ಕರ್ನಾಟಕ

karnataka

ETV Bharat / state

ದೆಹಲಿಯಲ್ಲಿ ಕುಳಿತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ: ಸಿದ್ದರಾಮಯ್ಯ - etv bharat kannada

ಅಮಿತ್ ಶಾ ಸ್ವಾಭಿಮಾನಿ ಕನ್ನಡಿಗರಿಗೆ ಅವಮಾನ ಮಾಡಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ

siddaramaiah-reaction-on-amith-shah-statement
ದೆಹಲಿಯಲ್ಲಿ ಕೂತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ: ಸಿದ್ದರಾಮಯ್ಯ

By

Published : Apr 25, 2023, 9:41 PM IST

ಬೆಂಗಳೂರು: ದೆಹಲಿಯಲ್ಲಿ ಕೂತು ರಾಜ್ಯಗಳನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಪ್ರಜಾಪ್ರಭುತ್ವ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಕರ್ನಾಟಕವನ್ನು ನರೇಂದ್ರ ಮೋದಿ ಅವರ ಕೈಗೆ ಕೊಡುವ ಚುನಾವಣೆಯಿದು ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆ ಕುರಿತಾಗಿ ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

ವಾರೆ ವ್ಹಾ ಅಮಿತ್ ಶಾ ಜೀ, ಇದು ಕರ್ನಾಟಕದ ಭವಿಷ್ಯವನ್ನು ನರೇಂದ್ರ ಮೋದಿ ಅವರ ಕೈಯಲ್ಲಿ ಕೊಡುವ ಚುನಾವಣೆ ಎಂಬ ಸತ್ಯವನ್ನೇ ಹೇಳಿದ್ದೀರಿ, ಧನ್ಯವಾದಗಳು. ಇದೆಂತ ಅವಮಾನ ಕನ್ನಡಿಗರಿಗೆ. ಕರ್ನಾಟಕದ ಭವಿಷ್ಯವನ್ನು ನೋಡಿಕೊಳ್ಳಲು ಒಬ್ಬ ಕನ್ನಡಿಗನೂ ಇಲ್ಲದಷ್ಟು ನಿಮ್ಮ ಪಕ್ಷ ದಿವಾಳಿಯಾಗಿದೆಯೇ? ಪ್ರಜಾಪ್ರಭುತ್ವ ವ್ಯವಸ್ಥೆಯಡಿ ನಡೆಯುವ ಚುನಾವಣೆಯಲ್ಲಿ ಮತದಾರರು ಆಯ್ಕೆ ಮಾಡುವುದು ತಮ್ಮ ಸೇವೆ ಮಾಡುವ ಪ್ರತಿನಿಧಿಗಳನ್ನೇ ಹೊರತು, ದೆಹಲಿ ದೊರೆಯ ಸೇವೆ ಮಾಡುವ ಗುಲಾಮರನ್ನಲ್ಲ. ಅಮಿತ್ ಶಾ ಅವರೇ, ಪ್ರಜಾಪ್ರಭುತ್ವ ವ್ಯವಸ್ಥೆಗಷ್ಟೇ ಅಲ್ಲ.. ಸ್ವಾಭಿಮಾನಿ ಕನ್ನಡಿಗರಿಗೂ ನೀವು ಅವಮಾನ ಮಾಡಿದ್ದೀರಿ ಎಂದು ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.

ಇದನ್ನೂ ಓದಿ:ಮೋದಿ, ಅಮಿತ್ ಶಾ ಗಿಂತ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ದೊಡ್ಡ ನಾಯಕರು: ಬಿ ಕೆ ಹರಿಪ್ರಸಾದ್

ಸ್ವಾಭಿಮಾನಿ ಕನ್ನಡಿಗರು ಚುನಾವಣೆಯಲ್ಲಿಯೇ ಉತ್ತರ ನೀಡಲಿದ್ದಾರೆ:ನಮ್ಮ ಬ್ಯಾಂಕುಗಳು, ಬಂದರು, ವಿಮಾನ ನಿಲ್ದಾಣಗಳನ್ನು ಗುಜರಾತಿ ವ್ಯಾಪಾರಿಗಳಿಗೆ ಮಾರಿಬಿಟ್ಟಿರಿ, ನಮ್ಮ ಹೆಮ್ಮೆಯ ನಂದಿನಿಯನ್ನೂ ಕಬಳಿಸಲು ಹೊಂಚು ಹಾಕುತ್ತಿದ್ದೀರಿ. ಈಗ ಇಡೀ ಕರ್ನಾಟಕವನ್ನೇ ಖರೀದಿಸಲು ಹೊರಟಿದ್ದೀರಾ?. ನಿಮ್ಮ ದುರಾಹಂಕಾರದ ಮಾತುಗಳಿಗೆ ರಾಜ್ಯದ ಸ್ವಾಭಿಮಾನಿ ಕನ್ನಡಿಗರು ಚುನಾವಣೆಯಲ್ಲಿಯೇ ಉತ್ತರ ನೀಡಲಿದ್ದಾರೆ. ಕಾದುನೋಡಿ. ಗೋಲ್ವಾಲ್ಕರ್ ಅವರ ‘ಬಂಚ್ ಆಫ್ ಥಾಟ್ಸ್’ ಓದಿದದರಷ್ಟೇ ಸಾಲದು, ಬಾಬಾ ಸಾಹೇಬ್ ಅಂಬೇಡ್ಕರರು ಬರೆದಿರುವ ಸಂವಿಧಾನವನ್ನೂ ಪುರುಸೊತ್ತು ಮಾಡಿಕೊಂಡು ಓದಿ. ದೆಹಲಿಯಲ್ಲಿ ಕುಳಿತು ರಾಜ್ಯವನ್ನು ಆಳಲು ಇದು ರಾಜಪ್ರಭುತ್ವ ಅಲ್ಲ, ಇದು ಪ್ರಜಾಪ್ರಭುತ್ವ ತಿಳಿದಿರಲಿ ಎಂದು ವಿವರಿಸಿದ್ದಾರೆ.

ಕನ್ನಡದ ಕತ್ತು ಹಿಚುಕಿ ಹಿಂದಿ ಹೇರುವ ನಿಮ್ಮ ಕಟುಕತನ, ನಮ್ಮ ಹಿರೀಕರು ಕಟ್ಟಿ ಬೆಳೆಸಿದ ಸಂಪತ್ತನ್ನು ಕಬಳಿಸುವ ನಿಮ್ಮ ವ್ಯಾಪಾರಿ ಬುದ್ದಿ ಮತ್ತು ಇಲ್ಲಿನ ರಾಜಕೀಯ ನಾಯಕತ್ವವನ್ನೇ ನಾಶ ಮಾಡಿ ನಮ್ಮ ಮೇಲೆ ಸವಾರಿ ಮಾಡುವ ನಿಮ್ಮ ಸರ್ವಾಧಿಕಾರಿ ಧೋರಣೆಯನ್ನು ಕನ್ನಡಿಗರು ಈಗ ಚೆನ್ನಾಗಿ ಅರ್ಥಮಾಡಿಕೊಂಡಿದ್ದಾರೆ. ರಾಜ್ಯದ ಬಿಜೆಪಿ ನಾಯಕರು ನಿಮ್ಮ ಆಜ್ಞೆಗೆ ಗೋಣು ಆಡಿಸುವ ಗುಲಾಮರಾಗಿರಬಹುದು. ಆದರೆ ನೆಲ, ಜಲ, ಭಾಷೆಯ ರಕ್ಷಣೆ ಮತ್ತು ಕನ್ನಡತನದ ಅಸ್ಮಿತೆಯ ಪ್ರಶ್ನೆ ಎದುರಾದಾಗ ನಮ್ಮ ಸ್ವಾಭಿಮಾನಿ ಕನ್ನಡಿಗರು ಜಾತಿ, ಧರ್ಮ, ಪಕ್ಷ, ಪಂಥ ಬಿಟ್ಟು ಬೀದಿಗೆ ಇಳಿದು ರಕ್ಷಿಸಿಕೊಳ್ಳುತ್ತಾರೆ. ಕನ್ನಡಿಗರನ್ನು ಕೆಣಕಿದ್ದೀರಿ. ಅನುಭವಿಸುತ್ತೀರಾ. ಕನ್ನಡಿಗರು ಗುಲಾಮರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಇದನ್ನೂ ಓದಿ:ರಾಜ್ಯ ಬಿಜೆಪಿ ಸರ್ಕಾರ ಒಂದೂವರೆ ಲಕ್ಷ ಕೋಟಿ ಲೂಟಿ ಮಾಡಿದೆ: ಪ್ರಿಯಾಂಕಾ ಗಾಂಧಿ ಆರೋಪ

ABOUT THE AUTHOR

...view details