ಬೆಂಗಳೂರು: ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೊಳಿಸಬೇಕೆಂದು ಆಗ್ರಹಿಸಿ ಸರ್ಕಾರಿ ನೌಕರರು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಶನಿವಾರ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಭಾಗವಹಿಸಿದ್ದರು. 'ಪ್ರತಿಯೊಬ್ಬರೂ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆಯಬೇಕು. ಇಂದಿನ ಹೋರಾಟದ ಸಂದರ್ಭದಲ್ಲಿ ಒಪ್ಪಿಕೊಂಡು ಹೋಗಿ ಮುಂದೆ ನಿಮ್ಮ ಬೇಡಿಕೆ ಈಡೇರಿಸಲು ಆಗುವುದಿಲ್ಲ ಎಂದು ಹೇಳಬಾರದು. ಈ ಕಾರಣಕ್ಕಾಗಿ ನಿಮ್ಮ ಬೇಡಿಕೆಗಳನ್ನು ಕಾಂಗ್ರೆಸ್ ಹೈಕಮಾಂಡ್ ಮುಂದಿಟ್ಟು ಅವರ ಸಲಹೆ ಪಡೆಯುತ್ತೇನೆ' ಎಂದು ಈ ಸಂದರ್ಭದಲ್ಲಿ ಅವರು ಹೇಳಿದರು.
ಮುಂದುವರೆದು ಮಾತನಾಡಿ, 'ನಿಮಗೆ ಸುಳ್ಳು ಭರವಸೆಗಳನ್ನು ನೀಡಿ ನಾನು ಹೋಗುವುದಿಲ್ಲ. ನಾನು ಆಡಿದ ಮಾತಿನಂತೆ ನಡೆದುಕೊಳ್ಳಬೇಕಾಗುತ್ತದೆ. ನಿಮ್ಮ ಬೇಡಿಕೆ ಈಡೇರಿಕೆ ಕುರಿತು ರಾಜ್ಯದ ಆರ್ಥಿಕ ಇಲಾಖೆ ಬಳಿ ಮಾತನಾಡಿದ್ದೇನೆ' ಎಂದರು.
2006ರಲ್ಲಿ ಹೊಸ ಪಿಂಚಣಿ ನಿಯಮ ಜಾರಿಗೊಳಿಸಲಾಗಿದೆ. ಆ ನಂತರ ನೇಮಕಾತಿ ಆಗಿರುವ ನೌಕಕರು ನಿವೃತ್ತರಾಗುವುದು 35 ರಿಂದ 40 ವರ್ಷಗಳ ನಂತರ. ಹಾಗಾಗಿ ಅದರ ಕುರಿತಾಗಿ ಈಗಲೇ ಏನೂ ಹೇಳಲಾಗದು ಎಂದು ಅವರು ನನಗೆ ಹೇಳಿದ್ದಾರೆ. ಸರ್ಕಾರಿ ನೌಕಕರ ಹಕ್ಕು ರಕ್ಷಣೆ ಸರ್ಕಾರದ ಜವಾಬ್ದಾರಿ. ಹಾಗಾಗಿ ನಿಮ್ಮ ಹಕ್ಕುಗಳ ರಕ್ಷಣೆ ವಿಚಾರದಲ್ಲಿ ನಾವು ಹಿಂದೇಟು ಹಾಕುವುದಿಲ್ಲ. ನಿಮ್ಮ ಬೇಡಿಕೆಗಳು ನ್ಯಾಯಯುತವಾಗಿದ್ದರೆ ನೂರಕ್ಕೆ ನೂರರಷ್ಟು ಅವುಗಳನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಎಂದು ತಿಳಿಸಿದರು.
ನಾನು ಮುಖ್ಯಮಂತ್ರಿಯಾದ್ದಾಗ ವಿಧಾನಸಭೆಯಲ್ಲಿ ಅನೇಕ ಬಾರಿ ಹಲವರು ಈ ಬಗ್ಗೆ ಪ್ರಶ್ನೆ ಕೇಳಿದ್ದಾರೆ. ಸರ್ಕಾರಿ ನೌಕರರ ಸಂಘದವರು ನನ್ನನ್ನು ಭೇಟಿಯೂ ಮಾಡಿದ್ದಾರೆ. ಆ ಸಂದರ್ಭದಲ್ಲಿ ನಾನು ಹಳೆಯ ವೇತನ ಪದ್ದತಿ ಜಾರಿ ಮಾಡಲು ಆಗಲ್ಲ ಎಂದಿದ್ದೆ. ಈಗ ಕಾಲ ಬದಲಾಗಿದೆ, ನಮ್ಮ ಪಕ್ಷ ಹಿಮಾಚಲ ಪ್ರದೇಶದ ಚುನಾವಣಾ ಸಂದರ್ಭದಲ್ಲಿ ಹಳೆಯ ಪಿಂಚಣಿ ಪದ್ದತಿ ಜಾರಿ ಮಾಡುತ್ತೇವೆ ಎಂದಿದೆ ಎಂದು ಹೇಳಿದರು.