ಕರ್ನಾಟಕ

karnataka

ETV Bharat / state

ಬಿಟ್​ಕಾಯಿನ್​ ಪ್ರಕರಣದಲ್ಲಿ ಇರುವವರ ಹೆಸರು ಸರ್ಕಾರಕ್ಕೆ ಗೊತ್ತಾಗಬೇಕು, ಆಗಲ್ಲ ಅಂದ್ರೆ ಅಧಿಕಾರ ಬಿಡಲಿ: ಸಿದ್ದರಾಮಯ್ಯ

2018ರಲ್ಲಿ ನಾನು ಸಿಎಂ ಸ್ಥಾನದಲ್ಲಿ ಇದ್ದಿದ್ದು ನಿಜ, ಇಲ್ಲ ಅಂತ ಹೇಳಿಲ್ಲ. ಆಗ ಯಾರೂ ದೂರು ಕೊಟ್ಟಿಲ್ಲ. ಕೇಸ್ ಸಹ ಇಲ್ಲ. ಅದು ಹೇಗೆ ನಮಗೆ ಗೊತ್ತಾಗುತ್ತದೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

siddaramaiah
ಸಿದ್ದರಾಮಯ್ಯ

By

Published : Nov 15, 2021, 6:13 PM IST

Updated : Nov 15, 2021, 7:31 PM IST

ಬೆಂಗಳೂರು:ಬಿಟ್​ಕಾಯಿನ್​ಪ್ರಕರಣದಲ್ಲಿ (Bitcoin scam) ಭಾಗಿಯಾದವರ ಹೆಸರು ಅವರಿಗೆ ಗೊತ್ತಾಗಬೇಕು. ಸರ್ಕಾರ ಅವರದ್ದೇ ಇರೋದು, ಆಗಲ್ಲ ಅಂದ್ರೆ ಅಧಿಕಾರ ಬಿಟ್ಟು ಹೋಗಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Opposition leader Siddaramaiah) ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ನಗರದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, 2018ರಲ್ಲಿ ವಿದ್ವತ್ ಮೇಲೆ ಹಲ್ಲೆ ಪ್ರಕರಣವಾದಾಗ ಆರೋಪಿ ಶ್ರೀಕಿಯನ್ನು ಏಕೆ ಸಿದ್ದರಾಮಯ್ಯ ಸರ್ಕಾರ ಬಂಧಿಸಿಲ್ಲ ಎಂಬ ಸಿಎಂ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ, 2018ರಲ್ಲಿ ನಾನು ಸಿಎಂ ಸ್ಥಾನದಲ್ಲಿದ್ದಿದ್ದು ನಿಜ, ನಾನು ಇಲ್ಲ ಅಂತ ಹೇಳಿಲ್ಲ. ಆಗ ಯಾರು ದೂರು ಕೊಟ್ಟಿಲ್ಲ. ಕೇಸ್ ಸಹ ಇಲ್ಲ. ಅದು ಹೇಗೆ ನಮಗೆ ಗೊತ್ತಾಗುತ್ತದೆ. ಒಂದು ವೇಳೆ ಇವರಿಗೆ ಗೊತ್ತಿದ್ರೆ ಯಾಕೆ ಸುಮ್ಮನಿದ್ರು ಎಂದು ಪ್ರಶ್ನಿಸಿದರು.

ವಿರೋಧ ಪಕ್ಷದಲ್ಲಿದ್ದವರು ಅದನ್ನು ಹೊರತರಬೇಕಿತ್ತು. ಅಂದು ಸುಮ್ಮನೆ ಇದ್ದಿದ್ದೇಕೆ?. ಇದೆಲ್ಲ ಬಿಜೆಪಿ ಅವರಿಗೆ ಕೇಳಿ. ನಾವು ಇವರ ಪ್ರಶ್ನೆಗೆ ಉತ್ತರ ನೀಡುವ ಮೊದಲು ಸುರ್ಜೇವಾಲಾ ಕೇಳಿರುವ ಪ್ರಶ್ನೆಗಳಿಗೆ ಉತ್ತರ ಕೊಡಿ. ನಲಪಾಡ್ ಪ್ರಕರಣ ಅದು ಕ್ರಿಮಿನಲ್ ಕೇಸ್ ದಾಖಲಾಗಿತ್ತು. ಆಗ ಯಾವುದೇ ಬಿಟ್​ ಕಾಯಿನ್ ಕೇಸ್​ ಬಗ್ಗೆ ಕೇಳಿ ಬಂದಿರಲಿಲ್ಲ ಎಂದು ಸ್ಪಷ್ಟಪಡಿಸಿದರು.

ಇದು ಬೊಮ್ಮಾಯಿ ಗೃಹ ಸಚಿವರಾಗಿದ್ದಾಗ ನಡೆದಿರುವ ಘಟನೆ. ಅಶೋಕ್ ಹೋಂ ಮಿನಿಸ್ಟರ್ ಆಗಿರಲಿಲ್ಲ. ಆ ಕೇಸ್​ನಲ್ಲಿ ಯಾರಿದ್ದಾರೆ ಅನ್ನೋದನ್ನು ಸಿಎಂ ಬೊಮ್ಮಾಯಿ ಹೇಳಲಿ ಎಂದು ಸವಾಲು ಹಾಕಿದ್ದಾರೆ.

ಬಿಟ್ ಕಾಯಿನ್ ಪ್ರಕರಣದ ಆರೋಪಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಿ: ಸಿದ್ದರಾಮಯ್ಯ

ಬಿಟ್ ಕಾಯಿನ್ ಹಗರಣದ ಸೂತ್ರಧಾರನೆನ್ನಲಾದ ಶ್ರೀಕಿಗೆ ಸೂಕ್ತ ಪೊಲೀಸ್ ಭದ್ರತೆ ನೀಡಬೇಕೆಂದು‌ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸಿಎಂರನ್ನು ಒತ್ತಾಯಿಸಿದ್ದಾರೆ.

ವಿಶ್ವದಾದ್ಯಂತ ಗಮನ ಸೆಳೆದಿರುವ ಈ ಹಗರಣದಲ್ಲಿ ಬಹಳಷ್ಟು ಪ್ರಭಾವಶಾಲಿಗಳು ಶಾಮೀಲಾಗಿರುವ ಅನುಮಾನದ ಹಿನ್ನೆಲೆಯಲ್ಲಿ ಈ ಭದ್ರತೆ ಅಗತ್ಯವಾಗಿದೆ. ಬಿಟ್ ಕಾಯಿನ್ ಹಗರಣ ಸ್ಫೋಟಗೊಂಡ ನಂತರ ಸಣ್ಣ ಮಟ್ಟದ ಆರೋಪದ ಮೇಲೆ ನಾಟಕೀಯ ರೀತಿಯಲ್ಲಿ ನಡೆದಿರುವ ಶ್ರೀಕೃಷ್ಣನ ಬಂಧನ, ಅಷ್ಟೇ ನಾಟಕೀಯವಾಗಿ ಜಾಮೀನು ಮೇಲೆ ಬಿಡುಗಡೆಯಾಗಿರುವುದು ಪೊಲೀಸರ ನಡವಳಿಕೆಗಳ ಬಗ್ಗೆ ಸಂಶಯಗಳಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ವರ್ಷ ರಾಜ್ಯ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಶ್ರೀಕಿಗೆ ಮಾದಕ ವಸ್ತು ಚಟ ಇದ್ದುದನ್ನು ಹೇಳಲಾಗಿದೆ. ಆ ಸಮಯದಲ್ಲಿ ಶ್ರೀಕಿ ತಂದೆಯೇ ಪತ್ರ ಬರೆದು ತಮ್ಮ ಮಗನಿಗೆ ಪೊಲೀಸರು ಡ್ರಗ್ಸ್ ನೀಡಿದ್ದರು ಎಂದು ಆರೋಪಿಸಿದ್ದರು ಎನ್ನುವುದು ಗಮನಾರ್ಹ. ಶ್ರೀಕಿ ಈಗಲೂ ಡ್ರಗ್ ವ್ಯಸನಿಯೇ? ವ್ಯಸನಿಯಾಗಿದ್ದರೆ ಪೊಲೀಸರು ಈ ಬಾರಿ ಬಂಧಿಸಿದಾಗ ವೈದ್ಯಕೀಯ ಪರೀಕ್ಷೆ ನಡೆಸಿದ್ದಾರೆಯೇ? ಡ್ರಗ್ಸ್ ವ್ಯಸನಿ ಎನ್ನುವುದು ಪರೀಕ್ಷೆಯಿಂದ ದೃಢಪಟ್ಟಿದ್ದರೆ ಸೂಕ್ತ ಚಿಕಿತ್ಸೆ ನೀಡಲಾಗಿದೆಯೇ? ಈ ಬಗ್ಗೆ ಸಿಎಂ ಮತ್ತು ರಾಜ್ಯ ಗೃಹ ಸಚಿವರು ಮಾಹಿತಿ‌ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಬಿಟ್ ಕಾಯಿನ್ ಹಗರಣ ತಂತ್ರಜ್ಞಾನ ಅವಲಂಬಿಸಿರುವ 'ಬಿಳಿಕಾಲರ್ ಅಪರಾಧ'. ಇದಕ್ಕೆ ಸಂಬಂಧಿಸಿದ ಖಾತೆಗಳ ಪಾಸ್ ವರ್ಡ್ ಸೇರಿದಂತೆ ಬಹಳಷ್ಟು ಮಾಹಿತಿಗಳು ಶ್ರೀಕಿಯ ನೆನಪಲ್ಲಿ ಮಾತ್ರ ಇದೆ. ಲಿಖಿತ ದಾಖಲೆಗಳಿಲ್ಲ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ಶ್ರೀಕಿಯ ಪ್ರಾಣಕ್ಕೆ ಅಪಾಯದ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಮೈಸೂರಿನಲ್ಲಿ ಲಸಿಕೆ ಪಡೆದ ನಂತರ ವ್ಯಕ್ತಿ ಸಾವು ಆರೋಪ.. ಘಟನೆಯ ಬಗ್ಗೆ ಜಿಲ್ಲಾಧಿಕಾರಿ ಹೀಗಂತಾರೆ..

Last Updated : Nov 15, 2021, 7:31 PM IST

ABOUT THE AUTHOR

...view details