ಬೆಂಗಳೂರು :ರಾಜ್ಯದ ಆರ್ಥಿಕ ಕೊರತೆಯನ್ನು ಒಟ್ಟು ಆಂತರಿಕ ಉತ್ಪನ್ನದ ಶೇ.3 ರಿಂದ ಶೇ.5ಕ್ಕೆ ಹೆಚ್ಚಿಸುವ ಕರ್ನಾಟಕ ಆರ್ಥಿಕ ಹೊಣೆಗಾರಿಕೆ (ತಿದ್ದುಪಡಿ) ವಿಧೇಯಕಕ್ಕೆ ನನ್ನ ವಿರೋಧವಿದೆ ಎಂದು ವಿಪಕ್ಷ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಸದನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸಭೆಯಲ್ಲಿ ವಿಧೇಯಕಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಆರ್ಥಿಕ ಕೊರತೆಯ ಆಂತರಿಕ ಉತ್ಪನ್ನವನ್ನು ಶೇ.3 ರಿಂದ 5ಕ್ಕೆ ಹೆಚ್ಚಿಸುವುದು ಬೇಡ. ಶೇ.3.5ರಷ್ಟು ಹೆಚ್ಚಳ ಮಾಡಬಹುದು. ಶೇ.3 ರಿಂದ 5ಕ್ಕೆ ಹೆಚ್ಚಳ ಮಾಡುವುದಕ್ಕೆ ನಮ್ಮ ವಿರೋಧವಿದೆ ಎಂದರು.
ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತು ಸರ್ಕಾರ ಕರ್ನಾಟಕವನ್ನು ಸಾಲಗಾರ ರಾಜ್ಯವನ್ನಾಗಿಸಿದೆ. ಇನ್ನಾದರೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳದಿದ್ದರೆ ರಾಜ್ಯ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಲಿದೆ. 4 ಲಕ್ಷ ಕೋಟಿ ರೂ.ನಷ್ಟು ದೊಡ್ಡ ಮಟ್ಟದ ಸಾಲದ ಕಡೆ ಹೋಗುತ್ತಿದ್ದೇವೆ. ರಾಜ್ಯದಲ್ಲಿರುವ ಎಲ್ಲಾ ಅನಗತ್ಯ ಹುದ್ದೆಗಳನ್ನು ತೆಗೆದು ಹಾಕಿ, ಎಲ್ಲಾ ಬಗೆಯ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಿ. ಇಲ್ಲವಾದ್ರೆ ತೊಂದರೆಯಾಗಲಿದೆ. 46 ಸಾವಿರ ಕೋಟಿ ವಿತ್ತೀಯ ಕೊರತೆ ಇದೆ. ಕಾಯ್ದೆ ಅನ್ವಯ ಶೇ.3ರೊಳಗೆ ಇರಬೇಕು ಎಂದರು.
ಕೋವಿಡ್ನಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿರುವುದರಿಂದ ಇದನ್ನು ಶೇ.5ಕ್ಕೆ ಹೆಚ್ಚಳ ಮಾಡಬಹುದು ಎಂದು ಕೇಂದ್ರ ಸರ್ಕಾರ ಸೂಚಿಸಿದೆ. ಅಭಿವೃದ್ಧಿಗೆ ಶೇ.10ಕ್ಕಿಂತ ಕಡಿಮೆ ಹಣ ಲಭ್ಯವಾದ್ರೆ ಅಭಿವೃದ್ಧಿ ಕೆಲಸಗಳನ್ನು ಮಾಡುವುದಾದ್ರೂ ಹೇಗೆ ಎಂದು ಪ್ರಶ್ನಿಸಿದರು.
14ನೇ ಹಣಕಾಸು ಆಯೋಗದಿಂದ 15ನೇ ಹಣಕಾಸು ಆಯೋಗಕ್ಕೆ 4.71 ರಿಂದ 3.64 ರಷ್ಟು ರಾಜ್ಯದ ಪಾಲು ಕಡಿಮೆ ಆಗಿದೆ. 15ನೇ ಹಣಕಾಸು ಆಯೋಗದ ಶಿಫಾರಸ್ಸಿನಂತೆ ರಾಜ್ಯಕ್ಕೆ 5,435 ಕೋಟಿ ರೂ. ವಿಶೇಷ ಅನುದಾನ ಬರಬೇಕಾಗಿದೆ. ಏಕೆ ಕೊಡುವುದಿಲ್ಲವೆಂದು ಕೇಂದ್ರಕ್ಕೆ ಕೇಳಬೇಕು. ಸಂಸದರು ಹಾಗೂ ತಮ್ಮನ್ನು ಕರೆದೊಯ್ಯಿರಿ ಆ ಬಗ್ಗೆ ನಾವೂ ಒತ್ತಾಯ ಮಾಡುತ್ತೇವೆ ಎಂದು ಸಲಹೆ ನೀಡಿದರು.
ರಾಜ್ಯದ ಹಿತಕ್ಕಾಗಿ ಕೇಂದ್ರದಿಂದ ಬರಬೇಕಾಗಿರುವ ಅನುದಾನಕ್ಕೆ ನೀವು ಗುದ್ದಾಡಬೇಕು. ಅಧಿಕಾರದಲ್ಲಿ ಯಾರೇ ಇರಲಿ ರಾಜ್ಯದ ಹಿತ ಕಾಪಾಡಬೇಕು. ನೀವು ಪತ್ರ ಬರೆದಿರಬಹುದು. ರಾಜಕೀಯಕ್ಕಾಗಿ ನಾನು ಈ ವಿಚಾರ ಪ್ರಸ್ತಾಪಿಸುತ್ತಿಲ್ಲ. ಈ ವರ್ಷ 2.30 ಲಕ್ಷ ಕೋಟಿ ರೂ.ಜಿಎಸ್ಟಿ ಸಂಗ್ರಹವಾಗುವುದಿಲ್ಲ. ಆ ಕೊರೆತೆಯ ಹೊರೆಯನ್ನು ಕೇಂದ್ರ ಸರ್ಕಾರ ರಾಜ್ಯಗಳಿಗೆ ವರ್ಗಾವಣೆ ಮಾಡುತ್ತಿದೆ ಎಂದು ದೂರಿದರು.