ಬೆಂಗಳೂರು: ಕಾವೇರಿ ನಿವಾಸ ತಮಗೆ ನೀಡುವಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮಾಡಿದ್ದ ಮನವಿಯನ್ನು ತಿರಸ್ಕರಿಸಿರುವ ಸರ್ಕಾರ ರೇಸ್ ಕೋರ್ಸ್ ರಸ್ತೆಯ ರೇಸ್ ವ್ಯೂ ಕಾಟೇಜ್ 2ಅನ್ನು ಹಂಚಿಕೆ ಮಾಡಿ ಆದೇಶ ಹೊರಡಿಸಿದೆ.
ಬಿಎಸ್ವೈಗೆ ಕೊನೆಗೂ ಒಲಿದ ಕಾವೇರಿ, ಸಿದ್ದರಾಮಯ್ಯಗೆ ರೇಸ್ ವ್ಯೂ ಕಾಟೇಜ್-2! - ಸಿದ್ದರಾಮಯ್ಯಗೆ ಸರ್ಕಾರದಿಂದ ರೇಸ್ ವ್ಯೂ ಕಾಟೇಜ್-2 ಹಂಚಿಕೆ
ಕಳೆದ ಆರು ವರ್ಷದಿಂದ ವಾಸ್ತವ್ಯ ಹೂಡಿದ್ದ ಕಾವೇರಿ ಸರ್ಕಾರಿ ನಿವಾಸವನ್ನು ಉಳಿಸಿಕೊಳ್ಳುವಲ್ಲಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿಫಲರಾಗಿದ್ದು, ರೇಸ್ ಕೋರ್ಸ್ ರಸ್ತೆ ನಿವಾಸಕ್ಕೆ ತೆರಳಬೇಕಿದೆ.

ಈ ಹಿಂದೆ ಸಿಎಂ ಯಡಿಯೂರಪ್ಪಗೆ ಹಂಚಿಕೆಯಾಗಿದ್ದ ಬಿಎಸ್ವೈ ಲಕ್ಕಿ ಹೌಸ್ ರೇಸ್ ವ್ಯೂ ಕಾಟೇಜ್ -2 ಅನ್ನು ವಾಪಸ್ ಪಡೆದು ಸಿದ್ದರಾಮಯ್ಯಗೆ ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶ ಹೊರಡಿಸಿದೆ.
ರೇಸ್ ಕೋರ್ಸ್ ನಿವಾಸದ ಬದಲು ಸಿಎಂ ಗೃಹ ಕಚೇರಿ ಕೃಷ್ಣಾದ ಪಕ್ಕದಲ್ಲೇ ಇರುವ ಕಾವೇರಿ ನಿವಾಸದಲ್ಲಿ ವಾಸ್ತವ್ಯ ಹೂಡಿದರೆ, ಪೂರ್ಣಾವಧಿ ಮುಗಿಸಬಹುದು ಎನ್ನುವ ಕಲ್ಪನೆಯ ಜೊತೆಗೆ ಗೃಹ ಕಚೇರಿಗೆ ತೆರಳಲು ಅನಗತ್ಯ ಸಂಚಾರ ದಟ್ಟಣೆ ತಪ್ಪಿಸಲು ಕಡಿವಾಣ ಹಾಕಬಹುದು ಎನ್ನುವ ಕಾರಣಕ್ಕಾಗಿ ಬಿಎಸ್ವೈ ಕಾವೇರಿಗಾಗಿ ಬೇಡಿಕೆ ಇರಿಸಿದ್ದರು. ಅದರಂತೆ ಕಾವೇರಿ ನಿವಾಸವನ್ನು ಸಿಎಂ ಬಿಎಎಸ್ವೈಗೆ ಹಂಚಿಕೆ ಮಾಡಲಾಗಿದೆ.
ಇದೀಗ ಕಾವೇರಿ ನಿವಾಸ ಬದಲಾವಣೆಗೆ ಮುಖ್ಯಮಂತ್ರಿ ಸ್ಪಷ್ಟವಾಗಿ ನಿರಾಕರಿಸಿದ್ದಾರೆ. ಯಾವುದೇ ಕಾರಣಕ್ಕೂ ಕಾವೇರಿ ನಿವಾಸ ಬಿಡಲ್ಲ ಅದನ್ನು ಸಿದ್ದರಾಮಯ್ಯಗೆ ಹಂಚಿಕೆ ಮಾಡಲು ಪರಿಗಣಿಸುವ ಅಗತ್ಯವಿಲ್ಲ. ಅವರಿಗೆ ರೇಸ್ ಕೋರ್ಸ್ ರಸ್ತೆ ನಿವಾಸ ಹಂಚಿಕೆ ಮಾಡಿ ಎಂದು ಸಿಎಂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಗೆ ಸೂಚನೆ ನೀಡಿದೆ ಎನ್ನಲಾಗಿದೆ.