ಬೆಂಗಳೂರು: ಕೇಂದ್ರ ಸರ್ಕಾರ ಇಂದು ಮಂಡಿಸಿರುವುದು ಆತ್ಮಬರ್ಬರ ಬಜೆಟ್ ಆಗಿದೆ. ಇದೊಂದು ರೀತಿ ಆತ್ಮ ಬರ್ಬಾದ್ ಅಂದರೆ ನಾಶ ಎಂಬಂತಾಗಿದೆ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವ್ಯಂಗ್ಯವಾಡಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಇಂದು ಕೇಂದ್ರ ಬಜೆಟ್ ಮಂಡನೆ ಮಾಡಿದ್ದಾರೆ. 2021-22ರ ಆರ್ಥಿಕ ವರ್ಷದ ಬಜೆಟ್ ಮಂಡಿಸಿದ್ದಾರೆ. ನಿನ್ನೆ ನಮಗೆ ಮಾಧ್ಯಮದವರು ಪ್ರಶ್ನೆ ಕೇಳಿದ್ದರು. ಆಗ ನಾನು ಬಜೆಟ್ ಬಗ್ಗೆ ಯಾವ ನಿರೀಕ್ಷೆ ಇಲ್ಲ ಎಂದಿದ್ದೆ. ನಾನು ಹೇಳಿದ ಮಾತು ಸತ್ಯವಾಗಿದೆ. ಅದರಂತೆಯೇ ಇಂದು ಬಜೆಟ್ ಮಂಡನೆಯಾಗಿದೆ ಎಂದು ಟೀಕಿಸಿದರು.
ಕೇಂದ್ರ ಬಜೆಟ್ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಕೋವಿಡ್ನಿಂದ ಆರ್ಥಿಕ ಸ್ಥಿತಿ ಅದೋಗತಿಗೆ ಹೋಗಿತ್ತು. ಅದನ್ನ ಚೇತರಿಕೆ ಮಾಡುತ್ತಾರೆಂದು ಕೊಂಡಿದ್ದೆವು. ಅಂತಹ ಯಾವ ನಿರೀಕ್ಷೆಯೂ ಈಡೇರಿಸಿಲ್ಲ. ಸಣ್ಣ, ಮಧ್ಯಮ ಕೈಗಾರಿಕೆಗಳ ಪುನಶ್ಚೇತನವೂ ಇಲ್ಲ. ಆರ್ಥಿಕ ತಜ್ಞರು ಕೊಟ್ಟ ಸಲಹೆಗಳನ್ನು ಗಾಳಿಗೆ ತೂರಿದ್ದಾರೆ. ಈ ಬಾರಿ ಕೃಷಿ ಸೆಸ್ ಅಂತ ಹೊಸದಾಗಿ ಮಾಡಿದ್ದಾರೆ. 2.5 ಇದ್ದದ್ದನ್ನ 3.5ರ ವರೆಗೆ ಹಾಕಿದ್ದಾರೆ. ಕೃಷಿ ಸೆಸ್ ಎಲ್ಲರ ಮೇಲೆ ಹೇರಿದ್ದಾರೆ. ಕೃಷಿ ಉತ್ತೇಜನಕ್ಕೆ ಅಂತ ಸಮರ್ಥಿಸಿಕೊಳ್ತಿದ್ದಾರೆ ಎಂದರು.
ರೈತರಿಗೆ 15 ಲಕ್ಷ ಕೋಟಿ ಸಾಲ ಕೊಡಬಹುದಿತ್ತು. ರೈತರ ಸಾಲಮನ್ನಾಕ್ಕೆ ಕ್ರಮ ತೆಗೆದುಕೊಳ್ಳಬಹುದಿತ್ತು. ಮನಮೋಹನ್ ಸಿಂಗ್ 72 ಸಾವಿರ ಕೋಟಿ ರೂಪಾಯಿ ಮನ್ನಾ ಮಾಡಿದ್ದರು. ಇವರು ಒಂದೇ ಒಂದು ರೂ. ಸಾಲ ಮನ್ನಾ ಮಾಡಿಲ್ಲ. ಈ ಕೃಷಿ ಸೆಸ್ ವಸೂಲಿ ಮಾಡ್ತಾರೆ. ರೈತರ ಕಲ್ಯಾಣಕ್ಕೆ ಕಾರ್ಯಕ್ರಮ ಏಕೆ ಕೊಡಲಿಲ್ಲ. ಬೆಲೆ ಬಿದ್ದುಹೋದಾಗ ನ್ಯಾಯಯುತ ಬೆಲೆ ಸಿಗುವಂತೆ ಮಾಡಬಹುದಿತ್ತು. ಇದರ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ವಿದ್ಯುತ್ ಕ್ಷೇತ್ರ ಖಾಸಗೀಕರಣ ಮಾಡಿದ್ದಾರೆ. ವಿಮಾ ಕ್ಷೇತ್ರವನ್ನೂ ಖಾಸಗಿಯವರಿಗೆ ಕೊಟ್ಟಿದ್ದಾರೆ. ಖಾಸಗಿಯವರು ಕಡಿಮೆ ರೇಟಿಗೆ ವಿದ್ಯುತ್ ಕೊಡ್ತಾರಾ? ಇದ್ರಿಂದ ದರಗಳು ಹೆಚ್ಚಾಗುತ್ತವೆ. ಸಾಮಾನ್ಯ ಜನರ ವಿದ್ಯುತ್ ಬಳಕೆ ದರವೂ ಹೆಚ್ಚುತ್ತೆ ಎಂದು ಸಿದ್ದರಾಮಯ್ಯ ಹೇಳಿದ್ರು.
ಪೆಟ್ರೋಲ್, ಡಿಸೇಲ್ ಮೇಲೆ ಡ್ಯೂಟೀಸ್ ಹೆಚ್ಚು ಮಾಡಿದ್ದಾರೆ. ಹೀಗಾಗಿಯೇ ಬೆಲೆ ಏರಿಕೆಯಾಗುತ್ತಲೇ ಇದೆ. ಎಂತಹ ಸುಳ್ಳನ್ನ ಹೇಳ್ತಿದ್ದಾರೆ ಇವರು 19-20ಕ್ಕೆ 30,042 ಕೋಟಿ ಬಜೆಟ್ ಇತ್ತು. ಈಗ ಬಜೆಟ್ ಗಾತ್ರವೂ ಹೆಚ್ಚಾಗಿದೆ. ಜಿಡಿಪಿ 23.9 ಡಿಕ್ಲೇರ್ ಆಗಿದೆ, ಸಾಲ ಹೆಚ್ಚಾಗಿದೆ. ಸಾಲ ಹೆಚ್ಚಾದರೆ ವಿತ್ತೀಯ ಕೊರತೆಯೂ ಹೆಚ್ಚಾಗಲಿದೆ. ಹಾಗಾಗಿ ಇದು ಬರ್ಬಾದ್ ಬಜೆಟ್ ಆಗಿದೆ ಎಂದು ಕೇಂದ್ರ ಆಯವ್ಯವನ್ನು ಸಿದ್ದರಾಮಯ್ಯ ಜರಿದರು.
ಇದನ್ನೂ ಓದಿ:ಕೆಲ ಉತ್ಪನ್ನಗಳ ಮೇಲೆ ಸೆಸ್ ಏರಿಕೆಯಿಂದ ಗ್ರಾಹಕರಿಗೆ ಹೊರೆಯಾಗಲ್ಲ: ನಿರ್ಮಲ ಸೀತಾರಾಮನ್