ಬೆಂಗಳೂರು: ಸುಪ್ರೀಂಕೋರ್ಟ್‌ನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಗೆ ಎದುರಾಗಿರುವ ಅಪಾಯದ ಕುರಿತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಸುಪ್ರೀಂಕೋರ್ಟ್ ಇತ್ತೀಚಿನ ಆದೇಶದಿಂದಾಗಿ ಸ್ಥಳೀಯ ಸಂಸ್ಥೆಗಳಲ್ಲಿನ ಹಿಂದುಳಿದ ಜಾತಿಯ ರಾಜಕೀಯ ಮೀಸಲಾತಿಗೆ ಎದುರಾಗುವ ಅಡ್ಡಿಯನ್ನು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸಿರುವ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯ ವರದಿಯಿಂದ ಪರಿಹರಿಸಿಕೊಳ್ಳಲು ಸಾಧ್ಯವಿದೆ. ಮೂರು ಹಂತದ ಪರಿಶೀಲನೆ ನಡೆಸಿ ಹಿಂದುಳಿದ ಜಾತಿಗಳ ರಾಜಕೀಯ ಮೀಸಲಾತಿಯನ್ನು ರೂಪಿಸಬೇಕೆಂದು ಸುಪ್ರೀಂಕೋರ್ಟ್ ಹೇಳಿದೆ. ದೇಶದಲ್ಲಿಯೇ ಮೊದಲ ಬಾರಿ ಮನೆಮನೆಗೆ ತೆರಳಿ ರಾಜ್ಯದಲ್ಲಿ ನಡೆಸಲಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಸುಪ್ರೀಂಕೋರ್ಟ್ ಒಪ್ಪಿಕೊಳ್ಳಬಹುದೆಂಬ ಭರವಸೆ ನನಗಿದೆ ಎಂದಿದ್ದಾರೆ.
ಇದನ್ನೂ ಓದಿ:ವರ್ಷದ ಮೊದಲ ಉಡ್ಡಯನಕ್ಕೆ ಇಸ್ರೋ ಸಿದ್ಧತೆ: ನಾಳೆ 3 ಉಪಗ್ರಹ ಹೊತ್ತು ನಭಕ್ಕೆ ಜಿಗಿಯಲಿದೆ PSLV-C 52
ಹಿರಿಯ ವಕೀಲ ಕಾಂತರಾಜ್ ನೇತೃತ್ವದ ಹಿಂದುಳಿದ ವರ್ಗಗಳ ಆಯೋಗದ ಕಾರ್ಯವ್ಯಾಪ್ತಿಯಲ್ಲಿ ರಾಜಕೀಯ ಕ್ಷೇತ್ರ ಸೇರಿಲ್ಲದೆ ಇದ್ದರೂ ಅದು ರಾಜ್ಯದ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ಮಾಹಿತಿಯನ್ನು ಕೂಡ ಸಂಗ್ರಹಿಸಿದೆ. ರಾಜ್ಯ ಸರ್ಕಾರ ಈ ಅಂಶವನ್ನು ಗಮನಕ್ಕೆ ತಂದರೆ ಸುಪ್ರೀಂಕೋರ್ಟ್ ಗಣನೆಗೆ ತೆಗೆದುಕೊಳ್ಳಬಹುದು. ರಾಜ್ಯದ ಬಿಜೆಪಿ ಸರ್ಕಾರ ಕಾಲ ವ್ಯಯ ಮಾಡದೇ, ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸಮೀಕ್ಷೆಯನ್ನು ತಕ್ಷಣ ಒಪ್ಪಿಕೊಂಡು ಜಾರಿಗೆ ತರಬೇಕು. ಇದೇ ವರದಿಯನ್ನು ಮುಂದಿಟ್ಟುಕೊಂಡು ಸುಪ್ರೀಂಕೋರ್ಟ್ ಮುಂದೆ ತನ್ನ ವಾದ ಮಂಡಿಸಿ ಹಿಂದುಳಿದ ಜಾತಿಗಳಿಗೆ ಆಗಲಿರುವ ಅನ್ಯಾಯವನ್ನು ತಪ್ಪಿಸಬೇಕು ಎಂದಿದ್ದಾರೆ.
ನಾನು ಮುಖ್ಯಮಂತ್ರಿಯಾಗಿದ್ದಾಗಲೇ ಹಿಂದುಳಿದ ವರ್ಗಗಳ ಶಾಶ್ವತ ಆಯೋಗದ ಮೂಲಕ ಮನೆ ಮನೆಗೆ ಹೋಗಿ ರಾಜ್ಯದ ಜನತೆಯ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆ ನಡೆಸಿದ್ದೆ. ಇದರಲ್ಲಿ ಎಲ್ಲ ಜಾತಿ ಜನರ ರಾಜಕೀಯ ಪ್ರಾತಿನಿಧ್ಯದ ನಿಖರವಾದ ಮಾಹಿತಿ ಇರುವುದರಿಂದ ಬೇರೆ ರಾಜ್ಯಗಳಂತೆ ಪ್ರತ್ಯೇಕ ಸಮೀಕ್ಷೆ ನಡೆಸುವ ಅಗತ್ಯ ಇರಲಾರದು. 2010ರಲ್ಲಿಯೇ ಸುಪ್ರೀಂಕೋರ್ಟ್ ರಾಜಕೀಯ ಮೀಸಲಾತಿಗೆ ಪ್ರತ್ಯೇಕ ಮಾನದಂಡ ರೂಪಿಸುವಂತೆ ಆದೇಶಿಸಿತ್ತು. ಆ ಆದೇಶವನ್ನು ಪರಿಶೀಲಿಸಲು ನಾನು ಮುಖ್ಯಮಂತ್ರಿಯಾಗಿದ್ದಾಗ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಿದ್ದೆ. ಅದೇ ಸಮಿತಿಯನ್ನು ಪುನರ್ ರಚಿಸಿ ಈಗಿನ ಬಿಕ್ಕಟ್ಟಿನ ಪರಿಹಾರಕ್ಕೆ ಪ್ರಯತ್ನಿಸಬೇಕು.