ಬೆಂಗಳೂರು: ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರು ಬೆಳೆದ ಬೆಳೆಯನ್ನೂ ಖಾಸಗಿಯವರ ಪಾದಕ್ಕೆ ಅರ್ಪಿಸಿದ್ದಾಯಿತು. ಈಗ ಅರಣ್ಯ ಪ್ರದೇಶವನ್ನೂ ಖಾಸಗಿಯವರಿಗೆ ನೀಡಲು ಸರ್ಕಾರ ಮುಂದಾಗುತ್ತಿರುವುದು ಅಕ್ಷಮ್ಯ ಅಪರಾಧವಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದು ಎಚ್ಚರಿಕೆ ನೀಡಿರುವ ಅವರು, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮೂಲಕ ರೈತರ ಕೃಷಿ ಭೂಮಿಯನ್ನು ಖಾಸಗಿಯವರಿಗೆ ನೀಡಿ ಉಳ್ಳವನೇ ಹೊಲದೊಡೆಯ ಆಗಲು ಸರ್ಕಾರ ಒಪ್ಪಿಗೆ ಕೊಟ್ಟಿದ್ದಾಯಿತು. ಈಗ ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಎಂಪಿಎಂ ಕಾರ್ಖಾನೆಗೆ ಕಚ್ಚಾ ವಸ್ತು ಪೂರೈಸಲು ನೀಡಲಾಗಿದ್ದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಏಕಾಏಕಿ ಖಾಸಗಿಯವರಿಗೆ ಒಪ್ಪಿಸಲು ಸರ್ಕಾರ ಮುಂದಾಗಿರುವುದರ ವಿರುದ್ಧ ಮಲೆನಾಡಿನ ಜಿಲ್ಲೆಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.
ಮಲೆನಾಡಿನ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಖಾಸಗಿಯವರಿಗೆ ನೀಡಲು ಸರ್ಕಾರ ಮುಂದಾಗಿರುವುದಕ್ಕೆ ಈಗಾಗಲೇ ಮಲೆನಾಡಿನ ಜಿಲ್ಲೆಗಳಲ್ಲಿ ಜನ ಪ್ರತಿಭಟನೆ ಪ್ರಾರಂಭಿಸಿದ್ದಾರೆ. ಹೋರಾಟ ಒಕ್ಕೂಟದ ಪದಾಧಿಕಾರಿಗಳು, ಪ್ರಗತಿಪರರು, ಪರಿಸರ ಹೋರಾಟಗಾರರು, ಜನಸಾಮಾನ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿ ಸರ್ಕಾರಕ್ಕೂ ಅಧಿಕ ಮನವಿ ಪತ್ರ ಕೊಟ್ಟಿದ್ದಾರೆ. ಶಿವಮೊಗ್ಗ ಜಿಲ್ಲಾ ಪ್ರವಾಸದಲ್ಲಿದ್ದ ಸಂದರ್ಭದಲ್ಲಿ ಹೋರಾಟಗಾರರ ಒಕ್ಕೂಟದ ಜತೆ ಈ ಬಗ್ಗೆ ನಾನೂ ಚರ್ಚಿಸಿದ್ದೇನೆ. ಸರ್ಕಾರ ಪಾರದರ್ಶಕವಾಗಿ ವರ್ತಿಸದೆ ಗುಟ್ಟು ಗುಟ್ಟಾಗಿ 20 ಸಾವಿರ ಹೆಕ್ಟೇರ್ ಪ್ರದೇಶವನ್ನು ಖಾಸಗಿಯವರಿಗೆ ನೀಡಿ, ಈಗಾಗಲೇ ನೂರಾರು ಸಮಸ್ಯೆಗಳ ಸುಳಿಗೆ ಸಿಲುಕಿರುವ ಮಲೆನಾಡಿನ ಜನಜೀವನ ಮತ್ತು ಭವಿಷ್ಯದ ಜತೆಗೆ ಸರ್ಕಾರ ಹುಡುಗಾಟ ಆಡುತ್ತಿದೆ ಎಂದು ಆರೋಪಿಸಿದ್ದಾರೆ.
ಲೀಸ್ ನೀಡಲಾಗಿತ್ತು:
1980ರಲ್ಲಿ ಭದ್ರಾವತಿಯ ಮೈಸೂರು ಪೇಪರ್ ಮಿಲ್ (ಎಂಪಿಎಂ) ಕಾರ್ಖಾನೆಗೆ 40 ವರ್ಷಗಳ ಸೀಮಿತ ಅವಧಿಗೆಂದು ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಗಳಿಗೆ ಸೇರಿದ 20 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವನ್ನು ಲೀಸ್ ನೀಡಲಾಗಿತ್ತು. ಈ ಲೀಸ್ ಅವಧಿ ಮುಗಿದ ಕೂಡಲೇ ಈ ಪ್ರದೇಶವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು ಎನ್ನುವ ಷರತ್ತು ವಿಧಿಸಲಾಗಿತ್ತು. ಇದೇ 2020ರ ಆಗಸ್ಟ್‌ನಲ್ಲಿ ಲೀಸ್ ಅವಧಿ ಮುಗಿದಿದೆ. ಜತೆಗೆ ಎಂಪಿಎಂ ಕಾರ್ಖಾನೆ ಕೆಲಸ ನಿಲ್ಲಿಸಿ ವರ್ಷವೇ ಕಳೆದಿದೆ. ಹೀಗಾಗಿ ನಿಯಮಾನುಸಾರ ಹಾಗೂ ಲೀಸ್ ನೀಡುವ ವೇಳೆಯಲ್ಲಿ ವಿಧಿಸಿದ್ದ ಷರತ್ತಿನ ಪ್ರಕಾರ 20 ಸಾವಿರ ಹೆಕ್ಟೇರ್ ಪ್ರದೇಶ ಈ ಕ್ಷಣವೇ ಅರಣ್ಯ ಇಲಾಖೆಗೆ ಹಿಂದಿರುಗಿಸಬೇಕು. ಅದರ ಬದಲು ಖಾಸಗಿಯವರಿಗೆ ಈ ಪ್ರದೇಶವನ್ನು ನೀಡಿ ಮಲೆನಾಡಿನ ಬದುಕನ್ನು ಇನ್ನಷ್ಟು ನರಕ ಮಾಡಲು ಯೋಜಿಸಿರುವಂತೆ ಕಾಣುತ್ತಿದೆ ಎಂದಿದ್ದಾರೆ.