆ ಸಾಕಷ್ಟು ಗಂಭೀರ ಅನುಭವಗಳು ಆದವು. ಆದರೂ ಸರ್ಕಾರ ಯಾವುದೇ ಪಾಠ ಕಲಿತಿಲ್ಲ. ಕೋವಿಡ್ ಚಿಕಿತ್ಸೆಗೆ ವ್ಯಾಪಕವಾಗಿ ಬಳಸಲಾಗುವ ಪರಿಹಾರಗಳು ಲಭ್ಯವಿಲ್ಲ. ಸರ್ಕಾರ ಔಷಧಿಗಳನ್ನು ಹೇಗೆ ಸೂಕ್ತ ಪ್ರಮಾಣದಲ್ಲಿ ಸಿದ್ಧಪಡಿಸುತ್ತಿದೆ ಎಂದು ಪ್ರಶ್ನಿಸಿದ್ದಾರೆ.
ಕೋವಿಡ್ ರೋಗಿಗಳಿಗೆ ಸಾಮಾನ್ಯ ಮತ್ತು ಐಸಿಯು ಹಾಸಿಗೆಗಳ ಕೊರತೆಯೂ ಇದೆ. ಆಮ್ಲಜನಕ ಮತ್ತು ಇತರ ಬೆಂಬಲ ವ್ಯವಸ್ಥೆಗಳಿಲ್ಲದೆ ಜನರು ಬಳಲುತ್ತಿದ್ದಾರೆ. ಸಾರ್ವಜನಿಕ ಆರೋಗ್ಯದ ಬಿಕ್ಕಟ್ಟನ್ನು ಪರಿಹರಿಸುವ ಬದಲು ರಾಜ್ಯ ಸರ್ಕಾರ ತನ್ನ ಆಂತರಿಕ ಬಿಕ್ಕಟ್ಟನ್ನು ಪರಿಹರಿಸುವಲ್ಲಿ ನಿರತವಾಗಿದೆ ಎಂದು ಲೇವಡಿ ಮಾಡಿದ್ದಾರೆ.