ಬೆಂಗಳೂರು:ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಇಂದು ಸಂಜೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಲಿದ್ದಾರೆ.
ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಂಜೆ 5 ಗಂಟೆಗೆ ಭೇಟಿ ಸಮಯ ನಿಗದಿಯಾಗಿದೆ. ನಿನ್ನೆ ರಾತ್ರಿಯೇ ಬೆಂಗಳೂರಿನಿಂದ ದೆಹಲಿಗೆ ತೆರಳಿರುವ ಸಿದ್ದರಾಮಯ್ಯ, ಸೋನಿಯಾ ಭೇಟಿಗೂ ಮುನ್ನ ಕೆಲ ರಾಷ್ಟ್ರೀಯ ಕಾಂಗ್ರೆಸ್ ನಾಯಕರನ್ನು ಭೇಟಿಯಾಗಿ ಚರ್ಚಿಸಲಿದ್ದಾರೆ.
ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ವಿಧಾನಸಭೆ ಪ್ರತಿಪಕ್ಷದ ನಾಯಕ ಸ್ಥಾನ ನೀಡಿದ್ದಕ್ಕಾಗಿ ಸೋನಿಯಾ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸಲಿದ್ದು, ಸಾಕಷ್ಟು ಕುತೂಹಲ ಹಾಗೂ ಸ್ಪರ್ಧಾತ್ಮಕವಾಗಿದ್ದ ರಾಜ್ಯ ಕಾಂಗ್ರೆಸ್ನ ಪ್ರಮುಖ ಹುದ್ದೆಯ ಆಯ್ಕೆಯಲ್ಲಿ ಸಿದ್ದರಾಮಯ್ಯ ಯಶಸ್ಸು ಕಂಡಿದ್ದಾರೆ.
ರಾಜ್ಯ ವಿಧಾನಸಭೆಯ 17 ಕ್ಷೇತ್ರಗಳಿಗೆ ನಡೆಯಲಿರುವ ಉಪ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಂಬಂಧ ಸೋನಿಯಾ ಗಾಂಧಿ ಅವರೊಂದಿಗೆ ಚರ್ಚಿಸಲಿದ್ದಾರೆ. ಈಗಾಗಲೇ ಎಲ್ಲಾ ಕ್ಷೇತ್ರಗಳ ಅಭ್ಯರ್ಥಿ ಆಯ್ಕೆ ಸಂಬಂಧ ಚರ್ಚೆ ಪೂರ್ಣಗೊಂಡಿದ್ದು, ತಲಾ ಇಬ್ಬರು ಆಕಾಂಕ್ಷಿಗಳ ಹೆಸರನ್ನು ಹೊಂದಿರುವ ಪಟ್ಟಿಯೊಂದಿಗೆ ಸಿದ್ದರಾಮಯ್ಯ ದಿಲ್ಲಿಗೆ ತೆರಳಿದ್ದಾರೆ. ಆ ಪಟ್ಟಿಯನ್ನು ಕಾಂಗ್ರೆಸ್ ಅಧಿನಾಯಕಿ ಮುಂದಿಡಲಿದ್ದು, ಅಂತಿಮ ಪಟ್ಟಿಯೊಂದಿಗೆ ವಾಪಸಾಗುವ ಸಾಧ್ಯತೆ ಇದೆ.
ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಬಂಧನ, ಮಾಜಿ ಡಿಸಿಎಂ ಡಾ. ಜಿ.ಪರಮೇಶ್ವರ್ ಮೇಲಿನ ಐಟಿ ದಾಳಿ ಸೇರಿದಂತೆ ಹಲವು ವಿಚಾರಗಳ ಕುರಿತು ಸಮಾಲೋಚಿಸಲಿದ್ದಾರೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತು ಕೇಳಿಬರುತ್ತಿದ್ದು, ತಮ್ಮ ಆಪ್ತರಾದ ದಿನೇಶ್ ಗುಂಡೂರಾವ್ ಅವರ ಪರ ಸಿದ್ದರಾಮಯ್ಯ ಒತ್ತಡ ಹೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನೆಲೆ ಸಿದ್ದರಾಮಯ್ಯ ದಿಲ್ಲಿಯಿಂದ ನೇರವಾಗಿ ಮಹಾರಾಷ್ಟ್ರ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ಅ. 17ರಂದು ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ಕರ್ನಾಟಕದ ಗಡಿ ಭಾಗದ ಜತ್, ಸಾಂಗ್ಲಿ, ಅಕ್ಕಲಕೋಟ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದು, ಅ. 19ರಂದು ಕೇರಳ ಉಪ ಚುನಾವಣಾ ಪ್ರಚಾರಕ್ಕೆ ತೆರಳಲಿದ್ದಾರೆ. ಅಲ್ಲಿ ಮಂಜೇಶ್ವರ ಉಪ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಲಿದ್ದಾರೆ.