ಬೆಂಗಳೂರು :ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ಎಚ್. ವಿಶ್ವನಾಥ್ ನಿರ್ಧಾರ ಕೈಗೊಳ್ಳಲು ಅವರು ಯಾರು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ ಕಾರಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಮೈಸೂರು ವಿಭಜನೆ ಬಗ್ಗೆ ಮಾತನಾಡಲು ವಿಶ್ವನಾಥ್ ಯಾರು?. ಅವರು ನನಗಿಂತ ಮುಂಚಿನಿಂದ ರಾಜಕೀಯದಲ್ಲಿ ಇದ್ದಾರೆ. ಇಲ್ಲಿ ತನಕ ಅವರು ಪ್ರತ್ಯೇಕ ಜಿಲ್ಲೆ ಸಂಬಂಧ ಮಾತನಾಡಿಲ್ಲ. ಆ ಬಗ್ಗೆ ಪ್ರಯತ್ನವೂ ಮಾಡಿಲ್ಲ. ಈಗ ಅವರು ಏಕಾಏಕಿ ಪ್ರತ್ಯೇಕ ಜಿಲ್ಲೆ ಬಗ್ಗೆ ಮಾತನಾಡುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಲಾಭ ಬಿಟ್ಟು ಬೇರೆ ಏನೂ ಉದ್ದೇಶ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಬಗ್ಗೆ ಮಾತನಾಡಬೇಕು ಅಂದರೆ ಯಡಿಯೂರಪ್ಪ ಸಭೆ ಕರೆದು ಮಾತನಾಡಬೇಕು. ಎಚ್.ವಿಶ್ವನಾಥ್ ಅನರ್ಹ ಶಾಸಕರಗಿದ್ದಾರೆ. ಅವರು ಪ್ರತ್ಯೇಕ ಜಿಲ್ಲೆ ರಚನೆ ಸಂಬಂಧ ನಿರ್ಧಾರ ಕೈಗೊಳ್ಳಲು ಆಗುತ್ತಾ?. ಆ ನಿರ್ಧಾರವನ್ನು ಸಿಎಂ ಯಡಿಯೂರಪ್ಪ ತೆಗೆದುಕೊಳ್ಳಬೇಕು. ಆ ಭಾಗದ ಎಲ್ಲ ಶಾಸಕರನ್ನು ಕರೆದು ಸಿಎಂ ಚರ್ಚೆ ನಡೆಸಬೇಕು. ದೇವರಾಜು ಅರಸು ಹುಣಸೂರು ಕ್ಷೇತ್ರಕ್ಕೆ ಸೀಮಿತರಲ್ಲ. ಅರಸು ರಾಷ್ಟ್ರೀಯ ನಾಯಕ. ಮೈಸೂರು ವಿಭಜನೆ ಬಗ್ಗೆ ನನ್ನ ಪ್ರಬಲ ವಿರೋಧ ಇದೆ. ಇದೊಂದು ರಾಜಕೀಯ ಗಿಮಿಕ್ ಎಂದು ಕಿಡಿಕಾರಿದರು.