ಬೆಂಗಳೂರು: ಇದು ಬಿಜೆಪಿ ಸರ್ಕಾರದ ನಿರ್ಗಮನದ ಬಜೆಟ್ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ವಿಧಾಸಭೆಯಲ್ಲಿ ಬಜೆಟ್ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಅವರು, ಬಜೆಟ್ ಅಂದರೆ ಒಂದು ಕುಟುಂಬದ ಗೃಹಿಣಿಯ ಆಯವ್ಯಯ. ಜನರ ಸಮಸ್ಯೆ ಏನು?. ಆ ಸಮಸ್ಯೆಗೆ ಬಜೆಟ್ ಮೂಲಕ ಏನು ಪರಿಹಾರ ಅನ್ನೋದು ಮುಖ್ಯ. ತೆರಿಗೆಯಿಂದ ಬರುವ ಹಣ, ಕೇಂದ್ರದಿಂದ ಬರುವ ಅನುದಾನ ಎಷ್ಟು. ಈ ನಾಡಿನ ಅಭಿವೃದ್ಧಿಗೆ ಮಾಡುವ ವೆಚ್ಚವೇ ವ್ಯಯ. ಈ ಬಾರಿಯ ಬಜೆಟ್ ಗಾತ್ರ 3,09,182 ಕೋಟಿ ರೂ. ಈ ವರ್ಷದಂತೆ ತೆರಿಗೆ ಬೆಳವಣಿಗೆ ಮುಂದಿನ ಬಾರಿ ಆಗುವ ವಿಶ್ವಾಸ ವ್ಯಕ್ತಪಡಿಸಲಾಗಿದೆ. ಆದರೆ ಬಿಜೆಪಿ ಸರ್ಕಾರ ಮುಂದಿನ ವರ್ಷ ಇರೋದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಮುಂದಿನ ಒಂದು ತಿಂಗಳು ಮಾತ್ರ ಈ ಸರ್ಕಾರದ ಅವಧಿ. 2022-23 ರಲ್ಲಿ ಇವರಿಗೆ ಉಳಿತಾಯದ ಬಜೆಟ್ ಮಾಡಲು ಸಾಧ್ಯವಾಗಿಲ್ಲ. ಆದರೆ ನಾನು ಸಿಎಂ ಆಗಿದ್ದಾಗ 5 ವರ್ಷ ಉಳಿತಾಯ ಬಜೆಟ್ ಮಾಡಿದ್ದೆ. ಬಜೆಟ್‌ನ ಆತ್ಮ ಪಾರದರ್ಶಕ ಆಗಿರಬೇಕು. ಜನರಿಗೆ ಸತ್ಯ ಹೇಳುವ ಕೆಲಸ ಈ ಬಜೆಟ್‌ನಲ್ಲಿ ಆಗಿಲ್ಲ. ಸರ್ಕಾರದ ಅವಧಿಯಲ್ಲಿ ಮಾಡಿರೋದು, ಮುಂದೆ ಮಾಡೋದನ್ನು ಹೇಳಬೇಕಿತ್ತು. ನಾವು 165 ಭರವಸೆಗಳನ್ನು ಕೊಟ್ಟಿದ್ದೆವು. ಅದರಲ್ಲಿ ಶೇ 90% ಭರವಸೆಗಳನ್ನು ಈಡೇರಿಸಿದ್ದೇವೆ.
ಬಿಜೆಪಿಯವರು ತಮ್ಮ ಪ್ರಣಾಳಿಕೆಯನ್ನು ಮಂಡಿಸಲಿ. ನಾವು ನಮ್ಮ ಪ್ರಣಾಳಿಕೆಯನ್ನು ಸಹ ಇಡ್ತೇವೆ. ಈ ಕುರಿತು ಸದನದಲ್ಲಿ ಒಂದು ಡಿಬೇಟ್ ಆಗಲಿ. ಜನತೆಗೆ ಯಾವುದೇ ತಪ್ಪು ಮಾಹಿತಿ ಹೋಗಬಾರದು. ಯಾರು ನುಡಿದಂತೆ ನಡೆದಿದ್ದಾರೆ. ಯಾರು ನುಡಿದಂತೆ ನಡೆದಿಲ್ಲ ಅಂತ ಗೊತ್ತಾಗಲಿ. ನಾನು ಈ ಸಂಬಂಧ ಸಾವಲು ಹಾಕುತ್ತೇನೆ.
ನಾನು ಹೆಮ್ಮೆಯಿಂದ ಹೇಳ್ತೇನೆ. ಪ್ರಣಾಳಿಕೆಯಲ್ಲಿ ಹೇಳಿದ್ದ ಶೇ 90ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿ ಮಾಡಿದ್ದೇವೆ. ಬಿಜೆಪಿ ಸರ್ಕಾರ ಒಂದು ಚಾಳಿ ಕಲಿತುಕೊಂಡಿದೆ. ಯಾವುದೇ ಆರೋಪ ಮಾಡಿದರೂ, ಹಿಂದಿನ ಸರ್ಕಾರದಲ್ಲಿ ಆಗಿಲ್ವಾ? ಅಂತ ಕೇಳ್ತಾರೆ. ನಮ್ಮ ಮೇಲೆ ಆರೋಪ ಇದ್ದರೆ ಯಾಕೆ ಅದನ್ನು ಆಗ ಪ್ರಸ್ತಾಪ ಮಾಡಲಿಲ್ಲ?, ಆಗ ಬಾಯಿಗೆ ಕಡುಬು ಸಿಕ್ಕಾಕ್ಕೊಂಡು ಕುಳಿತಿದ್ರಾ?. ಕಡ್ಲೆಪುರಿ ತಿಂತಾ ಇದ್ರಾ?. ಈಗ 4 ವರ್ಷದಿಂದ ಅಧಿಕಾರದಲ್ಲಿ ಇದ್ರಲ್ಲಾ?. ಯಾಕೆ ನೀವು ತನಿಖೆ ಮಾಡಿಸಲಿಲ್ಲ? ಎಂದು ಕೇಳಿದರು.