ಬೆಂಗಳೂರು :ಬಿಜೆಪಿಯವರು ಎರಡೂವರೆ ವರ್ಷದಿಂದ ಏನ್ ಕಡಿದು ಕಟ್ಟೆ ಹಾಕಿದ್ದಾರೆಂದು ಲೆಕ್ಕ ಕೊಡಲಿ. ನಾವು ಕೊರೊನಾ ನಿಯಮ ಪಾಲಿಸಿಯೇ ಪಾದಯಾತ್ರೆ ಮಾಡುತ್ತೇವೆ. ಮಾಸ್ಕ್, ಗ್ಲೌಸ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳುತ್ತೇವೆ. ಇಷ್ಟಾಗಿಯೂ ಸರ್ಕಾರದವರು ಏನ್ ಕ್ರಮ ತೆಗೆದುಕೊಳ್ತಾರೆಯೋ ತೆಗೆದುಕೊಳ್ಳಲಿ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಪಾದಯಾತ್ರೆ ಮಾಡುವ ನಮ್ಮನ್ನು ಬಂಧನ ಮಾಡ್ತಾರಾ ಮಾಡಲಿ. ಮೇಕೆದಾಟುವಿನಲ್ಲಿ 144 ಸೆಕ್ಷನ್ ಹಾಕಿದರೆ, ಐದಾರು ಜನ ಹೋಗುತ್ತೇವೆ. ನಾವು ಪಾದಯಾತ್ರೆ ಘೋಷಣೆ ಮಾಡಿದ ಮೇಲೆ ಸರ್ಕಾರ ನಿಯಮ ಮಾಡಿದ್ದು.
ಇವರು ಉದ್ದೇಶಪೂರ್ವಕವಾಗಿ ರಾಮನಗರಕ್ಕೆ ಮಾತ್ರ 144 ಜಾರಿ ಮಾಡಿದ್ದಾರೆ. ರಾಮನಗರದಲ್ಲಿ ಎಲ್ಲಾ ಬಂದ್ ಯಾಕೆ ಮಾಡಿಸಿದ್ದೀರಾ? ಎಲ್ಲಾ ಕಡೆ ಕೊರೊನಾ ಜಾಸ್ತಿ ಆಗುತ್ತಿದೆ. ಆದರೆ, ಅವರು ಹೇಳಿದಂಗೆ ಇಲ್ಲ. ಎರಡೂವರೆ ವರ್ಷದಿಂದ ಯಾಕೆ ಏನ್ ಮಾಡಲಿಲ್ಲ? ಕಾರಜೋಳ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.
2018ರಲ್ಲಿ ಮೇಕೆದಾಟು ವಿವಾದ ಇತ್ಯರ್ಥ ಆಗಿದೆ. ತಮಿಳುನಾಡಿಗೆ ನೀರು ಕೊಡಬೇಕೆಂದು ನ್ಯಾಯಾಲಯ ಹೇಳಿತ್ತು. ಮಳೆ ಬಾರದೆ ಇದ್ದಾಗ ನೀರು ಕೊಡಬೇಕು ಅಂತಾ ಹೇಳಿದೆ. ಈಗ ಹೆಚ್ಚು ನೀರು ಸಮುದ್ರಕ್ಕೆ ಹೋಗುತ್ತಿದೆ. ಆ ನೀರನ್ನು ಏನ್ ಮಾಡಬೇಕು. ಜಲಾಶಯ ನಿರ್ಮಿಸಿ ಕುಡಿಯಲು ಬಳಸಲಾಗುವುದು.
ಆದರೆ, ಯಡಿಯೂರಪ್ಪ ಸಿಎಂ ಆಗಿದ್ದಾಗ ಯಾಕೆ ಯೋಜನೆ ಜಾರಿ ಮಾಡಲಿಲ್ಲ. ಬೊಮ್ಮಾಯಿ ಅಂದು ಜಲಸಂಪನ್ಮೂಲ ಸಚಿವರಾಗಿದ್ದರು. ಯಾಕೆ ಡಿಪಿಆರ್ ಮಾಡಿಸಿಲ್ಲ. ವಿಳಂಬ ದ್ರೋಹ ಆಗಿರುವುದು ಬಿಜೆಪಿಯಲ್ಲಿ, ಸದ್ಯಕ್ಕೆ ಎಲ್ಲೂ ಸ್ಟೇ ಇಲ್ಲ. ಪರಿಸರ ಇಲಾಖೆಯಲ್ಲಿ ಪರವಾನಿಗೆ ಪಡೆಯಬೇಕು. ಆದರೆ, ಎರಡೂವರೆ ವರ್ಷದಿಂದ ಪರಿಸರ ಇಲಾಖೆ ಪರವಾನಿಗೆ ತೆಗೆದುಕೊಂಡಿಲ್ಲ.
ನಾವೇ ಡಿಪಿಆರ್ ಮಾಡಿಸಿದ್ದು, ಈ ಯೋಜನೆಯಲ್ಲಿ ಬಿಜೆಪಿ ಸುಳ್ಳು ಹೇಳುತ್ತಿದೆ ಎಂದು ಸಿದ್ದರಾಮಯ್ಯ ದೂರಿದರು. ಇದೇ ವೇಳೆ ನಾನು ಮಾಜಿ ಸಿಎಂ ಕುಮಾರಸ್ವಾಮಿ ಬಗ್ಗೆ ಮಾತನಾಡಲ್ಲ. ಅವರು ಉದ್ವೇಗಕ್ಕೆ ಒಳಗಾಗಿ ಮಾತನಾಡ್ತಾರೆ ಎಂದರು.
ಇದನ್ನೂ ಓದಿ:ಬೆಂಗಳೂರಿನ ನಿರ್ಮಾಣ ಹಂತದ ಅಪಾರ್ಟ್ಮೆಂಟ್ನಲ್ಲಿ ಭಾರಿ ಅಗ್ನಿ ಅವಘಡ