ಬೆಂಗಳೂರು: ಭಾರತೀಯ ಜನತಾ ಪಕ್ಷದ ಆಡಳಿತಾವಧಿಯಲ್ಲಿ ರಾಜ್ಯದಲ್ಲಿ ಮಹಿಳೆಯರ ಮೇಲೆ ಸಾಲುಸಾಲು ದೌರ್ಜನ್ಯ ಪ್ರಕರಣಗಳು ನಡೆಯುತ್ತಿದ್ದಾಗ ಕಣ್ಣುಮುಚ್ಚಿ ಕೂತಿದ್ದ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿದ್ದೆಗಣ್ಣಿಗೆ, ಇದೀಗ ಬೆಳಗಾವಿಯಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಮೇಲೆ ನಡೆದಿರುವ ದೌರ್ಜನ್ಯ ಮಾತ್ರ ಕಾಣಿಸಿಕೊಂಡಿದೆ. ಅದರಲ್ಲಿ ರಾಜಕೀಯ ಬೇಳೆ ಬೇಯಿಸಲು ಮುಂದಾಗಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಬೆಳಗಾವಿಯಲ್ಲಿ ಮಹಿಳೆ ಮತ್ತು ಅವರ ಕುಟುಂಬದ ಸದಸ್ಯರ ಮೇಲೆ ನಡೆದಿರುವ ದೌರ್ಜನ್ಯ ಅತ್ಯಂತ ಖಂಡನೀಯ. ಮನುಷ್ಯರೆಲ್ಲರೂ ತಲೆತಗ್ಗಿಸುವಂತಹ ಆ ಘಟನೆಯನ್ನು ಬಳಸಿಕೊಂಡು ರಾಜಕೀಯ ಮಾಡಲು ಹೊರಟಿರುವ ಜೆ.ಪಿ.ನಡ್ಡಾ ಅವರ ಕೀಳು ಮನಸ್ಥಿತಿ ಇನ್ನೂ ಖಂಡನೀಯ ಎಂದಿದ್ದಾರೆ.
ಬೆಳಗಾವಿಯ ಘಟನೆ ಗೊತ್ತಾದ ಕ್ಷಣವೇ ನಮ್ಮ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮತ್ತು ಮಹಿಳಾ ಮಕ್ಕಳ ಕಲ್ಯಾಣ ಸಚಿವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಸಂತ್ರಸ್ತೆಯ ಮನೆಗೆ ಭೇಟಿ ಕೊಟ್ಟು ಸಾಂತ್ವನ ನೀಡಿದ್ದು ಮಾತ್ರವಲ್ಲ ಪರಿಹಾರವನ್ನೂ ನೀಡಿದ್ದಾರೆ. ಪೊಲೀಸರು ಇಪ್ಪತ್ತನಾಲ್ಕು ಗಂಟೆಗೊಳಗೆ ದೌರ್ಜನ್ಯ ನಡೆಸಿದ ದುಷ್ಕರ್ಮಿಗಳ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಿದ್ದಾರೆ. ನಾನೇ ಖುದ್ದಾಗಿ ಈ ಪ್ರಕರಣದ ತನಿಖೆಯ ಮೇಲೆ ನಿಗಾ ಇಟ್ಟಿದ್ದೇನೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡುವ ಮೂಲಕ ಇಂತಹ ಅಮಾನುಷ ಕೃತ್ಯಗಳು ನಡೆಯದಂತೆ ನೋಡಿಕೊಳ್ಳಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರ ಕೈಗೊಂಡ ಕ್ರಮದಿಂದ ರಾಜ್ಯದ ಬಿಜೆಪಿ ನಾಯಕರಿಗೂ ಸಮಾಧಾನವಾಗಿದೆ. ಹೀಗಿರುವಾಗ ಘಟನೆ ನಡೆದು ನಾಲ್ಕು ದಿನಗಳ ನಂತರ ಇದ್ದಕ್ಕಿದ್ದ ಹಾಗೆ ಜೆ.ಪಿ.ನಡ್ಡಾ ಅವರು ಎಚ್ಚೆತ್ತುಕೊಂಡು ಈ ಪ್ರಕರಣವನ್ನು ಕೆದಕಲು ಹೊರಟಿರುವುದಕ್ಕೆ ರಾಜಕೀಯ ದುರುದ್ದೇಶ ಕಾರಣವೇ ಹೊರತು ಮಹಿಳೆಯರ ಮೇಲಿನ ಕಾಳಜಿ ಖಂಡಿತ ಅಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.