ಬೆಂಗಳೂರು: ಬಿಜೆಪಿಯವರು ಸಂಕಲ್ಪ ಯಾತ್ರೆ ಮಾಡುವ ಮೊದಲು ರಾಜ್ಯದ ಜನರಿಗೆ ನ್ಯಾಯಯುತವಾಗಿ ನೀಡಬೇಕಾದ್ದನ್ನು ನೀಡಿ, ಜನರ ಬದುಕಿನಲ್ಲಿ ಒಂದಿಷ್ಟು ನೆಮ್ಮದಿ ತರಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಈ ಸಂಬಂಧ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿರುವ ಅವರು, ಬಿಜೆಪಿಯವರು ಯಾವ ಯಾತ್ರೆ ಬೇಕಾದರೂ ಮಾಡಲಿ. ಆದರೆ, ಜನರಿಗೆ ನರಕ ಕಲ್ಪಿಸುವ ಯಾತ್ರೆಯನ್ನು ಮಾತ್ರ ಮಾಡಬಾರದು. ರಾಜ್ಯ ಬಿಜೆಪಿ ಸರ್ಕಾರವು ಜನಸಂಕಲ್ಪ ಯಾತ್ರೆಗಳನ್ನು ಮುಂದುವರೆಸಿದೆ. ಸರ್ಕಾರಕ್ಕೆ ರಾಜ್ಯವನ್ನು ಅಭಿವೃದ್ಧಿಯತ್ತ ಕೊಂಡೊಯ್ಯುವ ವಿಚಾರದಲ್ಲಿ ಯಾವುದೇ ಬದ್ಧತೆ ಸಂಕಲ್ಪಗಳಿಲ್ಲದಿರುವಾಗ ಜನಸಂಕಲ್ಪ ಯಾತ್ರೆಗಳನ್ನು ಮಾಡುವುದು ಹಾಸ್ಯಾಸ್ಪದ ಮತ್ತು ನಾಡಿಗೆ ಮಾಡುವ ದ್ರೋಹ ಎಂದು ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸರ್ಕಾರಕ್ಕೆ ಅನೇಕ ವಿಚಾರಗಳಲ್ಲಿ ಯಾವ ಸಂಕಲ್ಪವೂ ಇಲ್ಲ. ಕೇಂದ್ರವನ್ನು ಒತ್ತಾಯಿಸಿ ಅಗತ್ಯವಿದ್ದರೆ ಪ್ರತಿಭಟಿಸಿ ರಾಜ್ಯಕ್ಕೆ ಬರಬೇಕಾದ ನ್ಯಾಯಯುತವಾದ ಅನುದಾನಗಳನ್ನು ತಂದು ರಾಜ್ಯದ ಅಭಿವೃದ್ಧಿಗೆ ಅದನ್ನು ವಿನಿಯೋಗಿಸಬೇಕು ಎಂದಿದ್ದಾರೆ.
ದೈರ್ಯವಂತ ಸಂಸದರಿಲ್ಲ ದುರಂತವೆಂದರೆ ಡಬ್ಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುವ ಬಿಜೆಪಿಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಎದುರು ನಿಂತು ರಾಜ್ಯದ ಪರವಾಗಿ ಧೈರ್ಯವಾಗಿ ಮಾತನಾಡುವ ಸಂಸದರು ಒಬ್ಬರೂ ಇಲ್ಲ. ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯವನ್ನು ಪ್ರತಿನಿಧಿಸುತ್ತಾರಾದರೂ ಕರ್ನಾಟಕಕ್ಕೆ ಎಲ್ಲೆಲ್ಲಿ ಅನ್ಯಾಯ ಮಾಡಬಹುದು ಎನ್ನುವುದನ್ನು ಯೋಜಿಸುವುದರಲ್ಲಿಯೇ ಅವರ ಸಮಯ ಮುಗಿದು ಹೋಗುತ್ತಿದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ಇನ್ನಾದರೂ ಜೋಶಿ ಧೈರ್ಯವಾಗಿ ವ್ಯವಹರಿಸಲಿ: ಇನ್ನು ರಾಜ್ಯ ಸರ್ಕಾರದ ಮುಖ್ಯಮಂತ್ರಿಯಾಗಲಿ, ಇನ್ಯಾವುದೇ ಸಚಿವರುಗಳಾಗಲೀ ಕೇಂದ್ರ ಸರ್ಕಾರದೊಂದಿಗೆ ಧೈರ್ಯವಾಗಿ ವ್ಯವಹರಿಸುವ ಶಕ್ತಿಯನ್ನು ಹೊಂದಿಲ್ಲ. ಪ್ರಹ್ಲಾದ್ ಜೋಶಿಯವರು ನನ್ನನ್ನು ಹೇಗೆ ಟೀಕಿಸಬಹುದು ಎನ್ನುವುದರಲ್ಲೇ ಸಮಯ ಕಳೆಯುತ್ತಿದ್ದಾರೆ. 2022-23ನೇ ಸಾಲಿನ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಯನ್ನು ನೋಡಿದರೆ ರಾಜ್ಯದ ಸಂಕಲ್ಪ ಯಾವ ಮಟ್ಟಿಗಿದೆ ಎಂದು ಅರ್ಥವಾಗುತ್ತದೆ ಎಂದು ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಈ ವರ್ಷ 20,352 ಕೋಟಿ ರೂಗಳನ್ನು ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೇಂದ್ರ ಪುರಸ್ಕೃತ ಯೋಜನೆಗಳಿಗಾಗಿ ನೀಡಬೇಕಾಗಿತ್ತು. ಆದರೆ, ಸರ್ಕಾರದ ದಾಖಲೆಗಳನ್ನು ಗಮನಿಸಿದರೆ ಅಕ್ಟೋಬರ್ ಅಂತ್ಯದ ವೇಳೆಗೆ ಕೇವಲ 5,083 ಕೋಟಿ ರೂಗಳನ್ನು (ಶೇ25) ಮಾತ್ರ ಬಿಡುಗಡೆಮಾಡಿದೆ.
ಈಗಾಗಲೇ ಹಣಕಾಸು ವರ್ಷದ ಮುಕ್ಕಾಲು ಭಾಗ ಮುಗಿದು ಹೋಗಿದೆ. ಈ ವಿಚಾರದಲ್ಲಿ ರಾಜ್ಯದ ಬಿಜೆಪಿ ಸರ್ಕಾರದ ಮುಖ್ಯಮಂತ್ರಿಗಳಾಗಲಿ, ಸಚಿವರುಗಳಾಗಲಿ ಕೇಂದ್ರದ ಮುಂದೆ ನಿಂತು ರಾಜ್ಯಕ್ಕೆ ಅನುದಾನಗಳನ್ನು ತರಲು ಯಾವುದೇ ಸಂಕಲ್ಪ ಮಾಡಿಲ್ಲ ಎಂದು ಸಿದ್ದರಾಮಯ್ಯ ಟೀಕಿಸಿದರು.
ಅನುದಾನ ಬಿಡುಗಡೆಯಾಗಿಲ್ಲ:ಕೇಂದ್ರ ಸರ್ಕಾರವು ಹಲವಾರು ಕೇಂದ್ರ ಪುರಸ್ಕೃತ ಯೋಜನೆಗಳಡಿ ಇಲಾಖೆಗಳಿಗೆ ಇದುವರೆಗೂ ಒಂದು ರೂಪಾಯಿ ಅನುದಾನವನ್ನು ಬಿಡುಗಡೆ ಮಾಡಿಲ್ಲ. ಉದಾಹರಣೆಗೆ, ವಸತಿ ಇಲಾಖೆಗೆ 473 ಕೋಟಿ ರೂಗಳನ್ನು ಬಿಡುಗಡೆ ಮಾಡುವುದಾಗಿ ಹೇಳಿತ್ತು. ಆದರೆ, ಯಾವುದೆ ಅನುದಾನ ಬಿಡುಗಡೆ ಮಾಡಿಲ್ಲವೆಂಬ ದಾಖಲೆಯನ್ನು ಸರ್ಕಾರ ನೀಡಿದೆ.
ಹಿಂದುಳಿದ ವರ್ಗಗಳ ಇಲಾಖೆಗೆ ಕೇಂದ್ರವು ಒಂದು ರೂ.ವನ್ನೂ ಬಿಡುಗಡೆ ಮಾಡಿಲ್ಲವೆಂದು ಸರ್ಕಾರದ ವೆಬ್ಸೈಟ್ ಹೇಳುತ್ತಿದೆ. ಉನ್ನತ ಶಿಕ್ಷಣ ಇಲಾಖೆಗೆ 59.22 ಕೋಟಿ ರೂ.ಗಳನ್ನು ನೀಡಬೇಕಾಗಿತ್ತು. ಆದರೆ, ಕೊಟ್ಟದ್ದು ಸೊನ್ನೆ ರೂಪಾಯಿ. ಸಮಾಜ ಕಲ್ಯಾಣ ಇಲಾಖೆಗೆ 346 ಕೋಟಿ ರೂಗಳಷ್ಟು ಅನುದಾನ ರಾಜ್ಯಕ್ಕೆ ಬರುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇದುವರೆಗೆ ಬಿಡುಗಡೆಯಾಗಿರುವುದು ಕೇವಲ 7 ಕೋಟಿ ರೂ.ಮಾತ್ರ.
ಕೃಷಿ ಇಲಾಖೆಗೆ 613 ಕೋಟಿ ಬರಬಹುದೆಂದು ನಿರೀಕ್ಷಿಸಲಾಗಿದೆ. ಇದುವರೆಗೆ ಬಿಡುಗಡೆಯಾಗಿರುವುದು ಕೇವಲ 136 ಕೋಟಿ ರೂ ಮಾತ್ರ. ಕೃಷಿ, ಸಮಾಜ ಕಲ್ಯಾಣ ಇಲಾಖೆಗಳನ್ನು ರಾಜ್ಯದಿಂದ ಆಯ್ಕೆಯಾದ ಶೋಭ ಕರಂದ್ಲಾಜೆ ಮತ್ತು ನಾರಾಯಣಸ್ವಾಮಿ ಅವರು ನಿಭಾಯಿಸುತ್ತಿದ್ದಾರೆ. ಅವರುಗಳೇ ರಾಜ್ಯಕ್ಕೆ ಕೊಡಿಸಬೇಕಾದ ಅನುದಾನವನ್ನು ಕೊಡಿಸಬಾರದು ಎಂಬ ಸಂಕಲ್ಪ ಮಾಡಿದಂತೆ ಕಾಣುತ್ತಿದೆ. ಇಲ್ಲದಿದ್ದರೆ ಕೊಡಿಸಬೇಕಾದ ಅನುದಾನಗಳನ್ನು ಕೊಡಿಸುತ್ತಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅನುದಾನ ಕಡಿಮೆ:ಉನ್ನತ ಶಿಕ್ಷಣ ಸಚಿವ ಅಶ್ವತ್ಥ ನಾರಾಯಣ ಅವರು ರಾಜ್ಯದ ಉಪಮುಖ್ಯಮಂತ್ರಿಗಳಾಗಿದ್ದರು. ಅವರ ಉನ್ನತ ಶಿಕ್ಷಣ ಇಲಾಖೆಗೆ ಒಂದು ರೂಪಾಯಿಯನ್ನೂ ಕೊಡದೆ ಮೋದಿ ಸರ್ಕಾರ ಅವಮಾನ ಮಾಡಿದೆ. ಹಾಗೆಯೇ, ಕೌಶಲ್ಯಾಭಿವೃದ್ಧಿ ಇಲಾಖೆಯ ಬಗ್ಗೆ ರಾಜ್ಯ ಬಿಜೆಪಿ ಸರ್ಕಾರವು ಪದೇ ಪದೇ ಕೊಚ್ಚಿಕೊಳ್ಳುತ್ತಿದೆ.