ಬೆಂಗಳೂರು: ರಾಜ್ಯಪಾಲರ ಭಾಷಣಕ್ಕೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 16 ಅಂಶಗಳ ವಿಸ್ತೃತ ವಿವರಣೆಯನ್ನು ರಾಜ್ಯಪಾಲರ ಭಾಷಣದ ಮೇಲೆ ಮಾಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ ಸರ್ಕಾರ ತನ್ನ ಭ್ರಷ್ಟಾಚಾರವನ್ನು ಮುಚ್ಚಿ ಹಾಕುವ ನಿಟ್ಟಿನಲ್ಲಿ ರಾಜ್ಯಪಾಲರ ಮೂಲಕ ಭಾಷಣ ಮಾಡಿಸಿದೆ ಎಂದು ಹೇಳದ್ದಾರೆ.
16 ಅಂಶಗಳು:
1. ಸರ್ಕಾರ ಯಾವ ಕೆಲಸವನ್ನೂ ಮಾಡದೇ ಬರೀ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಜನರ ಆರೋಪವನ್ನು ಸಾಬೀತು ಮಾಡುವಂತಿದೆ.
2. ರಾಜ್ಯವು ಇಂದು ನಿರುದ್ಯೋಗ, ಬೆಲೆ ಏರಿಕೆ, ಭ್ರಷ್ಟಾಚಾರ, ಸೌಹಾರ್ದತೆಯ ಸಮಸ್ಯೆ, ಅಶಾಂತಿಯ ವಾತಾವರಣ, ಕೃಷಿ ಬಿಕ್ಕಟ್ಟು, ನೇಕಾರರ, ಮೀನುಗಾರರ ಹಾಗೂ ಸಣ್ಣ ಕೈಗಾರಿಕೆಗಳಿಗೆ ಒತ್ತು ಕೊಡದೆ ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿದೆ. ಈ ಸಮಸ್ಯೆಗಳನ್ನು ಗುರುತಿಸಿ ಹೋಗಲಾಡಿಸುವುದು ಮಾತ್ರ ನಿಜವಾದ ಸರ್ಕಾರ ಎಂದು ಕರೆಸಿಕೊಳ್ಳುತ್ತದೆ. ಆದರೆ, ಇಡಿ ರಾಜ್ಯಪಾಲರ 82 ಪ್ಯಾರಾಗಳ ಭಾಷಣದಲ್ಲಿ ಈ ಸಮಸ್ಯೆಗಳ ಕುರಿತು ಪ್ರಸ್ತಾಪವಾಗಿಲ್ಲ.
3. ರಾಜಸ್ಥಾನ ಬಿಟ್ಟರೆ ಕರ್ನಾಟಕ ಎರಡನೇ ಅತಿ ದೊಡ್ಡ ಒಣ ಭೂಮಿ ಇರುವ ರಾಜ್ಯ. ಈಗಾಗಲೇ ತೆಲಂಗಾಣದವರು ಕೃಷ್ಣ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟಂತೆ ಕರ್ನಾಟಕಕ್ಕೆ ಹಂಚಿಕೆಯಾಗಿರುವ ನೀರನ್ನು ಬಳಸಿಕೊಳ್ಳುವಲ್ಲಿ ವಿಫಲವಾಗಿದೆ. ಆದ್ದರಿಂದ ಆ ನೀರನ್ನು ತಮಗೆ ಹಂಚಿಕೆ ಮಾಡಿ ಎಂದು ಕೇಂದ್ರ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‍ಗಳ ಮುಂದೆ ಹೋಗಿದ್ದಾರೆ. ರಾಜ್ಯದಲ್ಲಿ ಬಹಳ ಕಾಲದಿಂದ ಮಹದಾಯಿ, ಮೇಕೆದಾಟು, ಭದ್ರಾ-ಕೃಷ್ಣ ಮೇಲ್ದಂಡೆ, ತುಂಗಭದ್ರ ಅಣೆಕಟ್ಟುಗಳ ನಿರ್ಮಾಣ ಮುಂತಾದ ಅನೇಕ ನೀರಾವರಿ ಸಮಸ್ಯೆಗಳನ್ನು ಎದುರಿಸುತ್ತಿದೆ.
ಆದರೆ, ಸರ್ಕಾರ ನೀರಾವರಿ ವಿಚಾರದಲ್ಲಿ ಏನನ್ನೂ ಮಾಡಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಉತ್ತರ ಕರ್ನಾಟಕದಲ್ಲಿ ಯಥೇಚ್ಚವಾಗಿ ಜಲ ಸಂಪನ್ಮೂಲದ ಲಭ್ಯತೆ ಇದ್ದರೂ ಕೊಪ್ಪಳ, ಯಾದಗಿರಿ, ಬಳ್ಳಾರಿ ಜಿಲ್ಲೆಗಳಿಗೆ ಸಮರ್ಪಕವಾಗಿ ನೀರಾವರಿ ಸೌಲಭ್ಯವನ್ನು ಒದಗಿಸಲು ಈ ಸರ್ಕಾರ ಸಂಪೂರ್ಣ ವಿಫಲವಾಗಿದೆ. ರಾಜ್ಯಪಾಲರ ಭಾಷಣದಲ್ಲಿ ನೀರಾವರಿಯ ಕುರಿತು ಅಥವಾ ಈ ಯೋಜನೆಗಳ ಕುರಿತು ಯಾವುದೇ ಸ್ಪಷ್ಟ ಪ್ರಸ್ತಾಪವಿಲ್ಲ.
4. ರಾಜ್ಯದ ಆರ್ಥಿಕತೆಯನ್ನು ನಿರ್ಮಾಣ ಮಾಡುವುದರಲ್ಲಿ ಸಣ್ಣ ಕೈಗಾರಿಕೆಗಳ ಪಾತ್ರ ಬಹಳ ದೊಡ್ಡದು. ರಾಜ್ಯದಲ್ಲಿ ಸಂಘಟಿತ ಮತ್ತು ಅಸಂಘಟಿತ ಎರಡೂ ವಲಯಗಳು ಸೇರಿದಂತೆ 2 ಕೋಟಿಗೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಸಣ್ಣ ಕೈಗಾರಿಕೆಗಳ ಅಭಿವೃದ್ಧಿಗೆ ಸರ್ಕಾರ ನಯಾಪೈಸೆಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದನ್ನು ಒಪ್ಪಿಕೊಂಡಿದೆ. ಈ ಕುರಿತು ರಾಜ್ಯಪಾಲರ ಭಾಷಣದಲ್ಲಿ ಒಂದೇ ಒಂದು ಮಾತು ಕೂಡ ಪ್ರಸ್ತಾಪವಾಗಿಲ್ಲ.
5. ಹಾಗೆಯೇ ರಾಜ್ಯದಲ್ಲಿ 88 ಲಕ್ಷ ಕೃಷಿ ಕುಟುಂಬಗಳಿವೆ. ಕೃಷಿಯನ್ನು ಲಾಭದಾಯಕ ಚಟುವಟಿಕೆಯನ್ನಾಗಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದು ರಾಜ್ಯಪಾಲರ ಭಾಷಣದಲ್ಲಿ ಸ್ಪಷ್ಟವಾಗಿದೆ. ಕೃಷಿಕರು ಅನುಭವಿಸುತ್ತಿರುವ ಸಂಕಷ್ಟಗಳನ್ನು ಹೋಗಲಾಡಿಸಲು ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಿದೆ.
6. ಅನೇಕ ವಿಚಾರಗಳಲ್ಲಿ ಉತ್ತರ ಕರ್ನಾಟಕವು ಹಿಂದೆ ಉಳಿದಿದೆ. ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿ ಮತ್ತು ಕರ್ನಾಟಕದ ಅಭಿವೃದ್ಧಿಗೆ ಬಗ್ಗೆ ರಾಜ್ಯಪಾಲರ ಭಾಷಣದಲ್ಲಿ ಯಾವುದೇ ಉಲ್ಲೇಖಗಳಿಲ್ಲ. ಸರ್ಕಾರ ಯಾವುದೇ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎನ್ನುವುದು ಸ್ಪಷ್ಟವಾಗಿದೆ.
7. ರಾಜ್ಯವು ಇಂದು ಅನುಭವಿಸುತ್ತಿರುವ ದೊಡ್ಡ ಸಮಸ್ಯೆ ಭ್ರಷ್ಟಾಚಾರದ್ದು. ಈ ಸಮಸ್ಯೆಯನ್ನು ಹೋಗಲಾಡಿಸಲು ಸರ್ಕಾರ ಏನು ಕ್ರಮ ಕೈಗೊಂಡಿದೆ ಎನ್ನುವ ಬಗ್ಗೆ ಒಂದೂ ಮಾತು ಪ್ರಸ್ತಪವಿಲ್ಲ. ಆದ್ದರಿಂದ ಸರ್ಕಾರ ಭ್ರಷ್ಟಾಚಾರದ ಪರವಾಗಿರುವುದನ್ನು ರಾಜ್ಯಪಾಲರ ಭಾಷಣವು ದೃಢೀಕರಿಸುತ್ತಿದೆ.