ಕರ್ನಾಟಕ

karnataka

ETV Bharat / state

ಅನುದಾನಿತ ಶಾಲಾ ಶಿಕ್ಷಕರಿಗೆ ವೇತನ ಬಿಡುಗಡೆ ಮಾಡುವಂತೆ ಸಿಎಂಗೆ ಸಿದ್ದರಾಮಯ್ಯ ಮನವಿ - Siddaramaiah requests CM Yeddyurappa

ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಮಾರ್ಚ್ 30, 2020ರವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಬೇಕು. ಖಾಲಿ ಹುದ್ದೆಗಳನ್ನು ತುಂಬದೆ ಇದ್ದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆ ಆಗುತ್ತದೆ. ಅನುದಾನಿತ ಶಾಲಾ ಶಿಕ್ಷಕರಿಗೆ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.

ಸಿಎಂಗೆ ಸಿದ್ದರಾಮಯ್ಯ ಮನವಿ
ಸಿಎಂಗೆ ಸಿದ್ದರಾಮಯ್ಯ ಮನವಿ

By

Published : Aug 27, 2020, 2:21 PM IST

ಬೆಂಗಳೂರು: ಅನುದಾನಿತ ಶಾಲಾ ಶಿಕ್ಷಕರಿಗೆ ಕೂಡಲೇ ವೇತನ ಬಿಡುಗಡೆ ಮಾಡುವಂತೆ ಸಿಎಂ ಬಿ.ಎಸ್.ಯಡಿಯೂರಪ್ಪಗೆ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ಧರಾಮಯ್ಯ ಒತ್ತಾಯಿಸಿದ್ದಾರೆ.

ಈ ಸಂಬಂಧ ಪತ್ರ ಬರೆದಿರುವ ಅವರು, ಕರ್ನಾಟಕದಲ್ಲಿ ಮಾರ್ಚ್ 21ರಂದು ಲಾಕ್​​ಡೌನ್ ಘೋಷಣೆ ಆದ ನಂತರ ಅನುದಾನಿತ ಶಾಲೆಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಮಾರು 2 ಲಕ್ಷಕ್ಕೂ ಹೆಚ್ಚು ಶಿಕ್ಷಕರು ಕೆಲಸವೇ ಇಲ್ಲದೆ, ವೇತನ ಇಲ್ಲದೆ 6 ತಿಂಗಳಿಂದ ಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರ ಕೂಡಲೇ ವಿಶೇಷ ಪ್ಯಾಕೇಜ್ ಮುಖಾಂತರ ಅವರಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಸಿಎಂಗೆ ಸಿದ್ದರಾಮಯ್ಯ ಮನವಿ

ರಾಜ್ಯದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರಾಗಿ ಮತ್ತು ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಕೋವಿಡ್-19ರ ಕಾರಣಕ್ಕಾಗಿ ರಜಾ ಅವಧಿಯನ್ನು ಸೇವಾ ಅವಧಿ ಎಂದು ಪರಿಗಣಿಸಿ ಅವರಿಗೆ ಗೌರವಧನ ನೀಡಬೇಕು. ರಾಜ್ಯದ ಪ್ರೌಢ ಶಾಲೆಗಳಲ್ಲಿ ಬಡ್ತಿ ಇಲ್ಲದೆ ಕರ್ತವ್ಯ ನಿರ್ವಹಿಸುತ್ತಿರುವ ಸಹ ಶಿಕ್ಷಕರಿಗೆ ನಿಯಮಾನುಸಾರ ಮುಖ್ಯ ಶಿಕ್ಷಕರ ಹುದ್ದೆಗೆ ಕೂಡಲೇ ಬಡ್ತಿ ನೀಡಬೇಕು. ರಾಜ್ಯದ ಅನುದಾನಿತ ಶಾಲಾ-ಕಾಲೇಜುಗಳಲ್ಲಿ ಮಾರ್ಚ್ 30, 2020ರವರೆಗೆ ಖಾಲಿ ಇರುವ ಹುದ್ದೆಗಳನ್ನು ತುಂಬಿಕೊಳ್ಳಲು ಅನುಮತಿ ನೀಡಬೇಕು. ಖಾಲಿ ಹುದ್ದೆಗಳನ್ನು ತುಂಬದೆ ಇದ್ದರೆ ಮಕ್ಕಳ ಶೈಕ್ಷಣಿಕ ಪ್ರಗತಿಗೆ ತೊಂದರೆ ಆಗುತ್ತದೆ ಎಂದು ಹೇಳಿದ್ದಾರೆ.

ಪ್ರೋತ್ಸಾಹಧನ ಹೆಚ್ಚಿಸಿ: ರಾಜ್ಯ ವಸತಿ ಶಾಲೆಗಳಲ್ಲಿ 6ರಿಂದ 12ನೇ ತರಗತಿಯವರೆಗೆ ಮಕ್ಕಳ ಪ್ರವೇಶಕ್ಕೆ ನಿಗದಿಪಡಿಸಿರುವ ಪೋಷಕರ ಈಗಿನ ಆದಾಯದ ಮಿತಿಯನ್ನು ಪರಿಶಿಷ್ಟ ಜಾತಿ/ಪಂಗಡಕ್ಕೆ ರೂ. 4 ಲಕ್ಷ, ಹಿಂದುಳಿದ 2ಎ ವರ್ಗಕ್ಕೆ ರೂ. 4 ಲಕ್ಷ ಹಾಗೂ ಇತರೆ ಹಿಂದುಳಿದ ವರ್ಗಕ್ಕೆ ರೂ. 3 ಲಕ್ಷಕ್ಕೆ ಹೆಚ್ಚಿಸಲು ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರ ಆರ್​​ಟಿಇ ಅಡಿಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬಾಕಿ ಇರುವ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು. ಇದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರಸಕ್ತ ಸನ್ನಿವೇಶದಲ್ಲಿ ಆರ್ಥಿಕ ಸಂಕಷ್ಟದಿಂದ ಹೊರ ಬರಲು ಸಾಧ್ಯವಾಗುತ್ತದೆ ಎಂದು ಪತ್ರದಲ್ಲಿ ವಿವರಿಸಿದ್ದಾರೆ.

ABOUT THE AUTHOR

...view details