ಬೆಂಗಳೂರು:ಮುಖ್ಯಮಂತ್ರಿ ಆಯ್ಕೆ ವಿಚಾರವಾಗಿ ಇಂದು ಸಂಜೆ ರಾಜ್ಯ ಕಾಂಗ್ರೆಸ್ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಯಲಿದೆ. ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಇಂದು ನೊಣವಿನಕರೆಯ ಅಜ್ಜಯ್ಯನ ದರ್ಶನಕ್ಕೆ ತೆರಳಿದ್ದಾರೆ. ದೇವರ ಮೊರೆ ಹೋಗಿರುವ ಅವರು ನಗರ ಬಿಡುತ್ತಿದ್ದಂತೆ, ಮತ್ತೋರ್ವ ಪ್ರಬಲ ಆಕಾಂಕ್ಷಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಆಪ್ತ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ.
ಬೆಂಗಳೂರಿನ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿರುವ ಬೈರತಿ ಸುರೇಶ್ ಅವರಿಗೆ ಸಂಬಂಧಿಸಿದ ಪ್ಲಾಟ್ನಲ್ಲಿ ಸಭೆ ನಡೆದಿದೆ. ಶಾಸಕಾಂಗ ಪಕ್ಷದ ಸಭೆಗೂ ಮುನ್ನ ಪ್ರತ್ಯೇಕ ಸಭೆಗೆ ಮುಂದಾದ ಸಿದ್ದರಾಮಯ್ಯ ಈ ರೀತಿ ಆಪ್ತರೊಂದಿಗೆ ಸಮಾಲೋಚನೆ ಆರಂಭಿಸಿದ್ದಾರೆ. ಸಭೆಯಲ್ಲಿ ಸಿದ್ದರಾಮಯ್ಯ ಬಣದ ನಾಯಕರ ಜೊತೆ ಚರ್ಚೆ ನಡೆಸಿದ್ದಾರೆ. ಶಾಸಕರಾದ ಕೆ ಜೆ ಜಾರ್ಜ್, ಎಂ ಬಿ ಪಾಟೀಲ್, ದಿನೇಶ್ ಗುಂಡೂರಾವ್, ಜಮೀರ್ ಆಹ್ಮದ್, ಕೃಷ್ಣ ಬೈರೇಗೌಡ, ರಿಜ್ವಾನ್ ಅರ್ಷದ್, ಪುಟ್ಟರಂಗಶೆಟ್ಟಿ ಮುಂತಾದವರು ಸಭೆಯಲ್ಲಿ ಭಾಗಿಯಾಗಿದ್ದಾರೆ.
ಇಂದು ಮಧ್ಯಾಹ್ನ ದೆಹಲಿಗೆ ತೆರಳಲಿರುವ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಷ್ಟರೊಳಗೆ ಒಂದು ನಿರ್ಧಾರ ಕೈಗೊಳ್ಳಲಿದ್ದಾರೆ. ಖರ್ಗೆ ನಿವಾಸಕ್ಕೆ ಸಿಎಂ ಸ್ಥಾನದ ಇತರೆ ಆಕಾಂಕ್ಷಿಗಳಾಗಿರುವ ಎಂ.ಬಿ. ಪಾಟೀಲ್, ಆರ್.ವಿ ದೇಶಪಾಂಡೆ ಸಹ ಭೇಟಿ ನೀಡಿ ಚರ್ಚಿಸಿದ್ದಾರೆ. ಪಕ್ಷದ ಹೈಕಮಾಂಡ್ ನಿರ್ಧಾರ ಏನೇ ಆಗಿರಲಿ, ಸರ್ಕಾರದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡುವಂತೆ ಮನವಿ ಮಾಡಿದ್ದಾರೆ.
ಡಿಸಿಎಂಗೆ ಒತ್ತಡ:ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಬೆಂಬಲಿಗರು ಸಿದ್ದರಾಮಯ್ಯ ನಿವಾಸಕ್ಕೆ ಭೇಟಿ ನೀಡಿದ್ದು, ಡಿಸಿಎಂ ಸ್ಥಾನ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಪೈಪೋಟಿಗೆ ಬ್ರೇಕ್ ಹಾಕಲು ತಂತ್ರಗಾರಿಕೆ ರೂಪಿಸಲಾಗಿದೆ. ಡಿಕೆಶಿ ತಂತ್ರಗಾರಿಕೆಗೆ ಸಿದ್ದರಾಮಯ್ಯ ಬಣದ ಪ್ರತ್ಯೇಕ ಮಾಸ್ಟರ್ ಪ್ಲ್ಯಾನ್ ರೂಪಿಸಲು ಈ ಸಭೆ ನಡೆಸಿದ್ದಾರೆ ಎನ್ನಲಾಗಿದೆ.