ಬೆಂಗಳೂರು :2021-22ನೇ ಸಾಲಿನ ಬಜೆಟ್ ಅಭಿವೃದ್ಧಿ ವಿರೋಧಿ, ಸಾಲದ ಶೂಲಕ್ಕೆ ದೂಡುವ, ದಲಿತ, ಬಡವರ ವಿರೋಧಿ ಬಜೆಟ್ ಆಗಿದೆ. ಈ ಬಜೆಟ್‌ನ ತೀವ್ರವಾಗಿ ವಿರೋಧ ಮಾಡುತ್ತೇವೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಅವರು, ಈ ಸರ್ಕಾರ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಪರವಾಗಿಲ್ಲ. ಇದು ಅನಿವಾರ್ಯವಾಗಿ ವಿರೋಧ ಮಾಡುವ ಬಜೆಟ್ ಆಗಿದೆ. ಈ ಬಜೆಟ್ ಪಾರದರ್ಶಕವಾಗಿಲ್ಲ. ಹಿಂದಿನ ಪದ್ಧತಿ ಬದಲಾವಣೆ ಮಾಡಲಾಗಿದೆ.
ಕಳೆದ ವರ್ಷದಿಂದ 6 ವಲಯಗಳನ್ನಾಗಿ ಬಜೆಟ್ ಮಂಡನೆ ಮಾಡಲಾಗುತ್ತಿದೆ. ಯಾವ ಇಲಾಖೆಗೆ ಎಷ್ಟು ಹಣ ಇಟ್ಟಿದ್ದಾರೆ. ಎಷ್ಟು ಹಣ ಖರ್ಚಾಗಿದೆ. ಎಷ್ಟು ಹಣ ಖರ್ಚು ಮಾಡಲಾಗುವುದು. ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಬಜೆಟ್‌ನ ಪಾವಿತ್ರ್ಯತೆನೇ ಹೋಗಿಬಿಟ್ಟಿದೆ. ಕಳೆದ ಬಾರಿಗಿಂತ 16,000 ಕೋಟಿ ರೂ. ಬಜೆಟ್ ಜಾಸ್ತಿಯಾಗಿದೆ. ಆದರೆ, ಕಳೆದ ಬಾರಿಗಿಂತ ಕ್ಷೇತ್ರವಾರು ಅನುದಾನ ಕಡಿಮೆಯಾಗಿದೆ ಎಂದು ವಾಗ್ದಾಳಿ ನಡೆಸಿದರು.
ವಲಯ ಎರಡರಲ್ಲಿ ಪ್ರಾಥಮಿಕ ಶಿಕ್ಷಣ, ಉನ್ನತ ಶಿಕ್ಷಣ, ಆರೋಗ್ಯ, ಸಮಾಜಕಲ್ಯಾಣ, ವಸತಿ, ಕಾರ್ಮಿಕ ಇಲಾಖೆ ಬರುತ್ತವೆ. ಈ ಸರ್ವೋದಯ ವಲಯಕ್ಕೆ ಕಳೆದ ಬಾರಿ 72,093 ಕೋಟಿ ಮೀಸಲಿಡಲಾಗಿತ್ತು. ಈ ಬಾರಿ 62,150 ಕೋಟಿ ಅನುದಾನ ನೀಡಲಾಗಿತ್ತು. ಆ ಮೂಲಕ 9,943 ಕೋಟಿ ರೂ. ಕಡಿಮೆಯಾಗಿದೆ.
ಮೂರನೇ ವಲಯದಲ್ಲಿ ಮೂಲಸೌಕರ್ಯ, ಕೈಗಾರಿಕೆ, ಬಂದರು, ಗಣಿ, ಕುಡಿಯುವ ನೀರು ಪೂರೈಕೆ ಇಲಾಖೆ ಬರುತ್ತದೆ. ಇದಕ್ಕೆ ಕಳೆದ ಬಾರಿ 55,732 ಕೋಟಿ ಇಟ್ಟಿದ್ದರು. ಈ ಬಾರಿ 52,529 ಕೋಟಿ ರೂ. ನೀಡಿದ್ದಾರೆ. ಆ ಮೂಲಕ 3,203 ಕೋಟಿ ಕಡಿಮೆಯಾಗಿದೆ.
ವಲಯ ನಾಲ್ಕು ಬೆಂಗಳೂರು ಅಭಿವೃದ್ಧಿಗೆ ಕಳೆದ ಬಾರಿ 8,772 ಕೋಟಿ ರೂ. ಇಡಲಾಗಿದೆ. ಆದರೆ, ಈ ಬಾರಿ 7,795 ಕೋಟಿ ರೂ. ಇಟ್ಟಿದ್ದಾರೆ. ಆ ಮೂಲಕ 977 ಕೋಟಿ ರೂ. ಕಡಿಮೆಯಾಗಿದೆ. ವಲಯ 5ರಲ್ಲಿ ಸಂಸ್ಕೃತಿ ಪರಂಪರೆ, ನೈಸರ್ಗಿಕ ಸಂಪನ್ಮೂಲ ವಲಯಗಳು ಬರುತ್ತವೆ. ಇದಕ್ಕೆ ಕಳೆದ ಬಾರಿ 4,552 ಕೋಟಿ ರೂ. ಅನುದಾನ ನೀಡಿದ್ದರು. ಈ ಬಾರಿ 2,645 ಕೋಟಿ ರೂ. ನೀಡಿದ್ದಾರೆ. 1,907 ಕೋಟಿ ರೂ. ಕಡಿತ ಆಗಿದೆ ಎಂದರು.
33 ಇಲಾಖೆಗಳನ್ನು ವಲಯವಾರು ಮಾಡಿರುವುದು ತಪ್ಪು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡುತ್ತೀರಿ ಎಂಬ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆ ಮೂಲಕ ಆಪರೇಷನ್ ಕಮಲ ಮಾಡಿ ಆಡಳಿತಕ್ಕೆ ಬಂದು ಆಪರೇಷನ್ ಬರ್ಬಾದ್ ಮಾಡ್ತಾ ಇದ್ದಾರೆ ಎಂದು ಕಿಡಿ ಕಾರಿದರು.