ಬೆಂಗಳೂರು: ಬಿಜೆಪಿಯವರಿಗೆ ಸುಳ್ಳು ಹೇಳಿ ಅದನ್ನು ಕಾಂಗ್ರೆಸ್ ತಲೆಗೆ ಕಟ್ಟುವ ರೋಗ ಹಿಡಿದಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಇಲ್ಲಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಗೆ ಕಾಮಾಲೆ ರೋಗ ಬಂದಿದೆ. ಸುಳ್ಳು ಹೇಳುವುದು, ಸುಳ್ಳು ಹಬ್ಬಿಸುವುದು. ಅವರು ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಪೋಟೋ ಹಾಕಿದ್ದಾರೆ. ಹಾಕಲಿ ಬೇಡ ಅನ್ನಲ್ಲ, ಆದರೆ, ಟಿಪ್ಪು ಫೋಟೋ ತೆಗೀತಾರೆ. ಹೀಗೆ ಮಾಡಿದ್ರೆ ಗಲಭೆ ಆಗಲ್ವಾ..? ಎಂದು ಪ್ರಶ್ನಿಸಿದರು.
ಈಶ್ವರಪ್ಪ ಅವರು ಕಾಂಗ್ರೆಸ್ ಬಗ್ಗೆ ಆರೋಪ ಮಾಡ್ತಾನೆ ಇರ್ತಾರೆ. ತಪ್ಪು ಅವರು ಮಾಡಿ ಕಾಂಗ್ರೆಸ್ ಮೇಲೆ ಹಾಕ್ತಾರೆ. ಮಗುವನ್ನು ಚಿವುಟಿ ತೊಟ್ಟಿಲನ್ನೂ ತೂಗುತ್ತಾರೆ. ಘಟನೆಯಲ್ಲಿ ಎಸ್ಡಿಪಿಐ ಅವರ ಕೈವಾಡ ಇದ್ದರೆ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಹೇಳಿದರು.
ಎಸ್ಡಿಪಿಐ ಸಾಮರಸ್ಯ ಹಾಳು ಮಾಡುತ್ತಿದ್ದಾರೆ ಎನ್ನುತ್ತಾರೆ. ನಿಮ್ಮ ಬಳಿ ದಾಖಲೆ ಇದ್ದರೆ ಕ್ರಮ ಕೈಗೊಳ್ಳಿ. ಇಬ್ಬಂದಿ ರಾಜಕೀಯ ಮಾಡಬೇಡಿ. ಸಿಎಂ ಪ್ರವೀಣ್ ಮನೆಗೆ ಮಾತ್ರ ಹೋಗುತ್ತಾರೆ. ಇನ್ನಿಬ್ಬರ ಮನೆಗೆ ಯಾಕೆ ಹೋಗಲ್ಲ? ಸರ್ಕಾರದ ದುಡ್ಡು ಅಲ್ವ, ತೆರಿಗೆ ಹಣ ಅಲ್ವ. ಅವರಿಬ್ಬರಿಗೂ ಪರಿಹಾರ ಕೊಡಬೇಕಲ್ವಾ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಬಸವರಾಜ್ ಬೊಮ್ಮಾಯಿ ಆರ್ಎಸ್ಎಸ್ ಕೈಗೊಂಬೆ :ಜಾಹೀರಾತಿನಲ್ಲಿ ನೆಹರು ಫೋಟೋ ಬಿಟ್ಟಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಜಾಹೀರಾತಲ್ಲಿ ನೆಹರು ಫೋಟೋನೇ ಹಾಕಿಲ್ಲ. ನರೇಂದ್ರ ಮೋದಿ ನೆಹರು ಸ್ಮರಣೆ ಮಾಡ್ತಾರೆ. ಇವರಿಗೆ ಇತಿಹಾಸವೇ ಗೊತ್ತಿಲ್ಲ. ಸಾವರ್ಕರ್ ಮುಚ್ಚಳಿಕೆ ಬರೆದು ಕೊಟ್ಟು ಬಂದ ಮೇಲೆ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ರು? ಬಿಜೆಪಿ ಅವರದ್ದು ನಕಲಿ ದೇಶಭಕ್ತಿ. ಇವರು ಆರ್.ಎಸ್.ಎಸ್ ಕೈಗೊಂಬೆ ಆಗಿರೋರು ಮತ್ತೇನು ಹೇಳ್ತಾರೆ. ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರ್.ಎಸ್ ಎಸ್ ಕೈಗೊಂಬೆಯಾಗಿದ್ದಾರೆ (He was puppet in the RSS hand) ಎಂದರು.