ಬೆಂಗಳೂರು: ಸಿದ್ದರಾಮೋತ್ಸವ ರಾಜಕೀಯ ಕಾರ್ಯಕ್ರಮವೇ. ರಾಜಕೀಯವಿಲ್ಲದೇ ಏನೂ ಇಲ್ಲ. ಅಲ್ಲಿ ಎಲ್ಲರೂ ರಾಜಕೀಯ ನಾಯಕರೇ ಇರುತ್ತಾರೆಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಬೆಂಗಳೂರಿನ ತಮ್ಮ ನಿವಾಸದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಜೊತೆ ಉಪಹಾರ ಸೇವಿಸಿ, ರಾಜಕೀಯ ಸಮಾಲೋಚನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸಿದ್ದರಾಮಯ್ಯ ಹುಟ್ಟುಹಬ್ಬದ ಕಾರ್ಯಕ್ರಮ ಪಕ್ಷದ ಕಡೆಯಿಂದ ನಡೆಯೋದು. ಸಮಿತಿಯಲ್ಲಿ ಇರುವವರು ಕಾಂಗ್ರೆಸ್ ನಾಯಕರು. ಕಾರ್ಯಕ್ರಮಕ್ಕೆ ಬರಲು ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್, ಡಿಕೆಶಿ, ಮುನಿಯಪ್ಪ, ಎಂ.ಬಿ.ಪಾಟೀಲ್, ಖರ್ಗೆ ಅವರಿಗೆ ನಾನೇ ಆಹ್ವಾನ ನೀಡಿದ್ದೇನೆ. ನನ್ನ ಹುಟ್ಟುಹಬ್ಬವನ್ನು ಪಕ್ಷದವರೇ ಮಾಡುತ್ತಾರೆ. ಪಕ್ಷದ ವೇದಿಕೆ ಅಲ್ಲದೇ ಇದ್ದರೂ ಪಕ್ಷದವರೇ ಮಾಡುತ್ತಿದ್ದಾರೆಂದು ತಿಳಿಸಿದರು.
ನಾವೇನು ಸನ್ಯಾಸಿಗಳಾ?: ಹುಟ್ಟುಹಬ್ಬದ ಕಾರ್ಯಕ್ರಮಕ್ಕೆ ಯಾರೂ ವಿರೋಧ ಮಾಡಿಲ್ಲ. ನೀವೇ ಕೆಲವೊಂದನ್ನು ಮಾಡಿರೋದು ಎಂದು ಮಾಧ್ಯಮದವರ ಮೇಲೆ ಕೊಂಚ ಗರಂ ಆದರು. ನಾನು ಇದನ್ನು ಸಿದ್ದರಾಮೋತ್ಸವ ಎಂದಿಲ್ಲ. ನನ್ನ 75ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಇದು ಅಮೃತ ಮಹೋತ್ಸವ ಕಾರ್ಯಕ್ರಮ. ಇದು ನನ್ನ ಜೀವನದ ಮೈಲ್ ಸ್ಟೋನ್. ಅದಕ್ಕೆ ಅಮೃತ ಮಹೋತ್ಸವ ಅಂದಿದ್ದಾರೆ. ಸಿದ್ದರಾಮೋತ್ಸವ ಅಂತ ನಾನು ಹೇಳಿದ್ದೇನಾ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ:ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ನೇಮಕ ಅನರ್ಹ: ಸೂಕ್ತ ಕ್ರಮಕ್ಕೆ ಕೆಎಟಿ ಆದೇಶ
ನನ್ನ ರಾಜಕೀಯ ಜೀವನದ ಕೆಲವು ಪ್ರಮುಖ ಘಟನೆಗಳ ಬಗ್ಗೆ ನೆನಪು ಮಾಡಿಕೊಂಡರೆ ತಪ್ಪಾ? ಸಮಾವೇಶದಲ್ಲಿ ರಾಜಕೀಯ ಸಂದೇಶ ಇರಲಿದೆ. ನಾವೇನು ಸನ್ಯಾಸಿಗಳಾ? ರಾಹುಲ್ ಗಾಂಧಿ, ಡಿಕೆಶಿ ಸನ್ಯಾಸಿನಾ? ಏನು ಸಂದೇಶ ಇರಬೇಕೋ ಇರಲಿದೆ. ನಮ್ಮ ಕಾಲದ ಸಾಧನೆ ತೋರಿಸ್ತೀವಿ ಅಂದರೆ ಅದರಲ್ಲಿ ರಾಜಕೀಯ ಇದ್ದೇ ಇದೆ. ನನ್ನ ಜೀವನ ಸಾಧನೆ ಅಂದರೆ ಅದು ರಾಜಕೀಯ. ನಾನು ಬೇರೆ ಪಕ್ಷದ ಯಾರನ್ನೂ ಕರೆಯುತ್ತಿಲ್ಲ ಎಂದು ತಿಳಿಸಿದರು.