ಬೆಂಗಳೂರು: ನಿನ್ನೆ ತಮಿಳುನಾಡಿನ ವಿಧಾನಸಭೆಯಲ್ಲಿ ಅಲ್ಲಿನ ಸರ್ಕಾರ ಮತ್ತು ಇತರೆ ರಾಜಕೀಯ ಪಕ್ಷಗಳು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಒಂದು ಕಾನೂನು ಬಾಹಿರವಾದ ನಿರ್ಣಯವನ್ನು ಮಾಡಿವೆ. ಇಂಥಾ ನಿರ್ಣಯವನ್ನು ಮಾಡಲು ತಮಿಳುನಾಡು ವಿಧಾನಸಭೆಗೆ ಯಾವುದೇ ಕಾನೂನಾತ್ಮಕ ಹಕ್ಕಿಲ್ಲ. ರಾಜಕೀಯವಾಗಿ ಕ್ಯಾತೆ ತೆಗೆಯಲು ಈ ನಿರ್ಣಯ ಮಾಡಿದ್ದಾರೆ. ಇದನ್ನು ನಾನು ತೀವ್ರವಾಗಿ ಖಂಡಿಸುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ವಿಧಾನಸಭೆಯಲ್ಲಿ ಇಂದು ಶೂನ್ಯ ವೇಳೆಯಲ್ಲಿ ಕಾಂಗ್ರೆಸ್ ಸದಸ್ಯ ಹೆಚ್.ಕೆ.ಪಾಟೀಲ್ ಪ್ರಸ್ತಾಪಿಸಿದ ವಿಷಯದ ಮೇಲೆ ಮಾತನಾಡಿದ ಅವರು, ಸಂವಿಧಾನಬದ್ಧವಾಗಿ ನಮ್ಮ ಪಾಲಿನ ಹೆಚ್ಚುವರಿ ನೀರನ್ನು ಬಳಕೆ ಮಾಡಿಕೊಳ್ಳಲು ನಾವು ಮೇಕೆದಾಟು ಯೋಜನೆ ಮಾಡುತ್ತಿದ್ದೇವೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ನಗರಗಳಿಗೆ ಕುಡಿಯುವ ನೀರು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಯೋಜನೆ ಇದಾಗಿದೆ.
ಈ ಯೋಜನೆ ನಮ್ಮ ರಾಜ್ಯದ ಗಡಿಯೊಳಗೆ ಬರುತ್ತದೆ. ಕನಕಪುರ ತಾಲೂಕಿನ ಕಾವೇರಿ ಸಂಗಮದ ಬಳಿ ಅಣೆಕಟ್ಟು ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. 16/02/2018 ರಲ್ಲಿ ಸುಪ್ರೀಂಕೋರ್ಟ್ನ ಅಂತಿಮ ಆದೇಶ ಬಂದಿದೆ. ಈ ಆದೇಶವನ್ನು ಎರಡೂ ರಾಜ್ಯಗಳು ಒಪ್ಪಿಕೊಂಡಿವೆ. ಒಂದು ಸಹಜ ವರ್ಷದಲ್ಲಿ 177.25 ಟಿಎಂಸಿ ನೀರನ್ನು ಬಿಳಿಗೊಂಡ್ಲುವಿನಿಂದ ತಮಿಳುನಾಡಿಗೆ ಬಿಡಬೇಕು ಎಂದು ತೀರ್ಪು ಹೇಳಿದೆ. ಇದರ ಅನುಷ್ಠಾನಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ರಚನೆಯಾಗಿದೆ.
'ತಮಗೆ ಬೇಕಾದ ಯೋಜನೆ ಮಾಡಿಕೊಂಡಿದ್ದಾರೆ':ಈ ನೀರನ್ನು ಪಡೆದುಕೊಳ್ಳುವುದು ಮಾತ್ರ ತಮಿಳುನಾಡಿಗಿರುವ ಹಕ್ಕು. ಸುಪ್ರೀಂಕೋರ್ಟ್ ತೀರ್ಪಿನ ನಂತರ ಈವರೆಗೆ ತಮಿಳುನಾಡಿಗೆ ಸುಮಾರು 582 ಟಿಎಂಸಿ ನೀರು ಹೆಚ್ಚುವರಿಯಾಗಿ ಹರಿದು ಹೋಗಿದೆ. ತಮಿಳುನಾಡು ಕುಡಿಯುವ ನೀರಿನ ಉದ್ದೇಶಕ್ಕಾಗಿ ನಮ್ಮನ್ನು ಅಥವಾ ಕೇಂದ್ರ ಸರ್ಕಾರವನ್ನು ಕೇಳದೆ ತಮಗೆ ಬೇಕಾದ ಯೋಜನೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.
ನಾವು ಬೆಂಗಳೂರು ನಗರಕ್ಕೆ ಕುಡಿಯುವ ನೀರು ಕೊಡಬೇಕು ಎಂದು ವಿಸ್ತೃತ ಯೋಜನಾ ವರದಿ ಸಿದ್ಧಪಡಿಸಿಕೊಟ್ಟಿದ್ದೇವೆ. ಇದು ಕೇಂದ್ರ ಜಲ ಆಯೋಗದ ಮುಂದಿದೆ. ಅವರು ಕೇಳಿದ ಹೆಚ್ಚುವರಿ ಮಾಹಿತಿಯನ್ನು ನೀಡಿದ್ದೇವೆ. 9,000 ಕೋಟಿ ರೂ. ವಿಸ್ತೃತ ಯೋಜನಾ ವರದಿ ನೀಡಿದ್ದೇವೆ. 67.14 ಟಿಎಂಸಿ ನೀರನ್ನು ಶೇಖರಿಸಿಟ್ಟು ಅದನ್ನು ಕುಡಿಯುವ ನೀರಿನ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳೋದು ಮೇಕೆದಾಟು ಯೋಜನೆ ಉದ್ದೇಶ.
ಬೆಂಗಳೂರು ನಗರದ ಸುಮಾರು ಶೇ 30ರಷ್ಟು ಜನರಿಗೆ ಇನ್ನೂ ಕೂಡ ಕಾವೇರಿ ನೀರು ಸಿಗುತ್ತಿಲ್ಲ. ಸುಮಾರು ಒಂದೂವರೆ ಕೋಟಿ ಜನ ಇಲ್ಲಿ ವಾಸವಿದ್ದಾರೆ. ಈ ಜನ ಬೋರ್ವೆಲ್, ಟ್ಯಾಂಕರ್ ನೀರಿನ ಮೇಲೆ ಅವಲಂಬಿತರಾಗಿದ್ದಾರೆ. ಇಂಥ ಅಂತರರಾಷ್ಟ್ರೀಯ ಖ್ಯಾತಿಯ ನಗರಕ್ಕೆ ಕುಡಿಯುವ ನೀರು ಕೊಡಲು ಆಗ್ತಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.