ಬೆಂಗಳೂರು : ಇತ್ತೀಚೆಗೆ ನಿಧನರಾದ ಸಚಿವ ಉಮೇಶ್ ಕತ್ತಿ ಹಿರಿಯ ಮುತ್ಸದ್ದಿ ರಾಜಕಾರಣಿ ಮತ್ತು ಸ್ನೇಹ ಜೀವಿಯಾಗಿದ್ದರು. ಜೊತೆಗೆ ಹಾಸ್ಯ ಪ್ರವೃತ್ತಿ ಹೊಂದಿದ್ದರು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಉಮೇಶ್ ಕತ್ತಿಯವರನ್ನು ನೆನಪಿಸಿಕೊಂಡರು.
ವಿಧಾನಸಭೆಯಲ್ಲಿ ಇಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಅವರು, ಕತ್ತಿ ಅವರು ತಮ್ಮ ಕ್ಷೇತ್ರದಲ್ಲಿ ಅಪಾರ ಜನರ ಪ್ರೀತಿ ವಿಶ್ವಾಸ ಗಳಿಸಿದ್ದರು. ವಿರೋಧ ಪಕ್ಷದಲ್ಲಿದ್ದರೂ ಕಳೆದ ಚುನಾವಣೆಯಲ್ಲಿ ಮನೆಗೆ ಊಟಕ್ಕೆ ಕರೆದಿದ್ದರು. ನಾನೂ ಹೋಗಿದ್ದೆ. ಎರಡು ಗಂಟೆ ಕಾಲ ಅವರ ಮನೆಯಲ್ಲಿದ್ದೆ. ರಾಜ್ಯ ಹಾಗೂ ಕೇಂದ್ರ ರಾಜಕಾರಣದ ಬಗ್ಗೆ ಅವರು ಸುದೀರ್ಘವಾಗಿ ಮಾತನಾಡಿದ್ದರು. ಅವರು ಏನು ಮಾತನಾಡಿದ್ದರು ಎಂದು ಈಗ ನಾನು ಬಹಿರಂಗಪಡಿಸಲ್ಲ ಎಂದು ವಿಪಕ್ಷನಾಯಕ ಸಿದ್ದರಾಮಯ್ಯ ಹೇಳಿದರು.
ಬೆಳಗಾವಿ ಜಿಲ್ಲೆಯ ವರ್ಣರಂಜಿತ ರಾಜಕಾರಣಿ: ಬೆಳಗಾವಿಯಲ್ಲಿ ಅವರದ್ದೇ ಆದ ಶಕ್ತಿಯನ್ನು ಗಳಿಸಿದ್ದರು. ಉದ್ಯಮ, ರಾಜಕಾರಣ, ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಯಶಸ್ಸು ಕಂಡಿದ್ದರು. ಬೆಳಗಾವಿ ಜಿಲ್ಲೆಯ ವರ್ಣರಂಜಿತ ರಾಜಕಾರಣಿಯಾಗಿದ್ದ ಉಮೇಶ್ ಕತ್ತಿಯವರು ಅಜಾತಶತ್ರು ಎಂದು ಸಿದ್ದರಾಮಯ್ಯ ಹೇಳಿದರು.
ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ತುಂಬಾ ಕಾಳಜಿ ಹೊಂದಿದ್ದ ಅವರು, ಆಗಾಗ, ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯವಾಗಬೇಕೆಂದು ಹೇಳುತ್ತಿದ್ದರು. ನಾನು ಆಗ, ಪ್ರತ್ಯೇಕ ರಾಜ್ಯ ಕೇಳುವುದು ಸಮಂಜಸವಲ್ಲ. ಉತ್ತರ ಕರ್ನಾಟಕ ಅಭಿವೃದ್ಧಿ ಆಗಬೇಕೆಂದು ಹೇಳಿ. ಆದರೆ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂದು ಕೇಳಬೇಡಿ ಎಂದಿದ್ದೆ ಎಂದು ಹೇಳಿದರು.