ಬೆಂಗಳೂರು: ರಾಜ್ಯ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎಸ್ಕಾಂಗಳಿಗೆ ನೀಡಿದ್ದು 6000 ಕೋಟಿಯೋ, 9000 ಕೋಟಿಯೋ?, ಯಾವುದು ನಿಜ ಲೆಕ್ಕ? ಯಾವುದು ಸುಳ್ಳು ಲೆಕ್ಕ? ಎಂಬುದನ್ನು ಇಂಧನ ಸಚಿವ ವಿ.ಸುನೀಲ್ ಕುಮಾರ್ ಅವರು ಮೊದಲು ಹೇಳಬೇಕು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ 9 ಸಾವಿರ ಕೋಟಿ ರೂ ಅನ್ನು ಎಸ್ಕಾಂಗಳಿಗೆ ನೀಡಿ, ನೀವು ಮಾಡಿದ್ದ ಆಡಳಿತ ವೈಫಲ್ಯ ಸರಿಪಡಿಸಿದ್ದೇವೆ. ಮತಕ್ಕಾಗಿ ಇಂಧನ ಇಲಾಖೆ ಮಾರಾಟ ಮಾಡಬೇಡಿ. ಸನ್ಮಾನ್ಯ ಸುನೀಲ್ ಕುಮಾರ್ ಅವರೇ, ನಾವು ನುಡಿದಂತೆ ನಡೆಯುವವರು. ಈ ಬಗ್ಗೆ ಅನುಮಾನವೇ ಬೇಡ. ರಾಜ್ಯದ ಜನರಿಗೆ 200 ಯುನಿಟ್ ಉಚಿತ ಘೋಷಣೆ ಮಾಡಿ, ಕಾರ್ಯಕ್ರಮಕ್ಕೆ ನಿಮ್ಮನ್ನೂ ಆಹ್ವಾನಿಸುತ್ತೇವೆ. ತಪ್ಪದೇ ಬನ್ನಿ ಎಂದು ಟಾಂಗ್ ನೀಡಿದ್ದಾರೆ.
ನಾವು ಲಾಭದ ಹಳಿಗೆ ತಂದು ಉಚಿತ ವಿದ್ಯುತ್ ಕೊಡ್ತೇವಿ:ಸಚಿವ ಸುನೀಲ್ ಕುಮಾರ್ ಅವರ ಅಸಾಮರ್ಥ್ಯಕ್ಕೆ ತಕ್ಕುದಾಗಿ ರಾಜ್ಯದ ವಿದ್ಯುತ್ ಇಲಾಖೆ ಕೆಲಸ ಮಾಡುತ್ತಿದೆ. ನಾವು ಅಧಿಕಾರಕ್ಕೆ ಬಂದ ಮೇಲೆ ಇಲಾಖೆಯನ್ನು ಲಾಭದ ಹಳಿಗೆ ತಂದು, ರಾಜ್ಯದ ಜನರಿಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುತ್ತೇವೆ. ರಾಜ್ಯದ ಅಗತ್ಯತೆಗೆ ಸಾಕಾಗಿ, ಹೊರರಾಜ್ಯಗಳಿಗೆ ಮಾರಾಟ ಮಾಡುವಷ್ಟು ವಿದ್ಯುತ್ ಅನ್ನು ನಾವೇ ಉತ್ಪಾದನೆ ಮಾಡುತ್ತಿದ್ದರು, ದುಪ್ಪಟ್ಟು ದರ ನೀಡಿ ಹೊರಗಿನಿಂದ ಖರೀದಿ ಮಾಡುತ್ತಿರುವ ನಿಮ್ಮ ಸರ್ಕಾರ ಎಸ್ಕಾಂ ಗಳನ್ನು ಉದ್ಧಾರ ಮಾಡಿದೆ ಎಂಬುದು ತಮಾಷೆಯಾಗಿದೆ ಎಂದು ಟೀಕಿಸಿದ್ದಾರೆ.
ಒಂದು ಕಾಲದಲ್ಲಿ ಕೇವಲ 2-3 ಗಂಟೆ ವಿದ್ಯುತ್ ಒದಗಿಸಲು ಸಂಕಷ್ಟ ಪಡುತ್ತಿದ್ದ ರಾಜ್ಯವು 2018 ರ ವೇಳೆಗೆ 28,741 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನೆ ಮಾಡುವ ಹಂತಕ್ಕೆ ತಲುಪಿತ್ತು. ನಮ್ಮ 5 ವರ್ಷಗಳ ಆಡಳಿತದ ಅವಧಿಯಲ್ಲಿ 13,175 ಮೆಗಾವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯ ಹೆಚ್ಚಿಸಿದ್ದೆವು. 2014-15 ರಲ್ಲಿ ನವೀಕರಿಸಬಹುದಾದ ಇಂಧನ ಮೂಲದಿಂದ ಒಟ್ಟು ಉತ್ಪಾದನೆಯಾಗುತ್ತಿದ್ದ ವಿದ್ಯುತ್ ಪ್ರಮಾಣ 4,855 ಮೆಗಾ ವ್ಯಾಟ್. 2018 ರ ವೇಳೆಗೆ ಇದು 13,500 ಮೆಗಾ ವ್ಯಾಟ್ ಗಿಂತ ಹೆಚ್ಚಾಯಿತು.